

ಮುಲ್ಲನ್ ಪುರ: ಅಫ್ಘಾನಿಸ್ತಾನ ವಿರುದ್ಧ ಮುಲ್ಲನ್‌ಪುರದಲ್ಲಿ ನಡೆದ ಏಕೈಕ ಟೆಸ್ಟ್ ಪಂದ್ಯದಲ್ಲಿ ಉದಯೋನ್ಮುಖ ತಾರೆ ಮಾನವ್ ಸುತಾರ್ (Manav Suthar) ಕನಸಿನ ಆರಂಭ ಪಡೆದಿದ್ದಾರೆ.
ಎಡಗೈ ಆರ್ಥಡಾಕ್ಸ್ ಸ್ಪಿನ್ನರ್ ಮಾನವ್ ಸುತಾರ್ ತಮ್ಮ ಪದಾರ್ಪಣೆ ಪಂದ್ಯದಲ್ಲೇ ಭರ್ಜರಿ ಪ್ರದರ್ಶನ ನೀಡಿ ಭಾರತೀಯ ಕ್ರಿಕೆಟ್‌ಗೆ ಹೊಸ ಸ್ಪಿನ್ ತಾರೆ ಸಿಕ್ಕಿರುವ ವಿಶ್ವಾಸ ಮೂಡಿಸಿದ್ದಾರೆ.
23 ವರ್ಷದ ರಾಜಸ್ಥಾನದ ಶ್ರೀಗಂಗಾನಗರ ಮೂಲದ ಈ ಯುವ ಬೌಲರ್ ಇಂದಿನ ಪಂದ್ಯದಲ್ಲಿ ಭಾರತದ ಇನ್ನಿಂಗ್ಸ್ ಹಾಗೂ 300 ರನ್‌ಗಳ ಐತಿಹಾಸಿಕ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿ, ಪಂದ್ಯದಲ್ಲಿ ಒಟ್ಟು ಏಳು ವಿಕೆಟ್‌ಗಳನ್ನು ಪಡೆದು ಕ್ರಿಕೆಟ್ ಅಭಿಮಾನಿಗಳು ಮತ್ತು ತಜ್ಞರ ಮೆಚ್ಚುಗೆಗೆ ಪಾತ್ರರಾದರು.
Manav Suthar ಟ್ರಂಪ್ ಕಾರ್ಡ್!
ಈ ಪಂದ್ಯದಲ್ಲಿ ಭಾರತದ ಪಾಲಿನ ಅತಿದೊಡ್ಡ ಲಾಭವೆಂದರೆ ಎಡಗೈ ಸ್ಪಿನ್ನರ್ ಮನವ್ ಸುತಾರ್ ಅವರ ರೈಸಿಂಗ್. ಭವಿಷ್ಯದಲ್ಲಿ ಭಾರತದ ಸ್ಪಿನ್ ದಾಳಿಗೆ ನಾಯಕತ್ವ ವಹಿಸುವ ಸಾಮರ್ಥ್ಯವನ್ನು ಅವರು ಈ ಪಂದ್ಯದಲ್ಲಿ ಪ್ರದರ್ಶಿಸಿದರು.
ಮೊದಲು ಬ್ಯಾಟಿಂಗ್ ನಡೆಸಿದ ಭಾರತ 564 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದ ಬಳಿಕ, ಅಫ್ಘಾನಿಸ್ತಾನದ ಬ್ಯಾಟಿಂಗ್ ಸರಣಿಗೆ ಸುತಾರ್ ಅವರ ಬೌಲಿಂಗ್ ದೊಡ್ಡ ಸವಾಲಾಗಿ ಪರಿಣಮಿಸಿತು.
ಅವರು ಮಧ್ಯಮ ಮತ್ತು ಕೆಳ ಕ್ರಮಾಂಕದ ಬ್ಯಾಟರ್‌ಗಳನ್ನು ಧ್ವಂಸಗೊಳಿಸಿ, 22 ಓವರ್‌ಗಳಲ್ಲಿ 10 ಮೇಡನ್ ಸಹಿತ ಕೇವಲ 33 ರನ್ ನೀಡಿ 6 ವಿಕೆಟ್‌ಗಳನ್ನು ಕಬಳಿಸಿದರು. ಪರಿಣಾಮ ಅಫ್ಘಾನಿಸ್ತಾನ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 152 ರನ್‌ಗಳಿಗೆ ಆಲೌಟ್ ಆಯಿತು.
ಭಾರತ ಫಾಲೋಆನ್ ನೀಡಿದ ನಂತರ ಎರಡನೇ ಇನ್ನಿಂಗ್ಸ್‌ನಲ್ಲಿ ವಾಷಿಂಗ್ಟನ್ ಸುಂದರ್ ಮತ್ತು ಕುಲದೀಪ್ ಯಾದವ್ ಹೆಚ್ಚಿನ ವಿಕೆಟ್‌ಗಳನ್ನು ಪಡೆದರೂ, ಸುತಾರ್ ಮತ್ತೊಂದು ವಿಕೆಟ್ ಪಡೆದು ಪಂದ್ಯದಲ್ಲಿ ಒಟ್ಟು 7 ವಿಕೆಟ್‌ಗಳೊಂದಿಗೆ (6/33 ಮತ್ತು 1/29) ತಮ್ಮ ಚೊಚ್ಚಲ ಟೆಸ್ಟ್ ಅನ್ನು ಸ್ಮರಣೀಯವಾಗಿಸಿಕೊಂಡರು.
ಫಾಲೋಆನ್ ನಂತರವೂ ಅಫ್ಘಾನ್ ಬ್ಯಾಟರ್‌ಗಳು ಭಾರತೀಯ ಬೌಲರ್‌ಗಳ ಮುಂದೆ ಸಂಪೂರ್ಣ ಶರಣಾದರು. ಸುತಾರ್ 33 ರನ್ ನೀಡಿ 6 ವಿಕೆಟ್ ಕಬಳಿಸಿ ತಂಡವನ್ನು ಸಂಕಷ್ಟಕ್ಕೆ ತಳ್ಳಿದರು. ಮೂರನೇ ದಿನದ ಮಧ್ಯಾಹ್ನದ ವೇಳೆಗೆ ಕೇವಲ 35.5 ಓವರ್‌ಗಳಲ್ಲಿ 112 ರನ್‌ಗಳಿಗೆ ಆಲೌಟ್ ಆಗಿ ಭಾರತ ಐತಿಹಾಸಿಕ ಜಯ ಸಾಧಿಸಿತು.
ಪದಾರ್ಪಣೆ ಪಂದ್ಯದಲ್ಲೇ ಮಾನವ್ ಸುತಾರ್ ದಾಖಲೆ
ಸುತಾರ್ ತಮ್ಮ ಮೊದಲ ಟೆಸ್ಟ್ ಪಂದ್ಯದಲ್ಲೇ ಒಟ್ಟು 7 ವಿಕೆಟ್‌ಗಳನ್ನು (6/33 ಮತ್ತು 1/29) ಪಡೆದು ಗಮನ ಸೆಳೆದರು. ಈ ಆರು ವಿಕೆಟ್ ಸಾಧನೆಯ ಮೂಲಕ ಮನವ್ ಸುಥಾರ್ ಟೆಸ್ಟ್ ಪದಾರ್ಪಣೆಯಲ್ಲೇ ಐದು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಭಾರತದ 10ನೇ ಬೌಲರ್ ಎಂಬ ದಾಖಲೆಗೆ ಪಾತ್ರರಾದರು. ಜೊತೆಗೆ, ಚೊಚ್ಚಲ ಟೆಸ್ಟ್‌ನಲ್ಲೇ ಈ ಸಾಧನೆ ಮಾಡಿದ ಭಾರತದ ಏಳನೇ ಸ್ಪಿನ್ನರ್ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡರು.
ಅಶ್ವಿನ್ ಅನುಪಸ್ಥಿತಿಯಲ್ಲಿ ಹೊಸ ಭರವಸೆ
ಮಾನವ್ ಸುತಾರ್ ಅವರ ಪ್ರದರ್ಶನ ಭಾರತೀಯ ಕ್ರಿಕೆಟ್ ವಲಯದಲ್ಲಿ ಹೊಸ ಉತ್ಸಾಹ ಮೂಡಿಸಿದೆ. ರವಿಚಂದ್ರನ್ ಅಶ್ವಿನ್ ಈಗಾಗಲೇ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದು, ರವೀಂದ್ರ ಜಡೇಜಾ ಕೂಡ ತಮ್ಮ ವೃತ್ತಿಜೀವನದ ಅಂತಿಮ ಹಂತದಲ್ಲಿರುವ ಈ ಸಂದರ್ಭದಲ್ಲಿ ಸುತಾರ್ ಅವರ ಉದಯ ಭಾರತಕ್ಕೆ ಭವಿಷ್ಯದ ಸ್ಪಿನ್ ವಿಭಾಗದಲ್ಲಿ ದೊಡ್ಡ ಬಲವಾಗಿ ಪರಿಣಮಿಸಿದೆ.
ಕ್ರಿಕೆಟ್ ತಜ್ಞರ ಅಭಿಪ್ರಾಯದಲ್ಲಿ, ಸುತಾರ್ ಅವರಲ್ಲಿ ದೀರ್ಘಕಾಲ ಅಂತರರಾಷ್ಟ್ರೀಯ ಮಟ್ಟದಲ್ಲಿ ಯಶಸ್ವಿಯಾಗಲು ಬೇಕಾದ ಎಲ್ಲಾ ಗುಣಗಳಿವೆ. ಒಂದೇ ಜಾಗದಲ್ಲಿ ನಿರಂತರವಾಗಿ ಚೆಂಡು ಎಸೆಯುವ ಸಾಮರ್ಥ್ಯ, ಉತ್ತಮ ವೇಗದಲ್ಲಿ ಬೌಲಿಂಗ್ ಮಾಡುವುದು ಹಾಗೂ ಚೆಂಡಿಗೆ ಹೆಚ್ಚು ತಿರುವು ನೀಡುವ ಕೌಶಲ್ಯ ಅವರನ್ನು ಸಂಪೂರ್ಣ ಸ್ಪಿನ್ನರ್ ಆಗಿ ರೂಪಿಸಿದೆ.
ಬಹುತೇಕ ಯುವ ಸ್ಪಿನ್ನರ್‌ಗಳು ತಿರುಗುವ ಪಿಚ್‌ಗಳ ಮೇಲೆ ಅವಲಂಬಿತರಾಗಿದ್ದರೆ, ಸುತಾರ್ ಸಮತಟ್ಟಾದ ಪಿಚ್‌ಗಳಲ್ಲಿಯೂ ಟರ್ನ್ ಮತ್ತು ಬೌನ್ಸ್ ಪಡೆಯುವ ಮೂಲಕ ಪಂದ್ಯವನ್ನು ಗೆಲ್ಲಿಸಬಲ್ಲ ಬೌಲರ್ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಜಡೇಜಾ ಉತ್ತರಾಧಿಕಾರಿ?
ಮುಖ್ಯವಾಗಿ, ಭಾರತೀಯ ಕ್ರಿಕೆಟ್ ವಲಯದಲ್ಲಿ ಬಹುಕಾಲದಿಂದ ಕೇಳಿಬರುತ್ತಿದ್ದ "ರವೀಂದ್ರ ಜಡೇಜಾ ನಂತರ ಭಾರತದ ಸ್ಪಿನ್ ದಾಳಿಯನ್ನು ಮುನ್ನಡೆಸುವವರು ಯಾರು?" ಎಂಬ ಪ್ರಶ್ನೆಗೆ ಸುತಾರ್ ಉತ್ತರ ನೀಡಿದಂತಾಯಿತು. ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಸುತಾರ್ ಅತ್ಯುನ್ನತ ಮಟ್ಟದಲ್ಲಿ ಯಶಸ್ವಿಯಾಗಲು ಬೇಕಾದ ಎಲ್ಲ ಗುಣಗಳನ್ನು ಪ್ರದರ್ಶಿಸಿದರು.
ವಿಶೇಷವಾಗಿ ಒಂದೇ ಜಾಗದಲ್ಲಿ ನಿರಂತರವಾಗಿ ಚೆಂಡು ಎಸೆಯುವ ಅವರ ಸಾಮರ್ಥ್ಯ ಎಲ್ಲರ ಗಮನ ಸೆಳೆಯಿತು. ರವಿಚಂದ್ರನ್ ಅಶ್ವಿನ್ ಈಗಾಗಲೇ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದು, ರವೀಂದ್ರ ಜಡೇಜಾ ಕೂಡ ತಮ್ಮ ವೃತ್ತಿಜೀವನದ ಅಂತಿಮ ಹಂತದಲ್ಲಿದ್ದಾರೆ. ಇಂತಹ ಸಮಯದಲ್ಲಿ ಸುಥಾರ್ ಅವರ ಉದಯ ಭಾರತೀಯ ತಂಡಕ್ಕೆ ದೊಡ್ಡ ಬಲವಾಗಿ ಪರಿಣಮಿಸಿದೆ.
ಐತಿಹಾಸಿಕ ಗೆಲುವಿಗೆ ಸಾಕ್ಷಿಯಾಗಿದ್ದು ಕೇವಲ 500 ಮಂದಿ ಪ್ರೇಕ್ಷಕರು
ಸೋಮವಾರ ಬೆಳಿಗ್ಗೆ ಭಾರತದ ಹೊಸ ಸ್ಪಿನ್ ತಾರೆಯಾದ ಮಾನವ್ ಸುತಾರ್ ತಮ್ಮ ಪದಾರ್ಪಣೆಯ ಪಂದ್ಯದಲ್ಲೇ ಐದು ವಿಕೆಟ್ ಸಾಧನೆ ಮಾಡಿದ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಕ್ರೀಡಾಂಗಣದಲ್ಲಿ ಕೇವಲ 500ಕ್ಕೂ ಕಡಿಮೆ ಪ್ರೇಕ್ಷಕರು ಮಾತ್ರ ಇದ್ದದ್ದು ಮಾತ್ರ ಬೇಸರದ ಸಂಗತಿಯಾಗಿತ್ತು.
ಮುಂದಿದೆ ಸವಾಲುಗಳು
ಮುಂದಿನ ದಿನಗಳಲ್ಲಿ ಶ್ರೀಲಂಕಾ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ಸುಥಾರ್ ಗೆ ಇನ್ನಷ್ಟು ಕಠಿಣ ಸವಾಲು ಎದುರಾಗಲಿದೆ. ಅಲ್ಲಿ ಬ್ಯಾಟಿಂಗ್ ಗುಣಮಟ್ಟ ಉತ್ತಮವಾಗಿರುವ ಕಾರಣ ಅವರ ನಿಜವಾದ ಪರೀಕ್ಷೆ ನಡೆಯಲಿದೆ. ಈ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಚಕ್ರದ ಅಂತ್ಯದ ವೇಳೆಗೆ ಜಡೇಜಾ ಬದಲಿಗೆ ಸುಥಾರ್ ಅವರನ್ನು ನಿಧಾನವಾಗಿ ಪ್ರಮುಖ ಸ್ಪಿನ್ನರ್ ಆಗಿ ರೂಪಿಸಲು ಭಾರತ ತಂಡದ ಆಡಳಿತ ಮಂಡಳಿ ಯೋಚಿಸಬಹುದು.
Advertisement