

ಧರ್ಮಶಾಲಾ: ಆಫ್ಘಾನಿಸ್ತಾನ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಗೆಲುವಿಗೆ ಕಾರಣರಾದ ನಾಯಕ ಶುಭ್ ಮನ್ ಗಿಲ್ ಮಹತ್ವದ ಮೈಲುಗಲ್ಲು ಸಾಧಿಸಿದ್ದಾರೆ.
ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆಫ್ಘಾನಿಸ್ತಾನ ನೀಡಿದ್ದ 195 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡ 22.5 ನಲ್ಲಿ 3 ವಿಕೆಟ್ ಕಳೆದುಕೊಂಡು 195 ರನ್ ಗಳಿಸಿ 7 ವಿಕೆಟ್ ಅಂತರದ ಭರ್ಜರಿ ಜಯ ಸಾಧಿಸಿತು.
ಭಾರತದ ಪರ ನಾಯಕ ಶುಭ್ ಮನ್ ಗಿಲ್ ಕೇವಲ 66 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 11 ಬೌಂಡರಿಗಳ ನೆರವಿನಿಂದ ಅಜೇಯ 84 ರನ್ ಕಲೆಹಾಕಿ ಗೆಲುವಿನ ರೂವಾರಿಯಾದರು. ಅವರಿಗೆ ಇಶಾನ್ ಕಿಶನ್ (34) ಕೆಎಲ್ ರಾಹುಲ್ (ಅಜೇಯ 39) ಉತ್ತಮ ಸಾಥ್ ನೀಡಿದರು.
ಗಿಲ್ ಮಹತ್ವದ ಮೈಲುಗಲ್ಲು
ಈ ಪಂದ್ಯದಲ್ಲಿನ ಸ್ಫೋಟಕ ಬ್ಯಾಟಿಂಗ್ ಮೂಲಕ ಗಿಲ್ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದು, ಏಕದಿನ ಕ್ರಿಕೆಟ್ ನಲ್ಲಿ 3 ಸಾವಿರ ರನ್ ಗಳಿಸಿದ ಆಟಗಾರ ಎಂಬ ಕೀರ್ತಿಗೆ ಭಾಜನರಾದರು. ಇಂದಿನ ಇನ್ನಿಂಗ್ಸ್ ನಲ್ಲಿ ಗಳಿಸಿದ ಅಜೇಯ 84 ರನ್ ಗಳು ಸೇರಿದಂತೆ ಗಿಲ್ ಏಕದಿನ ಕ್ರಿಕೆಟ್ ನಲ್ಲಿನ ತಮ್ಮ ರನ್ ಗಳಿಕೆಯನ್ನು 3,037ಕ್ಕೆ ಏರಿಕೆ ಮಾಡಿಕೊಂಡರು.
ಕೊಹ್ಲಿ, ಧವನ್ ರೆಕಾರ್ಡ್ ಪತನ
ಅಂತೆಯೇ ಭಾರತದ ಯುವ ನಾಯಕ ಹಾಗೂ ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ತಮ್ಮ ಇಂದಿನ ಅಮೋಘ ಇನ್ನಿಂಗ್ಸ್ ಮೂಲಕ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದು, ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 3,000 ರನ್‌ಗಳನ್ನು ಪೂರೈಸಿದ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಅವರು ಭಾರತದ ಇಬ್ಬರು ಶ್ರೇಷ್ಠ ಬ್ಯಾಟರ್‌ಗಳಾದ ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಅವರ ದಾಖಲೆಗಳನ್ನು ಹಿಂದಿಕ್ಕಿದರು.
ಗಿಲ್ ಕೇವಲ 62 ಇನ್ನಿಂಗ್ಸ್‌ಗಳಲ್ಲಿ 3,000 ಏಕದಿನ ರನ್‌ಗಳ ಗಡಿ ದಾಟಿದ್ದು, ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವೇಗದ ಸಾಧನೆ ಎನಿಸಿದೆ. ಇದಕ್ಕೂ ಮುನ್ನ ಈ ದಾಖಲೆ ಶಿಖರ್ ಧವನ್ ಹೆಸರಿನಲ್ಲಿದ್ದು, ಅವರು 72 ಇನ್ನಿಂಗ್ಸ್‌ಗಳಲ್ಲಿ 3,000 ರನ್ ಪೂರೈಸಿದ್ದರು. ವಿರಾಟ್ ಕೊಹ್ಲಿ ಈ ಸಾಧನೆಗೆ 75 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದರು.
ದಿಗ್ಗಜರ ಸಾಲಿನಲ್ಲಿ ಸ್ಥಾನ
3,000 ರನ್‌ಗಳನ್ನು ಕೇವಲ 62 ಇನ್ನಿಂಗ್ಸ್‌ಗಳಲ್ಲಿ ತಲುಪಿರುವುದು ಗಿಲ್ ಅವರ ಪ್ರತಿಭೆ ಮತ್ತು ನಿರಂತರತೆಯ ಪ್ರತೀಕವಾಗಿದೆ. ಈ ಸಾಧನೆಯ ಮೂಲಕ ಅವರು ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಬ್ಯಾಟರ್‌ಗಳ ಪಟ್ಟಿಯಲ್ಲಿ ತಮ್ಮ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಾರೆ.
ವಿರಾಟ್ ಕೊಹ್ಲಿ, ಶಿಖರ್ ಧವನ್ ಸೇರಿದಂತೆ ಹಲವು ದಿಗ್ಗಜರ ದಾಖಲೆಗಳನ್ನು ಹಿಂದಿಕ್ಕಿರುವ ಗಿಲ್, ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಮೈಲಿಗಲ್ಲುಗಳನ್ನು ತಲುಪುವ ಸಾಮರ್ಥ್ಯ ಹೊಂದಿದ್ದಾರೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
Advertisement