

ನವದೆಹಲಿ: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಕಾರ್ಯದರ್ಶಿಯಾದ ಸಂತೋಷ್ ಮೆನನ್ ಅವರು ತಕ್ಷಣದಿಂದಲೇ ತಮ್ಮ ಹುದ್ದೆಯಲ್ಲಿ ಮುಂದುವರಿಯಲು ಅನರ್ಹರಾಗಿದ್ದು, ಕೂಡಲೇ ತಮ್ಮ ಹುದ್ದೆಯನ್ನು ತೆರವುಗೊಳಿಸಬೇಕು ಎಂದು ಬಿಸಿಸಿಐ (BCCI) ಒಂಬುಡ್ಸ್‌ಮನ್ ಮಹತ್ವದ ತೀರ್ಪು ನೀಡಿದೆ.
ಈ ಸಂಬಂಧ ಕೆಎಸ್ ಸಿಎ ಸಾಂಸ್ಥಿಕ ಸದಸ್ಯತ್ವ ಹೊಂದಿರುವ ಡಾಲ್ಫಿನ್ ಕ್ರಿಕೆಟರ್ಸ್ ಸಲ್ಲಿಸಿದ್ದ ದೂರನ್ನು ಪರಿಶೀಲಿಸಿದ ನಂತರ ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರು ಈ ಆದೇಶ ಪ್ರಕಟಿಸಿದ್ದಾರೆ. ನಿಯಮಾನುಸಾರ ಮೆನನ್ 9 ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ್ದಾರೆ ಎಂದು ಒಂಬುಡ್ಸ್‌ಮನ್ ತೀರ್ಪಿನಲ್ಲಿ ಹೇಳಿದೆ.
ಸಂತೋಷ್ ಮೆನನ್ ಅವರು ಡಿಸೆಂಬರ್ 2013 ರಿಂದ ಡಿಸೆಂಬರ್ 2019 ರವರೆಗೆ ಕೆಎಸ್‌ಸಿಎ ಮ್ಯಾನೇಜಿಂಗ್ ಕಮಿಟಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ತದನಂತರ ಡಿಸೆಂಬರ್ 2019 ರಿಂದ ನವೆಂಬರ್ 2022 ರವರೆಗೆ ಮೊದಲ ಅವಧಿಗೆ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.
ಅಂತಿಮವಾಗಿ ಡಿಸೆಂಬರ್ 7,2025 ರಂದು ನಡೆದ ಚುನಾವಣೆಯಲ್ಲಿ ಅವರು ಮತ್ತೊಮ್ಮೆ ಕೆಎಸ್‌ಸಿಎ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು. ಅವರು ಈ ಹುದ್ದೆಗೆ ಆಯ್ಕೆಯಾದಾಗ ಗರಿಷ್ಠ ಅವಧಿ ನಿಯಮ ಪೂರ್ಣಗೊಳ್ಳಲು ಕೇವಲ 9 ದಿನಗಳಷ್ಟೇ ಬಾಕಿ ಇತ್ತು ಎಂದು ದೂರುದಾರರು ವಾದಿಸಿದರು.
ಸಂತೋಷನ್ ಮೆನನ್ ವ್ಯವಸ್ಥಾಪಕ ಸಮಿತಿ ಸದಸ್ಯರಾಗಿ ಮತ್ತು ಪದಾಧಿಕಾರಿಯಾಗಿ 9 ವರ್ಷಗಳ ಸಂಚಿತ ಅವಧಿಯನ್ನು ಪೂರ್ಣಗೊಳಿಸಿದ್ದಾರೆ ಎಂಬ ದೂರುದಾರರ ವಾದವನ್ನು ಒಪ್ಪಿಕೊಂಡಿರುವುದಾಗಿ ಒಂಬುಡ್ಸ್‌ಮನ್ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಕೆಎಸ್ ಸಿಎ ಪ್ರತಿಕ್ರಿಯೆ: ಬಿಸಿಸಿಐ ಒಂಬುಡ್ಸ್ ಮನ್ ಮಾಡಿರುವ ಆದೇಶವನ್ನು ನಾವು ಗಮನಿಸಿದ್ದೇವೆ. ಅದನ್ನು ವಿವರವಾಗಿ ಪರಿಶೀಲಿಸುತ್ತಿದ್ದೇವೆ. ಕಾನೂನಿನ ಅಡಿಯಲ್ಲಿ ಲಭ್ಯವಿರುವ ಎಲ್ಲಾ ಪರಿಹಾರಗಳು ಮತ್ತು ಆಯ್ಕೆಗಳನ್ನು ಮೌಲ್ಯಮಾಪನ ಮಾಡಲು ಸೂಕ್ತ ಕಾನೂನು ಸಲಹೆಗಳನ್ನು ಕೋರುತ್ತಿದ್ದೇವೆ ಎಂದು ಕೆಎಸ್ ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೆಎಸ್ ಸಿಎ ಒಂಬುಡ್ಸ್ ಮನ್ ಆಗಿರುವ ನಿವೃತ್ತ ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಅವರು ಫೆಬ್ರವರಿ 5, 2026 ರಂದು ಹೊರಡಿಸಿದ ಹಿಂದಿನ ಆದೇಶವನ್ನು KSCA ಉಲ್ಲೇಖಿಸಿದೆ. ಇದು KSCA ನಿಯಮಾವಳಿ ಅಡಿಯಲ್ಲಿ ಎಲ್ಲಾ ಸದಸ್ಯರಿಗೂ ಅನ್ವಯವಾಗುತ್ತದೆ. ಆದರೆ BCCIಒಂಬುಡ್ಸ್‌ಮನ್ ವಿರುದ್ಧವಾದ ದೃಷ್ಟಿಕೋನ ಹೊಂದಿದ್ದಾರೆ. ಈ ಎರಡು ಆದೇಶಗಳ ಕಾನೂನು ಪರಿಣಾಮಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.