

ಮುಂಬೈ: ಐಸಿಸಿ ಟಿ20 ವಿಶ್ವಕಪ್ 2026 ಟೂರ್ನಿಯಲ್ಲಿ 2ನೇ ಸೆಮಿ ಫೈನಲ್ ನಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ಫೈನಲ್ ಗೆ ಲಗ್ಗೆ ಇಟ್ಟ ಭಾರತ ಇದರೊಂದಿಗೆ ಅಪರೂಪದ ದಾಖಲೆ ಬರೆದಿದ್ದು ಮಾತ್ರವಲ್ಲದೇ ಎಲೈಟ್ ಗ್ರೂಪ್ ಗೆ ಸೇರ್ಪಡೆಯಾಗಿದೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಭಾರತ-ಇಂಗ್ಲೆಂಡ್ ನಡುವಿನ 2ನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ 7 ರನ್ ಗಳ ವಿರೋಚಿತ ಗೆಲುವು ಸಾಧಿಸಿತು.
ಭಾರತ ನೀಡಿದ್ದ 254 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ್ದ ಇಂಗ್ಲೆಂಡ್ ತಂಡ ಜೇಕಬ್ ಬೆಥಲ್ ಅವರ ಅಮೋಘ ಶತಕದ ನೆರವಿನಿಂದ ಗೆಲುನಂಚಿಗೆ ಬಂದು ತಲುಪಿತ್ತು. ಆದರೆ ಭಾರತದ ಅನುಭವಿ ಬೌಲರ್ ಗಳ ಕರಾರುವಕ್ಕಾದ ಬೌಲಿಂಗ್ ದಾಳಿ ನೆರವಿನಿಂದ ಭಾರತ ಸೋಲಿನಿಂದ ಪಾರಾಯಿತು.
ಇನ್ನು ಈ ಪಂದ್ಯ ಸಿಡಿಲಬ್ಬರದ ಬ್ಯಾಟಿಂಗ್ ಗೆ ವೇದಿಕೆಯಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ನಿಗಧಿತ 20 ಓವರ್ ನಲ್ಲಿ ಸಂಜು ಸ್ಯಾಮ್ಸನ್ ಅರ್ಧಶತಕ (89 ರನ್)ದ ನೆರವಿನಿಂದ 253 ರನ್ ಪೇರಿಸಿತು.
ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ ತಂಡ ಕೂಡ ನಿಗಧಿತ 20 ಓವರ್ ನಲ್ಲಿ ಜೇಕಬ್ ಬೆಥೆಲ್ ಸ್ಫೋಟಕ ಶತಕದ ನೆರವಿನಿಂದ 246 ರನ್ ಗಳಿಸಿ ಕೇವಲ 7 ರನ್ ಅಂತರದಲ್ಲಿ ವಿರೋಚಿತ ಸೋಲು ಕಂಡಿತು. ಆ ಮೂಲಕ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಸತತ 2ನೇ ಬಾರಿಗೆ ಫೈನಲ್ ಗೇರಿತು.
ಸತತ 2ನೇ ಬಾರಿಗೆ ಫೈನಲ್ ಗೇರಿದ 3ನೇ ತಂಡ
2ನೇ ಸೆಮಿ ಫೈನಲ್ ನಲ್ಲಿ ಇಂಗ್ಲೆಂಡ್ ತಂಡವನ್ನು 7 ರನ್ ಗಳ ಅಂತರದಲ್ಲಿ ಮಣಿಸಿದ ಭಾರತ ಆ ಮೂಲಕ ಸತತ 2ನೇ ಬಾರಿಗೆ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಫೈನಲ್ ಗೇರಿದ 3ನೇ ತಂಡ ಎಂಬ ಕೀರ್ತಿಗೆ ಭಾಜನವಾಯಿತು. ಇದಕ್ಕೂ ಮೊದಲು ಪಾಕಿಸ್ತಾನ 2007 ಮತ್ತು 2009ರಲ್ಲಿ ಈ ಸಾಧನೆ ಮಾಡಿತ್ತು. ಬಳಿಕ 2012ರಲ್ಲಿ ಮತ್ತು 2014ರಲ್ಲಿ ಶ್ರೀಲಂಕಾ ತಂಡ ಕೂಡ ಈ ಸಾಧನೆ ಮಾಡಿತ್ತು.
ಇದೀಗ ಭಾರತ ಕೂಡ ಈ ಸಾಧನೆ ಮಾಡಿದೆ. 2024ರಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ಚಾಂಪಿಯನ್ ಆಗಿದ್ದ ಭಾರತ ಇದೀಗ 2026ರಲ್ಲಿ ಮತ್ತೆ ಫೈನಲ್ ಗೇರಿದೆ.
Team playing in consecutive T20 WC finals
Pakistan - 2007 and 2009
Sri Lanka - 2012 and 2014
India - 2024 and 2026
Advertisement