

ಢಾಕಾ: ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಏಕದಿನ ಪಂದ್ಯದಲ್ಲಿ ಪಾಕಿಸ್ತಾನದ ಮಾಜಿ ನಾಯಕ ಸಲ್ಮಾನ್ ಅಲಿ ಅಘಾ ವಿಚಿತ್ರ ರೀತಿಯಲ್ಲಿ ರನೌಟ್ ಆಗಿ ನೆಗಪಾಟಲಿಗೀಡಾಗಿದ್ದಾರೆ.
ಹೌದು.. ಢಾಕಾದ ಶೇರ್ ಇ ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನದ ಬ್ಯಾಟರ್ ಸಲ್ಮಾನ್ ಅಲಿ ಅಘಾ ವಿಚಿತ್ರವಾಗಿ ಔಟ್ ಆಗಿದ್ದಾರೆ. ತಮ್ಮದೇ ಪ್ರಮಾದದಿಂದಾಗಿ ಸಲ್ಮಾನ್ ಅಲಿ ಅಘಾ ಔಟಾಗಿದ್ದು, ಔಟಾದ ಬಳಿಕ ಕೆರಳಿ ಕೆಂಡವಾಗಿ ಬೌಲರ್ ವಿರುದ್ಧ ಕಿಡಿಕಾರಿದ್ದಾರೆ.
ಪಾಕಿಸ್ತಾನದ ಇನ್ನಿಂಗ್ಸ್‌ನ 39 ನೇ ಓವರ್ ನಲ್ಲಿ ಬಾಂಗ್ಲಾದೇಶದ ಬೌಲರ್ ಮೆಹದಿ ಹಸನ್ ಎಸೆದ ನಾಲ್ಕನೇ ಚೆಂಡನ್ನು ರಿಜ್ವಾನ್ ನೇರವಾಗಿ ಬೌಲರ್ ಕಡೆಗೆ ಆಡಿದರು.
ಇತ್ತ ನಾನ್-ಸ್ಟ್ರೈಕರ್ ತುದಿಯಲ್ಲಿ ನಿಂತಿದ್ದ ಸಲ್ಮಾನ್ ಆಘಾ ರನ್ಗಾಗಿ ತಮ್ಮ ಕ್ರೀಸ್‌ನಿಂದ ಹೊರಬಂದರಾದರೂ ಅಲ್ಲಿ ರನ್ ಇಲ್ಲದಿರುವುದನ್ನು ಗಮನಿಸಿ ಅಲ್ಲಿಯೇ ನಿಂತರು. ಅಷ್ಟರಲ್ಲಿ ರಿಜ್ವಾನ್ ಬಾರಿಸಿದ ಚೆಂಡು ಕೂಡ ಆಘಾ ಕಡೆಗೆ ಬಂತು. ಹೀಗಾಗಿ ಆಘಾ ಚೆಂಡನ್ನು ಹಿಡಿದು ಬೌಲರ್ ಮೆಹದಿ ಹಸನ್ಗೆ ರವಾನಿಸಲು ಪ್ರಯತ್ನಿಸಿದರು.
ಈ ಹಂತದಲ್ಲಿ ಚಾಣಾಕ್ಷತೆ ತೋರಿದ ಮೆಹದಿ ಹಸನ್ ತಾವೇ ಚೆಂಡನ್ನು ಎತ್ತಿಕೊಂಡು ನೇರವಾಗಿ ಸ್ಟಂಪ್ಗೆ ಎಸೆದರು. ಇದೆಲ್ಲ ನಡೆಯುವಾಗ ಕ್ರೀಸ್‌ನಿಂದ ಹೊರಗೆ ನಿಂತಿದ್ದ ಆಘಾ, ಕ್ರೀಸ್ ಒಳಗೆ ಬರುವ ಪ್ರಯತ್ನವನ್ನು ಮಾಡಲಿಲ್ಲ. ಹೀಗಾಗಿ ಚೆಂಡನ್ನು ಸ್ಟಂಪ್ಗೆ ಎಸೆದ ಕೂಡಲೇ ಮೆಹದಿ ಹಸನ್ ಔಟ್ಗಾಗಿ ಅಂಪೈರ್ ಬಳಿ ಮನವಿ ಮಾಡಲಾರಂಬಿಸಿದರು.
ಪಾಕ್ ಬ್ಯಾಟರ್ ಕಕ್ಕಾಬಿಕ್ಕಿ
ಇದನ್ನು ನೋಡಿ ಆಘಾತಕ್ಕೊಳಗಾದ ಆಘಾ, ಹಸನ್ ಜೊತೆಗೆ ವಾದಿಸಲು ಪ್ರಾರಂಭಿಸಿದರು. ಇತ್ತ ಫೀಲ್ಡ್ ಅಂಪೈರ್ ಮೂರನೇ ಅಂಪೈರ್ ಬಳಿ ಮರುಪರಿಶೀಲನೆಗೆ ಮನವಿ ಮಾಡಿದರು. ಎಲ್ಲವನ್ನು ಕುಲಂಕುಶವಾಗಿ ಪರಿಶೀಲಿಸಿದ ಅಂಪೈರ್, ಸಲ್ಮಾನ್ ಆಘಾ ಔಟೆಂದು ತೀರ್ಪು ನೀಡಿದರು.
ಇದರಿಂದ ಇನ್ನಷ್ಟು ಕೆರಳಿದ ಆಘಾ, ತಮ್ಮ ಹೆಲ್ಮೆಟ್ ಮತ್ತು ಕೈಗ್ಲೌಸ್ ಗಳನ್ನು ತೆಗೆದು ನೆಲದ ಮೇಲೆ ಬಡಿದು ಆಕ್ರೋಶ ಹೊರಹಾಕಿದರು.
ಅಂದಹಾಗೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯುತ್ತಿದೆ. ಸರಣಿಯ ಮೊದಲ ಪಂದ್ಯವನ್ನು ಬಾಂಗ್ಲಾದೇಶ ಏಕಪಕ್ಷೀಯವಾಗಿ ಗೆದ್ದುಕೊಂಡಿತ್ತು.
ಹೀಗಾಗಿ ಎರಡನೇ ಏಕದಿನ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಿ 47.3 ಓವರ್ ನಲ್ಲಿ 274 ರನ್ ಪೇರಿಸಿತು. ಪಾಕ್ ಪರ ಫರ್ಹಾನ್ 31 ರನ್, ಮಾಝ್ ಸದಾಕತ್ 75, ಮಹಮದ್ ರಿಜ್ವಾನ್ 44 ಮತ್ತು ಸಲ್ಮಾನ್ ಅಲಿ ಅಘಾ 64 ರನ್ ಗಳಿಸಿದರು.
ಈ ಮೊತ್ತವನ್ನು ಬೆನ್ನು ಹತ್ತಿದ ಬಾಂಗ್ಲಾದೇಶಕ್ಕೆ ಮಳೆ ಅಡ್ಡಿಯಾಯಿತು. ಹೀಗಾಗಿ ಅಂಪೈರ್ ಗಳು ಡಕ್ವರ್ಥ್ ಲೂಯಿಸ್ ನಿಯಮದ ಅನ್ವಯ ಬಾಂಗ್ಲಾದೇಶಕ್ಕೆ 32 ಓವರ್ ನಲ್ಲಿ 243 ರನ್ ಗಳ ಟಾರ್ಗೆಟ್ ನೀಡಿದರು. ಈ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ಬಾಂಗ್ಲಾದೇಶ 23.3 ಓವರ್ ನಲ್ಲಿ ಕೇವಲ 114 ರನ್ ಗಳಿಗೇ ಆಲೌಟ್ ಆಯಿತು. ಆ ಮೂಲಕ ಪಾಕಿಸ್ತಾನ 128 ರನ್ ಗಳ ಅಂತರದಲ್ಲಿ ಗೆದ್ದಿತು.
Advertisement