

IPL 2026ನೇ ಆವೃತ್ತಿ ಆರಂಭಕ್ಕೆ ಕೇಲವ ಒಂದೆರಡು ವಾರಗಳು ಮಾತ್ರ ಬಾಕಿ ಉಳಿದಿದೆ. ಆದರೆ, ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಸಂಕಷ್ಟ ಎದುರಾಗಿದೆ. ಆರ್‌ಸಿಬಿ ತವರು ಸ್ಥಳವಾದ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಯಲಿದ್ದು, ಇದಕ್ಕೂ ಮುನ್ನ ವೇಗಿ ಜಾಶ್ ಹೇಜಲ್‌ವುಡ್ ಇನ್ನೂ ಸಂಪೂರ್ಣ ಫಿಟ್ನೆಸ್ ಹೊಂದದಿರುವುದು ತಂಡಕ್ಕೆ ಸಂಕಷ್ಟ ಉಂಟುಮಾಡಿದೆ.
ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಾರ, ಆಸೀಸ್ ವೇಗಿ ಇನ್ನೂ ರಿಹ್ಯಾಬ್‌ನಲ್ಲಿದ್ದಾರೆ ಮತ್ತು ಅವರ ಭಾಗವಹಿಸುವಿಕೆ ಫಿಟ್‌ನೆಸ್ ಕ್ಲಿಯರೆನ್ಸ್ ಅನ್ನು ಅವಲಂಬಿಸಿರುತ್ತದೆ. ಕಳೆದೆರಡು ಸೀಸನ್‌ಗಳಲ್ಲಿ ಹೇಜಲ್‌ವುಡ್ ಆರ್‌ಸಿಬಿಯ ಪ್ರಮುಖ ಬೌಲರ್ ಆಗಿದ್ದಾರೆ. ಅವರು ಆಡಿರುವ 27 ಪಂದ್ಯಗಳಲ್ಲಿ ಕೇವಲ 18ರ ಸರಾಸರಿಯಲ್ಲಿ 45 ವಿಕೆಟ್‌ಗಳನ್ನು ಪಡೆದಿದ್ದಾರೆ. ಅದೇ ರೀತಿ, SRH ನಾಯಕ ಪ್ಯಾಟ್ ಕಮ್ಮಿನ್ಸ್ ಅವರ ಸ್ಥಿತಿಯ ಬಗ್ಗೆಯೂ ಇದೀಗ ಕಳವಳ ವ್ಯಕ್ತವಾಗಿದೆ.
ಮಾರ್ಚ್ 16ರಂದು ಭಾರತೀಯ ಆಟಗಾರರು ಸೇರ್ಪಡೆ
ಮತ್ತೊಂದೆಡೆ, ಟಿ20 ವಿಶ್ವಕಪ್ ಗೆದ್ದ ನಂತರ, ಭಾರತೀಯ ಆಟಗಾರರು ಮಾರ್ಚ್ 16 ರೊಳಗೆ ತಮ್ಮ ತಂಡಗಳನ್ನು ಸೇರುವ ನಿರೀಕ್ಷೆಯಿದೆ ಎಂದು ರೆವ್‌ಸ್ಪೋರ್ಟ್ಸ್ ಪತ್ರಕರ್ತ ರೋಹಿತ್ ಜುಗ್ಲಾನ್ ಹೇಳಿದ್ದಾರೆ. ಎಲ್ಲ ತಂಡಗಳು ಜನವರಿ/ಫೆಬ್ರುವರಿಯಲ್ಲಿಯೇ ತಮ್ಮ ಪೂರ್ವಸಿದ್ಧತೆಯನ್ನು ಪ್ರಾರಂಭಿಸಿದ್ದು, ಈ ಆಟಗಾರರು ತಂಡಗಳಿಗೆ ಸೇರಿದ ನಂತರ ಪೂರ್ಣ ಶಿಬಿರವನ್ನು ನಡೆಸಲಾಗುತ್ತದೆ.
ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದಿಂದಾಗಿ ವಿಮಾನಗಳ ಸೇವೆ ರದ್ದತಿಯಿಂದಾಗಿ ದೀರ್ಘಾವಧಿಯವರೆಗೆ ಭಾರತದಲ್ಲಿ ಸಿಲುಕಿಕೊಂಡಿದ್ದ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾದ ಆಟಗಾರರಿಗೆ ಸಂಕಷ್ಟ ಉಂಟಾಗಿದೆ.
IPL 2026ರ 19ನೇ ಆವೃತ್ತಿಯು ಮಾರ್ಚ್ 28 ರಂದು ಪ್ರಾರಂಭವಾಗಲಿದ್ದು, ಮೊದಲ ಹಂತದಲ್ಲಿ ಕೇವಲ 20-ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಲಾಗಿದೆ. ಭಾರತದ ಮೂರು ರಾಜ್ಯಗಳ ಚುನಾವಣಾ ದಿನಾಂಕಗಳು ಬಹಿರಂಗಗೊಂಡ ನಂತರ ಉಳಿದ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು. ಬೆಂಗಳೂರಿನಲ್ಲಿ ಆರ್‌ಸಿಬಿ ಮತ್ತು ಎಸ್‌ಆರ್‌ಎಚ್ ನಡುವೆ ಆರಂಭಿಕ ಪಂದ್ಯ ನಡೆಯಲಿದೆ.
Advertisement