ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವು ಮುಸ್ತಾಫಿಜುರ್ ರೆಹಮಾನ್ ಬದಲಿಗೆ ಜಿಂಬಾಬ್ವೆ ವೇಗಿ ಬ್ಲೆಸ್ಸಿಂಗ್ ಮುಜರಬಾನಿ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಜನವರಿಯಲ್ಲಿ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೂಚನೆ ಮೇರೆಗೆ ಕೆಕೆಆರ್ ಬಾಂಗ್ಲಾದೇಶದ ವೇಗಿಯನ್ನು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ತಂಡದಿಂದ ಬಿಡುಗಡೆ ಮಾಡಿತ್ತು.
ಐಪಿಎಲ್ 2026ರ ಸೀಸನ್ ಆರಂಭವಾಗಲು 2 ವಾರಗಳಿಗಿಂತ ಕಡಿಮೆ ಸಮಯ ಇರುವಾಗ, ಕೆಕೆಆರ್ ಮುಸ್ತಾಫಿಜುರ್ ಬದಲಿಗೆ ಮುಜರಬಾನಿ ಅವರನ್ನು ಕರೆತಂದಿದೆ. ಕೆಕೆಆರ್‌ನ ಇಬ್ಬರು ವೇಗದ ಬೌಲರ್‌ಗಳಾದ ಹರ್ಷಿತ್ ರಾಣಾ ಮತ್ತು ಮಥೀಶಾ ಪತಿರಾನ ಸದ್ಯ ಗಾಯಗಳಿಂದಾಗಿ ಹೊರಗುಳಿದಿರುವುದರಿಂದ, ಕೆಕೆಆರ್ ತಂಡವು ಈ ಕ್ರಮವನ್ನು ಕೈಗೊಂಡಿದೆ.
ಕಳೆದ ವರ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದಲ್ಲಿ ಲುಂಗಿ ಎನ್‌ಗಿಡಿ ಬದಲಿಗೆ ತಾತ್ಕಾಲಿಕವಾಗಿ ಜಿಂಬಾಬ್ವೆಯ ವೇಗಿ ಬ್ಲೆಸ್ಸಿಂಗ್ ಮುಜರಬಾನಿ ಆಯ್ಕೆಯಾಗಿದ್ದರು. ಬಳಿಕ ಆರ್‌ಸಿಬಿ ಅವರನ್ನು ಕೈಬಿಟ್ಟಿತ್ತು. ಐಪಿಎಲ್ 2022ರ ಆವೃತ್ತಿಯಲ್ಲಿ, ಅವರು ಲಕ್ನೋ ಸೂಪರ್ ಜೈಂಟ್ಸ್‌ನ ನೆಟ್ ಬೌಲರ್ ಕೂಡ ಆಗಿದ್ದರು. ಬ್ಲೆಸ್ಸಿಂಗ್ ಸಾಮಾಜಿಕ ಮಾಧ್ಯಮದಲ್ಲಿ ಕೆಕೆಆರ್ ಮತ್ತು ಪವರ್ ಕೋಚ್ ಆಂಡ್ರೆ ರಸೆಲ್ ಅವರನ್ನು ಅನುಸರಿಸಿದ್ದರು. ಇದು ಊಹಾಪೋಹಗಳಿಗೆ ಮತ್ತಷ್ಟು ಉತ್ತೇಜನ ನೀಡಿತು.
ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಬಿಕರಿಯಾಗದೇ ಉಳಿದಿದ್ದ ಬ್ಲೆಸ್ಸಿಂಗ್ ಮುಜರಬಾನಿ, ಪಾಕಿಸ್ತಾನ ಸೂಪರ್ ಲೀಗ್ (PSL) 2026ರತ್ತ ಮುಖ ಮಾಡಿದ್ದರು. ಕಳೆದ ಟಿ20 ವಿಶ್ವಕಪ್ 2026ರಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಇದೀಗ ಅವರು ಪಿಎಸ್ಎಲ್‌ನಿಂದ ಹಿಂದೆ ಸರಿದು ಐಪಿಎಲ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. 2026ರ T20 ವಿಶ್ವಕಪ್ ಸಮಯದಲ್ಲಿ, ವೇಗಿಯನ್ನು PKR 1.10 ಕೋಟಿಗೆ ವೆಸ್ಟ್ ಇಂಡೀಸ್ ವೇಗದ ಬೌಲರ್ ಶಮರ್ ಜೋಸೆಫ್ ಬದಲಿಗೆ ಪಾಕಿಸ್ತಾನದ ಫ್ರಾಂಚೈಸಿ ಖರೀದಿಸಿತ್ತು.
ಕಳೆದ ವರ್ಷ, ಮುಂಬೈ ಇಂಡಿಯನ್ಸ್ (MI) ತಂಡದಲ್ಲಿ ಅವಕಾಶ ಸಿಕ್ಕ ನಂತರ ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಕಾರ್ಬಿನ್ ಬಾಷ್ ಕೂಡ ಇದೇ ರೀತಿ ಮಾಡಿದ್ದರು. ಅವರು ಪೇಶಾವರ್ ಝಲ್ಮಿ ತಂಡವನ್ನು ತೊರೆದರು. ನಂತರ ಅವರಿಗೆ ದಂಡ ವಿಧಿಸಲಾಯಿತು ಮತ್ತು PSL ನಿಂದ 1 ವರ್ಷದ ನಿಷೇಧವನ್ನು ವಿಧಿಸಲಾಯಿತು.
Advertisement