

ಐಪಿಎಲ್ 2026ರಲ್ಲಿ ಪಂಜಾಬ್ ಕಿಂಗ್ಸ್ (PBKS) ಅನ್ನು ಮುನ್ನಡೆಸುತ್ತಿರುವ ಶ್ರೇಯಸ್ ಅಯ್ಯರ್ ಅವರು ಮುಂದಿನ ಭಾರತೀಯ ಟಿ20ಐ ನಾಯಕರಾಗುವ ಅವಕಾಶ ಹೊಂದಿದ್ದಾರೆ ಎಂದು ಭಾರತೀಯ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ತಿಳಿಸಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್ 2026ರಲ್ಲಿ ಪಿಬಿಕೆಎಸ್ ನಾಯಕನಿಗೆ ಭಾರತ ತಂಡದಲ್ಲಿ ಸ್ಥಾನ ಸಿಗಲಿಲ್ಲ ಮತ್ತು 2020ರಿಂದ ಟಿ20ನಲ್ಲಿ ಕಾಣಿಸಿಕೊಂಡಿಲ್ಲ. ಅಯ್ಯರ್ ಭವಿಷ್ಯದಲ್ಲಿ T20I ಸೆಟಪ್‌ನಲ್ಲಿ ಸ್ಥಾನ ಪಡೆಯುವುದು ಮಾತ್ರವಲ್ಲದೆ ತಂಡವನ್ನು ಸಮರ್ಥವಾಗಿ ಮುನ್ನಡೆಸಬಹುದು ಎಂದು ಚೋಪ್ರಾ ತಿಳಿಸಿದ್ದಾರೆ.
IPL 2025ನೇ ಆವೃತ್ತಿಯಲ್ಲಿ ಶ್ರೇಯಸ್ ಅಯ್ಯರ್ ಪಂಜಾಬ್ ಕಿಂಗ್ಸ್ (PBKS) ತಂಡವನ್ನು ಫೈನಲ್‌ಗೆ ಕೊಂಡೊಯ್ಯುವ ಮೂಲಕ ತಮ್ಮ ನಾಯಕತ್ವವನ್ನು ಸಾಭೀತುಪಡಿಸಿದರು. ಇದೀಗ ಅವರು ಬಹುಶಃ ಮುಂದಿನ ಭಾರತದ ನಾಯಕರಾಗಬಹುದು. ಶ್ರೇಯಸ್ T20 ವಿಶ್ವಕಪ್ ತಂಡಕ್ಕೆ ಬರಲು ಸಾಧ್ಯವಾಗದಿದ್ದರೂ, ಮಧ್ಯಮ ಕ್ರಮಾಂಕದ ಸ್ಲಾಟ್ ಸಂಭಾವ್ಯವಾಗಿ ಖಾಲಿಯಾಗಬಹುದಾದ್ದರಿಂದ ಭವಿಷ್ಯದಲ್ಲಿ ಲೈನ್-ಅಪ್‌ನಲ್ಲಿ ಸ್ಥಾನ ಪಡೆಯುವ ಅವಕಾಶವಿದೆ ಎಂದು ಮಾಜಿ KKR ಸ್ಟಾರ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿನ ವಿಡಿಯೋದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
'ಶ್ರೇಯಸ್ ಅಯ್ಯರ್, ಅವರು T20 ವಿಶ್ವಕಪ್ ತಂಡದಲ್ಲಿ ಇರುತ್ತಾರೆ ಎಂದು ನಾನು ಭಾವಿಸಿದೆ. ಆದರೆ, ಅದು ಸಾಧ್ಯವಾಗಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಸ್ಥಾನ ಖಾಲಿಯಾಗಬಹುದು ಎಂದು ನಾನು ಊಹಿಸುತ್ತೇನೆ. ಹಾಗಾಗಿ, ಶ್ರೇಯಸ್ ಅಯ್ಯರ್ ಅಲ್ಲಿಗೆ ಬರಬಹುದು. ಅವರು ಮತ್ತೊಮ್ಮೆ ನಾಯಕತ್ವದ ಹಕ್ಕು ಮಂಡಿಸಿದರೆ, ಬಹುಶಃ ಅವರು ಭಾರತದ ಮುಂದಿನ T20 ನಾಯಕರಾಗಬಹುದು' ಎಂದು ಚೋಪ್ರಾ ಹೇಳಿದರು.
ಶ್ರೇಯಸ್ ನೇತೃತ್ವದ PBKS, ಐಪಿಎಲ್ 2025ರಲ್ಲಿ ಆಡಿರುವ 14 ಪಂದ್ಯಗಳಲ್ಲಿ 9 ಗೆಲುವು ಮತ್ತು 4 ಸೋಲುಗಳೊಂದಿಗೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿತ್ತು. ಬಳಿಕ ಫೈನಲ್ ಪ್ರವೇಶಿಸಿತು. ಆದರೆ, RCB ಅವರನ್ನು 6 ರನ್‌ಗಳಿಂದ ಸೋಲಿಸಿದ ಕಾರಣ ಚೊಚ್ಚಲ ಪ್ರಶಸ್ತಿ ಪಡೆಯುವಲ್ಲಿ ವಿಫಲವಾಯಿತು. ನಾಯಕತ್ವದ ವಿಷಯದಲ್ಲಿ ಅಯ್ಯರ್ ಅವರಿಗೆ ಸಾಕಷ್ಟು ಅನುಭವವಿದೆ. ಅವರು 2024ರಲ್ಲಿ KKR ತಂಡದ ನಾಯಕತ್ವ ವಹಿಸಿದರು ಮತ್ತು ತಂಡವನ್ನು 3ನೇ ಪ್ರಶಸ್ತಿಗೆ ಕೊಂಡೊಯ್ದರು. ನಂತರ ಅಯ್ಯರ್ ಅವರನ್ನು ಬಿಡುಗಡೆ ಮಾಡಲಾಯಿತು ಮತ್ತು PBKS ಅವರನ್ನು ಖರೀದಿಸಿತು. ಅವರು ದೇಶೀಯ ಸರ್ಕ್ಯೂಟ್‌ನಲ್ಲಿ ವೈಟ್-ಬಾಲ್ ಸ್ವರೂಪಗಳಲ್ಲಿ ಮುಂಬೈಯನ್ನು ಮುನ್ನಡೆಸಿದ್ದಾರೆ.
Advertisement