

ಬೆಂಗಳೂರು: ಇದೇ 28 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ನಡುವಿನ IPL ಟಿ-20 ಉದ್ಘಾಟನಾ ಪಂದ್ಯದ ಟಿಕೆಟ್ ಇರುವವರು ನಮ್ಮ ಮೆಟ್ರೋದಲ್ಲಿ ಉಚಿತವಾಗಿ ಸಂಚರಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ.
ಎರಡೂ ಕಡೆಯ ಪ್ರಯಾಣಕ್ಕೆ ಐಪಿಎಲ್ ಪಂದ್ಯದ ಟಿಕೆಟ್ ಗಳಲ್ಲಿ ನಮ್ಮ ಮೆಟ್ರೋ ಕ್ಯೂ ಆರ್ ಕೋಡ್ ಮುದ್ರಿತವಾಗಿರುತ್ತದೆ. ಡಿಜಿಟಲ್ ಐಪಿಎಲ್ ಟಿಕೆಟ್ ಗಳಲ್ಲಿಯೂ ಲಭ್ಯವಿದೆ ಎಂದು ಬಿಎಂಆರ್ ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
2 ಗಂಟೆವರೆಗೂ ಅವಧಿ ವಿಸ್ತರಣೆ: ಈ ಮಧ್ಯೆ ಮಾ.28 ರಂದು ವಿವಿಧ ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ಮೆಟ್ರೋ ಸಂಚಾರದ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.
ವೈಟ್ ಫೀಲ್ಡ್ ನಿಂದ ರಾತ್ರಿ 12-30ಕ್ಕೆ , ಚಲ್ಲಘಟ್ಟ, ರೇಷ್ಮೆ ಸಂಸ್ಥೆ ಹಾಗೂ ಮಾದಾವರ ಟರ್ಮಿನಲ್ ಗಳಿಂದ ರಾತ್ರಿ 12-45ಕ್ಕೆ, ಬೊಮ್ಮಸಂದ್ರದಿಂದ ರಾತ್ರಿ 1ಕ್ಕೆ, ಆರ್ .ವಿ. ರಸ್ತೆಯಿಂದ ರಾತ್ರಿ 2ಕ್ಕೆ ಕೊನೆ ರೈಲು ಸಂಚರಿಸಲಿದೆ.
ಮೆಜೆಸ್ಟಿಕ್ ನ ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ ನಾಲ್ಕು ದಿಕ್ಕುಗಳಿಗೆ ಮಧ್ಯರಾತ್ರಿ 1-30ಕ್ಕೆ ಕೊನೆಯ ರೈಲು ಹೊರಡಲಿದೆ.
ಕಬ್ಬನ್ ರಸ್ತೆ ಭಾಗದಿಂದ ಸ್ಟೇಡಿಯಂಗೆ ಪ್ರವೇಶ/ ನಿರ್ಗಮನ ಗೇಟ್ ಗಳನ್ನು ಬಳಸುವ ಪ್ರೇಕ್ಷಕರು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣವನ್ನು ಬಳಸುವಂತೆ ಹಾಗೂ ಲಿಂಕ್ ರಸ್ತೆ ಭಾಗದಿಂದ ಪ್ರವೇಶ, ನಿರ್ಗಮನ ಗೇಟ್ ಗಳನ್ನು ಬಳಸುವ ಪ್ರೇಕ್ಷಕರು ಸಮೀಪದಲ್ಲಿರುವ ಮಹಾತ್ಮ ಗಾಂಧಿ ರಸ್ತೆ ಮೆಟ್ರೋ ನಿಲ್ದಾಣವನ್ನು ಬಳಸುವಂತೆ ಸೂಚಿಸಲಾಗಿದೆ.
ಪಾರ್ಕಿಂಗ್ ಮತ್ತು ಸಂಚಾರ ನಿರ್ವಹಣೆ: BMRCL ಆಯ್ದ ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚುವರಿ ಪಾರ್ಕಿಂಗ್ ಸ್ಥಳವನ್ನು ಒದಗಿಸುತ್ತಿದೆ. ಪಾರ್ಕಿಂಗ್ ಶುಲ್ಕವನ್ನು ದ್ವಿಚಕ್ರ ವಾಹನಗಳಿಗೆ ₹ 30 ಮತ್ತು ಕಾರುಗಳಿಗೆ ₹ 60 ನಿಗದಿಪಡಿಸಲಾಗಿದ್ದು, ಪಂದ್ಯಕ್ಕೆ ಹೋಗುವವರಿಗೆ ಮೀಸಲಾದ ಸ್ಲಾಟ್‌ಗಳನ್ನು ನಿಗದಿಪಡಿಸಲಾಗಿದೆ. ಕ್ರೀಡಾಂಗಣ ಮತ್ತು ಹತ್ತಿರದ ರಸ್ತೆಗಳ ಸುತ್ತ ಟ್ರಾಫಿಕ್ ಜಾಮ್ ತಪ್ಪಿಸಲು ಪ್ರೇಕ್ಷಕರು ವೈಯಕ್ತಿಕ ವಾಹನಗಳ ಬದಲಿಗೆ ನಮ್ಮ ಮೆಟ್ರೋವನ್ನು ಬಳಸುವಂತೆ ನಗರ ಪೊಲೀಸರು ಮತ್ತು ಬಿಎಂಆರ್‌ಸಿಎಲ್ ಒತ್ತಾಯಿಸಿದ್ದಾರೆ.
Advertisement