IPL 2026: ಇಲ್ಲ, ನಾನ್ ಅದನ್ನ ಒಪ್ಪಲ್ಲ...: ತನ್ನದೇ ನಾಯಕ Riyan Parag ಮಾತು ಅಲ್ಲಗಳೆದ RR ಕೋಚ್ ಕುಮಾರ ಸಂಗಕ್ಕಾರ!

ತಂಡದಲ್ಲಿ ಸಾಕಷ್ಟು ಯುವ ಹಾಗೂ ಅನುಭವಹೀನ ಆಟಗಾರರಿದ್ದ ಕಾರಣ ರಾಜಸ್ಥಾನ ರಾಯಲ್ಸ್ ಪ್ಲೇಆಫ್‌ಗೆ ತಲುಪುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ ಎಂದು ರಾಜಸ್ತಾನ ನಾಯಕ ರಿಯಾನ್ ಪರಾಗ್ ಹೇಳಿದ್ದರು.
Kumar Sangakkara-Riyan Parag
ರಾಜಸ್ತಾನ ರಾಯಲ್ಸ್ ಕೋಚ್ ಕುಮಾರ ಸಂಗಕ್ಕಾರ
Updated on

ಚಂಡೀಗಢ: ರಾಜಸ್ಥಾನ ರಾಯಲ್ಸ್ ತಂಡ ಪ್ಲೇಆಫ್‌ಗೆ ತಲುಪುವ ನಿರೀಕ್ಷೆಯೇ ಇರಲಿಲ್ಲ ಎಂಬ ನಾಯಕ ರಿಯಾನ್ ಪರಾಗ್ ಹೇಳಿಕೆಯನ್ನು ತಂಡದ ಕೋಚ್ ಕುಮಾರ ಸಂಗಕ್ಕಾರ ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ.

ಐಪಿಎಲ್ 2026ರ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಕಡ್ಡಾಯ ಗೆಲುವು ಸಾಧಿಸಿದ ರಾಜಸ್ಥಾನ ರಾಯಲ್ಸ್ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದು ಪ್ಲೇಆಫ್ ಪ್ರವೇಶಿಸಿತು. ನಂತರ ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿ ಕ್ವಾಲಿಫೈಯರ್-2 ತಲುಪಿತು. ಆದರೆ ಶುಕ್ರವಾರ ನಡೆದ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಶುಭಮನ್ ಗಿಲ್ ನೇತೃತ್ವದ ಗುಜರಾತ್ ಟೈಟನ್ಸ್ ವಿರುದ್ಧ ಸೋಲು ಕಂಡು ಫೈನಲ್ ಕನಸು ಕಳೆದುಕೊಂಡಿತು.

ಪಂದ್ಯದ ಬಳಿಕ ಮಾತನಾಡಿದ್ದ ರಾಜಸ್ತಾನ ನಾಯಕ ರಿಯಾನ್ ಪರಾಗ್, ತಂಡದಲ್ಲಿ ಸಾಕಷ್ಟು ಯುವ ಹಾಗೂ ಅನುಭವಹೀನ ಆಟಗಾರರಿದ್ದ ಕಾರಣ ರಾಜಸ್ಥಾನ ರಾಯಲ್ಸ್ ಪ್ಲೇಆಫ್‌ಗೆ ತಲುಪುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದರು. ಆದರೆ ಇದೀಗ ಈ ಹೇಳಿಕೆಯನ್ನು ರಾಜಸ್ತಾನ ಕೋಚ್ ಕುಮಾರ ಸಂಗಕ್ಕಾರ ಅಲ್ಲಗಳೆದಿದ್ದಾರೆ.

ಈ ಹೇಳಿಕೆಯ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ, ಮುಖ್ಯ ಕೋಚ್ ಕುಮಾರ್ ಸಂಗಕ್ಕಾರ ಸಂಪೂರ್ಣ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದು, 'ಇಲ್ಲ, ನಾನು ಅದನ್ನು ಒಪ್ಪುವುದಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ತಂಡವನ್ನು ಕಟ್ಟುವಾಗಲೇ ಪ್ರಶಸ್ತಿ ಗೆಲ್ಲುವ ಉದ್ದೇಶದಿಂದ ಆಟಗಾರರನ್ನು ಖರೀದಿಸಲಾಗಿದೆ ಎಂದು ಅವರು ಹೇಳಿದರು.

'2022ರಲ್ಲಿ ನಾವು ಒಂದು ಮಹತ್ವದ ನಿರ್ಧಾರ ಕೈಗೊಂಡೆವು. ಪಂದ್ಯಗಳನ್ನು ಗೆಲ್ಲಬಲ್ಲ ಹಾಗೂ ತಕ್ಷಣವೇ ಆಡುವ ಸಾಮರ್ಥ್ಯ ಹೊಂದಿರುವಷ್ಟು ಹೆಚ್ಚು ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕು ಎಂದು ನಿರ್ಧರಿಸಿದ್ದೆವು. ಅಂದಿನಿಂದ ನಾವು ಎಲ್ಲ ವಿಷಯಗಳನ್ನೂ ಅದೇ ದೃಷ್ಟಿಕೋನದಲ್ಲಿ ನೋಡುತ್ತಿದ್ದೇವೆ ಎಂದರು.

Kumar Sangakkara-Riyan Parag
IPL 2026: 'ಪ್ಲೇ ಆಫ್ ಗೆ ಅರ್ಹತೆ ಪಡೆಯುವ ಸಾಧ್ಯತೆಯೇ ಇರಲಿಲ್ಲ, ಆದ್ರೆ..': ವೈಭವ್ ಸೂರ್ಯವಂಶಿ ಕುರಿತು RR ನಾಯಕ ರಿಯಾನ್ ಪರಾಗ್ ದೊಡ್ಡ ಹೇಳಿಕೆ!

ವೈಭವ್ ವಿಶೇಷ ಪ್ರತಿಭೆ

ಇದೇ ವೇಳೆ ವೈಭವ್ ಸೂರ್ಯವಂಶಿ ಬಗ್ಗೆ ಮಾತನಾಡಿದ ಸಂಗಕ್ಕಾರ, 'ಅವರು ವಿಶೇಷ ಪ್ರತಿಭೆ' ಎಂದು ಹೇಳಿದರು. 'ವೈಭವ್ ಒಂದು ಅಪರೂಪದ ಪ್ರತಿಭೆ. ಆದರೆ ಅವರನ್ನು ನಾವು ಖರೀದಿಸಿದ್ದು ಕೇವಲ ಭವಿಷ್ಯದ ಆಟಗಾರ ಎಂದು ಅಲ್ಲ. ನಮ್ಮ ಮೊದಲ ಹನ್ನೊಂದರಲ್ಲಿ ಸ್ಥಾನ ಪಡೆಯುವಷ್ಟು ಸಾಮರ್ಥ್ಯ ಅವರಲ್ಲಿದೆ ಎಂದು ನಾವು ನಂಬಿದ್ದೆವು' ಎಂದು ಹೇಳಿದ್ದಾರೆ.

2022ರಿಂದ ತಂಡದ ತತ್ವದಲ್ಲಿ ಬದಲಾವಣೆ

ತಂಡದ ಅಭಿವೃದ್ಧಿ ದೃಷ್ಟಿಕೋನದ ಬಗ್ಗೆ ಮಾತನಾಡಿದ ಸಂಗಕ್ಕಾರ, 'ಕಳೆದ ನಾಲ್ಕು ವರ್ಷಗಳಲ್ಲಿ ರಾಜಸ್ಥಾನ್ ರಾಯಲ್ಸ್ ತನ್ನ ಕಾರ್ಯತಂತ್ರವನ್ನು ಸಂಪೂರ್ಣವಾಗಿ ಬದಲಿಸಿಕೊಂಡಿದೆ. ಆಟಗಾರರ ಅಭಿವೃದ್ಧಿ ಎಂಬ ದೃಷ್ಟಿಕೋನದಿಂದ ನೋಡಿದರೆ, ಕಳೆದ ನಾಲ್ಕು ವರ್ಷಗಳಲ್ಲಿ ನಾವು ಆ ಮನಸ್ಥಿತಿಯಿಂದ ಸಂಪೂರ್ಣವಾಗಿ ಹೊರಬಂದಿದ್ದೇವೆ.

ಎರಡು ವರ್ಷಗಳ ಹಿಂದೆ ನಡೆದ ಹರಾಜಿನಲ್ಲಿ ನಮ್ಮ ಬಜೆಟ್ ಬಳಕೆಯ ದೃಷ್ಟಿಯಿಂದ ಅತ್ಯುತ್ತಮ ಪ್ರದರ್ಶನ ನೀಡಲಿಲ್ಲ ಎನ್ನಬಹುದು. ಆದರೆ ಕೆಲವೊಮ್ಮೆ ಹಾಗಾಗುತ್ತದೆ. ಈಗ ತಂಡದಲ್ಲಿ ಆಡುತ್ತಿರುವ ಪ್ರತಿಯೊಬ್ಬ ಆಟಗಾರನಲ್ಲೂ ಸ್ವಲ್ಪ ಅನುಭವದ ಕೊರತೆ ಇರಬಹುದು. ಆದರೆ ಅವರು ಇಲ್ಲಿ ಕೇವಲ ಕಲಿಯಲು ಬಂದಿಲ್ಲ; ಗೆಲ್ಲಲು ಬಂದಿದ್ದಾರೆ ಎಂದು ಸಂಗಕ್ಕಾರ ಹೇಳಿದರು.

Kumar Sangakkara-Riyan Parag
IPL 2026: Mumbai Indians ಜೆರ್ಸಿ ಕಳಚಿ ಎಸೆದು ಹೋಗಿದ್ದೇಕೆ ಹಾರ್ದಿಕ್ ಪಾಂಡ್ಯ; ನಾಯಕನ ತಲೆದಂಡವೇ? Video

ರಿಯಾನ್ ಪರಾಗ್ ನಾಯಕತ್ವಕ್ಕೆ ಮೆಚ್ಚುಗೆ

ಇನ್ನು ಪ್ಲೇಆಫ್ ಕುರಿತ ಹೇಳಿಕೆಯಲ್ಲಿ ಭಿನ್ನಾಭಿಪ್ರಾಯ ಇದ್ದರೂ, ರಿಯಾನ್ ಪರಾಗ್ ನಾಯಕತ್ವವನ್ನು ಸಂಗಕ್ಕಾರಾ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. 'ಐಪಿಎಲ್‌ನಲ್ಲಿ ಪೂರ್ಣಾವಧಿ ನಾಯಕನಾಗಿ ಮೊದಲ ಬಾರಿಗೆ ತಂಡವನ್ನು ಮುನ್ನಡೆಸಿದ ಪರಾಗ್ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಅವರ ಮೊದಲ ಪೂರ್ಣಾವಧಿ ನಾಯಕತ್ವದ ಋತು ಅತ್ಯುತ್ತಮವಾಗಿತ್ತು.

ಅವರು ತಂಡವನ್ನು ಚೆನ್ನಾಗಿ ನಿರ್ವಹಿಸಿದರು ಮತ್ತು ಮೈದಾನದಲ್ಲಿನ ನಿರ್ಧಾರಗಳೂ ಅತ್ಯುತ್ತಮವಾಗಿದ್ದವು. ಮುಂದಿನ ದಿನಗಳಲ್ಲಿ ಪರಾಗ್ ಇನ್ನಷ್ಟು ಉತ್ತಮ ನಾಯಕನಾಗಿ ಬೆಳೆಯಲಿದ್ದಾರೆ. ರಿಯಾನ್ ಇನ್ನಷ್ಟು ಕಲಿಯುತ್ತಾರೆ, ಬೆಳೆಯುತ್ತಾರೆ. ಉಳಿದ ಆಟಗಾರರೂ ಅದೇ ರೀತಿ ಅಭಿವೃದ್ಧಿಯಾಗುತ್ತಾರೆ. ಮುಂದಿನ ಬಾರಿ ನಾವು ಇನ್ನಷ್ಟು ಬಲಿಷ್ಠರಾಗಿ ಮರಳುತ್ತೇವೆ ಎಂದರು.

ಟೀಕಾಕಾರರಿಗೆ ಉತ್ತರ

ಸೀಸನ್ ಆರಂಭಕ್ಕೂ ಮುನ್ನ ರಾಜಸ್ಥಾನ್ ರಾಯಲ್ಸ್ ಪ್ಲೇಆಫ್ ತಲುಪುತ್ತದೆ ಎಂದು ಹೆಚ್ಚಿನವರು ನಂಬಿರಲಿಲ್ಲ ಎಂದು ಸಂಗಕ್ಕಾರ ಒಪ್ಪಿಕೊಂಡರು. ಪ್ರಚಾರ ಆರಂಭವಾದಾಗ ನಾವು ಪ್ಲೇಆಫ್‌ಗೆ ಅರ್ಹತೆ ಪಡೆಯುತ್ತೇವೆ ಎಂದು ಬಹುತೇಕ ಯಾರೂ ಅವಕಾಶ ನೀಡಿರಲಿಲ್ಲ. ಆದರೆ ಕಠಿಣ ಪರಿಶ್ರಮ ಮಾಡಿದಾಗ, ಉತ್ತಮ ಕ್ರಿಕೆಟ್ ಆಡಿದಾಗ ಮತ್ತು ಆಟವನ್ನು ಆನಂದಿಸಿದಾಗ ವಿಶೇಷ ಸಂಗತಿಗಳು ಸಂಭವಿಸಬಹುದು ಎಂಬುದನ್ನು ನಾವು ಸಾಬೀತುಪಡಿಸಿದ್ದೇವೆ ಎಂದು ಸಂಗಕ್ಕಾರ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com