4th ODI: 26 ವರ್ಷಗಳಲ್ಲೇ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ಹೀನಾಯ ಸೋಲು, ಆದರೂ 2 ಕಳಪೆ ದಾಖಲೆಗಳಿಂದ ಭಾರತ ಪಾರು!

ಕಠಿಣ ಗುರಿ ಬೆನ್ನಟ್ಟಿದ ಭಾರತ ಆರಂಭದಲ್ಲೇ ಸಂಪೂರ್ಣ ಕುಸಿಯಿತು. ನ್ಯೂಜಿಲೆಂಡ್ ವೇಗಿ ಮ್ಯಾಟ್ ಹೆನ್ರಿ ಮೊದಲ ಓವರ್‌ನಲ್ಲೇ ಭಾರತದ ಮೂವರು ಪ್ರಮುಖ ಬ್ಯಾಟರ್‌ಗಳಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಹಂಗಾಮಿ..
India Suffer Heaviest Defeat In 26 Years, avoids two historic lows
ಭಾರತಕ್ಕೆ ಹೀನಾಯ ಸೋಲುSony Liv
Updated on: 

ಮೌಂಟ್ ಮೌಂಗನುಯಿ: ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಭಾರತ ತಂಡ 89 ರನ್ ಗಳಿಗೆ ಆಲೌಟ್ ಆಗಿ 244 ರನ್ ಗಳ ಅಂತರದ ಹೀನಾಯ ಸೋಲು ಕಂಡಿದ್ದು, ಆ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದ ಹೀನಾಯ ದಾಖಲೆ ಬರೆದಿದೆ.

ಶುಕ್ರವಾರ ಬೇ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ 334 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತ ಕೇವಲ 89 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಕಳೆದ 26 ವರ್ಷಗಳಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಭಾರತ ಅನುಭವಿಸಿದ ಅತ್ಯಂತ ದೊಡ್ಡ ಸೋಲಿಗೆ ಸಾಕ್ಷಿಯಾಗಿದೆ.

ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ವಿಲ್ ಯಂಗ್ ಅವರ ಅಮೋಘ ಶತಕದ ನೆರವಿನಿಂದ 50 ಓವರ್‌ಗಳಲ್ಲಿ 333 ರನ್ ಗಳಿಸಿತ್ತು.

ಕಠಿಣ ಗುರಿ ಬೆನ್ನಟ್ಟಿದ ಭಾರತ ಆರಂಭದಲ್ಲೇ ಸಂಪೂರ್ಣ ಕುಸಿಯಿತು. ನ್ಯೂಜಿಲೆಂಡ್ ವೇಗಿ ಮ್ಯಾಟ್ ಹೆನ್ರಿ ಮೊದಲ ಓವರ್‌ನಲ್ಲೇ ಭಾರತದ ಮೂವರು ಪ್ರಮುಖ ಬ್ಯಾಟರ್‌ಗಳಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಹಂಗಾಮಿ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿದರು.

ಹೆನ್ರಿ ತಮ್ಮ ಮಾರಕ ಬೌಲಿಂಗ್ ಮುಂದುವರಿಸಿ ಒಟ್ಟು ಆರು ವಿಕೆಟ್ ಕಬಳಿಸಿದರು. ಭಾರತದ ಪರ ಕೇವಲ ಮೂವರು ಬ್ಯಾಟರ್‌ಗಳು ಮಾತ್ರ ಎರಡಂಕಿ ಮೊತ್ತ ದಾಖಲಿಸಲು ಸಾಧ್ಯವಾಯಿತು. ಉಳಿದವರು ನ್ಯೂಜಿಲೆಂಡ್ ಬೌಲರ್‌ಗಳ ದಾಳಿಗೆ ತತ್ತರಿಸಿ ಪೆವಿಲಿಯನ್ ಸೇರಿದರು. ಈ ಗೆಲುವಿನೊಂದಿಗೆ ನ್ಯೂಜಿಲೆಂಡ್ ಐದು ಪಂದ್ಯಗಳ ಸರಣಿಯಲ್ಲಿ ಅಂತರವನ್ನು 2-1ಕ್ಕೆ ತಗ್ಗಿಸಿದೆ. ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಇದೆ.

India Suffer Heaviest Defeat In 26 Years, avoids two historic lows
4th ODI: ಮ್ಯಾಟ್ ಹೆನ್ರಿ ಮಾರಕ ಬೌಲಿಂಗ್, 89 ರನ್ ಗಳಿಗೇ ಭಾರತ ಆಲೌಟ್, 244 ರನ್ ಅಂತರದ ಹೀನಾಯ ಸೋಲು!

ವಿಲ್ ಯಂಗ್ ಅಮೋಘ ಶತಕ, ಕಿವೀಸ್‌ಗೆ ಬೃಹತ್ ಮೊತ್ತ

ಇದಕ್ಕೂ ಮೊದಲು ಟಾಸ್ ಗೆದ್ದ ಭಾರತ ತಂಡ ನ್ಯೂಜಿಲೆಂಡ್‌ಗೆ ಬ್ಯಾಟಿಂಗ್ ಮಾಡಲು ಆಹ್ವಾನಿಸಿತ್ತು. ಆರಂಭಿಕ ಆಟಗಾರ ವಿಲ್ ಯಂಗ್ ತಮ್ಮ ವೃತ್ತಿಜೀವನದ ಶ್ರೇಷ್ಠ 125 ರನ್ ಗಳಿಸಿ ತಂಡಕ್ಕೆ ಬಲ ತುಂಬಿದರು.

ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಸತತ ಎರಡು ಎಸೆತಗಳಲ್ಲಿ ಯಂಗ್ ನೀಡಿದ ಕ್ಯಾಚ್‌ಗಳನ್ನು ಕೈಚೆಲ್ಲಿದರು. ಈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ಯಂಗ್ ಭರ್ಜರಿ ಶತಕ ಸಿಡಿಸಿದರು.

ಮತ್ತೊಬ್ಬ ಆರಂಭಿಕ ಆಟಗಾರ ಟಿಮ್ ಸೀಫರ್ಟ್ 48 ಎಸೆತಗಳಲ್ಲಿ 58 ರನ್ ಗಳಿಸಿ ಉತ್ತಮ ಆರಂಭ ನೀಡಿದರು. ಬಳಿಕ ಇಶಾನ್ ಕಿಶನ್ ಅದ್ಭುತ ಡೈವಿಂಗ್ ಕ್ಯಾಚ್ ಹಿಡಿದು ಸೀಫರ್ಟ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಫಿನ್ ಅಲೆನ್ 30 ಎಸೆತಗಳಲ್ಲಿ 41 ರನ್ ಗಳಿಸಿದರು.

ರೋಹಿತ್ ಶರ್ಮಾ ಹಿಡಿದ ಅದ್ಭುತ ಕ್ಯಾಚ್‌ಗೆ ಅಲೆನ್ ವಿಕೆಟ್ ಒಪ್ಪಿಸಿದರು. ಭಾರತದ ಪರ ಅಕ್ಷರ್ ಪಟೇಲ್, ಗುರ್ನೂರ್ ಬ್ರಾರ್ ಮತ್ತು ಔಕಿಬ್ ನಬಿ ತಲಾ ಎರಡು ವಿಕೆಟ್ ಪಡೆದರು. ಅರ್ಷದೀಪ್ ಸಿಂಗ್ ಹಾಗೂ ನಮನ್ ಧೀರ್ ತಲಾ ಒಂದು ವಿಕೆಟ್ ಕಬಳಿಸಿದರು.

26 ವರ್ಷಗಳಲ್ಲೇ ಅತ್ಯಂತ ಹೀನಾಯ ಸೋಲು

ಈ ಪಂದ್ಯದಲ್ಲಿ 244 ರನ್‌ಗಳ ಅಂತರದ ಸೋಲು ಅನುಭವಿಸಿರುವ ಭಾರತ, 26 ವರ್ಷಗಳ ಹಿಂದಿನ ಕಹಿ ದಾಖಲೆಯನ್ನು ಮತ್ತೆ ನೆನಪಿಸಿಕೊಂಡಿದೆ. 2000ರ ಅಕ್ಟೋಬರ್‌ನಲ್ಲಿ ಶ್ರೀಲಂಕಾ ವಿರುದ್ಧ 245 ರನ್‌ಗಳ ಅಂತರದಲ್ಲಿ ಸೋತ ಬಳಿಕ ಏಕದಿನ ಕ್ರಿಕೆಟ್‌ನಲ್ಲಿ ಭಾರತ ಅನುಭವಿಸಿದ ಅತ್ಯಂತ ದೊಡ್ಡ ಸೋಲು ಇದಾಗಿದೆ.

ಒಟ್ಟಾರೆ ಏಕದಿನ ಕ್ರಿಕೆಟ್‌ನಲ್ಲಿ ಇದು ಭಾರತದ ಎರಡನೇ ಅತ್ಯಂತ ದೊಡ್ಡ ಸೋಲು. ಇದಲ್ಲದೆ, ನ್ಯೂಜಿಲೆಂಡ್ ವಿರುದ್ಧ ಭಾರತ ದಾಖಲಿಸಿದ ಎರಡನೇ ಅತ್ಯಂತ ಕಡಿಮೆ ಮೊತ್ತವೂ ಇದಾಗಿದೆ. ಭಾರತದ ಪ್ರಮುಖ ಬ್ಯಾಟರ್‌ಗಳೆಲ್ಲ ವಿಫಲರಾಗಿದ್ದು, ತಂಡದ ಬ್ಯಾಟಿಂಗ್ ವಿಭಾಗದ ವೈಫಲ್ಯ ಎದ್ದು ಕಾಣುವಂತಾಯಿತು.

ಎರಡು ಹೀನಾಯ ದಾಖಲೆಗಳಿಂದ ಪಾರಾದ ಭಾರತ!

ಈ ಪಂದ್ಯದಲ್ಲಿ ಭಾರತ 89 ರನ್ ಗಳಿಸುವ ಮೂಲಕ ಎರಡು ಕೆಟ್ಟ ದಾಖಲೆಗಳಿಂದ ಸ್ವಲ್ಪದರಲ್ಲೇ ಪಾರಾಗಿದೆ. ನ್ಯೂಜಿಲೆಂಡ್ ವಿರುದ್ಧ ಭಾರತದ ಅತ್ಯಂತ ಕಡಿಮೆ ಏಕದಿನ ಮೊತ್ತದ ದಾಖಲೆಯಿಂದ ಪಾರಾಗಿದ್ದು, ಈ ಹಿಂದೆ 2010ರಲ್ಲಿ 29.3 ಓವರ್ ನಲ್ಲಿ 88 ರನ್ ಗಳಿಸಿ ಆಲೌಟ್ ಆಗಿತ್ತು. ಆದರೆ ಇಂದು 89 ರನ್ ಗಳಿಸಿ ಈ ಹೀನಾಯ ದಾಖಲೆಯಿಂದ ಪಾರಾಗಿದೆ.

India Suffer Heaviest Defeat In 26 Years, avoids two historic lows
4th ODI: 16 ವರ್ಷಗಳ ಬಳಿಕ ಮತ್ತದೇ ಆಘಾತ, ಒಂದೇ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದ ರೋಹಿತ್ ಶರ್ಮಾ- ವಿರಾಟ್ ಕೊಹ್ಲಿ!

ಅಂತೆಯೇ ಭಾರತ ಏಕದಿನ ಕ್ರಿಕೆಟ್‌ನಲ್ಲಿ ತನ್ನ ಅತ್ಯಂತ ದೊಡ್ಡ ಸೋಲಿನ ದಾಖಲೆಯನ್ನು ತಪ್ಪಿಸಿಕೊಂಡಿದೆ. 2000ರಲ್ಲಿ ಶಾರ್ಜಾದಲ್ಲಿ ಶ್ರೀಲಂಕಾ ವಿರುದ್ಧ 245 ರನ್ ಗಳ ಅಂತರದ ಸೋಲು ಕಂಡಿತ್ತು.

ಅಂದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ 50 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 299 ರನ್ ಗಳಿಸಿತ್ತು. 300 ರನ್ ಗಳ ಬೃಹತ್ ಮೊತ್ತ ಬೆನ್ನು ಹತ್ತಿದ ಭಾರತ 26.3 ಓವರ್ ನಲ್ಲಿ ಕೇವಲ 54 ರನ್ ಗಳಿಗೇ ಆಲೌಟ್ ಆಗಿ 245 ರನ್ ಅಂತರದ ಹೀನಾಯ ಸೋಲು ಕಂಡಿತ್ತು.

ಆದರೆ ನ್ಯೂಜಿಲೆಂಡ್ ವಿರುದ್ಧದ ಸೋಲು ಭಾರತದ ಪಾಲಿಗೆ ದೊಡ್ಡ ಅವಮಾನವಾಗಿದ್ದು, ಮುಂದಿನ ಪಂದ್ಯದಲ್ಲಿ ತಂಡ ಹೇಗೆ ಕಮ್‌ಬ್ಯಾಕ್ ಮಾಡಲಿದೆ ಎಂಬ ಕುತೂಹಲ ಮೂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X