ಎಲ್ಲಾ SENA ದೇಶಗಳಲ್ಲಿ ಶತಕ: ವೆಲ್ಲಿಂಗ್ಟನ್‌ನಲ್ಲಿ ಅಪರೂಪದ ದಾಖಲೆ ಬರೆದ ಕನ್ನಡಿಗ; ಸಚಿನ್, ಕೊಹ್ಲಿ ಸಾಲಿಗೆ ಕೆ.ಎಲ್. ರಾಹುಲ್ ಸೇರ್ಪಡೆ..!

ಇದರೊಂದಿಗೆ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಸೇರಿದಂತೆ ನಾಲ್ಕೂ SENA ರಾಷ್ಟ್ರಗಳಲ್ಲಿ ಟೆಸ್ಟ್ ಶತಕ ಗಳಿಸಿದ ಭಾರತದ ಐದನೇ ಬ್ಯಾಟರ್ ಎಂಬ ಗೌರವಕ್ಕೂ ರಾಹುಲ್ ಪಾತ್ರರಾಗಿದ್ದಾರೆ.
K.L.Rahul
ಕೆ.ಎಲ್. ರಾಹುಲ್
Updated on: 

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಭಾರತದ ಸ್ಟಾರ್ ಬ್ಯಾಟರ್ ಕೆ.ಎಲ್. ರಾಹುಲ್ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ.

ಈ ಸಾಧನೆಯೊಂದಿಗೆ ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಮತ್ತು ಗೌತಮ್ ಗಂಭೀರ್ ಅವರಂತಹ ಆಟಗಾರರ ಸಾಧನೆಯ ಸಾಲಿಗೆ ರಾಹುಲ್ ಸೇರ್ಪಡೆಯಾಗಿದ್ದಾರೆ.

ನ್ಯೂಜಿಲೆಂಡ್ ನೆಲದಲ್ಲಿ ಟೆಸ್ಟ್ ಶತಕ ಗಳಿಸಿದ ಭಾರತದ ನಾಲ್ಕನೇ ಆರಂಭಿಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಅವರು, ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್ ಮೈದಾನದಲ್ಲಿ 209 ಎಸೆತಗಳಲ್ಲಿ ಶತಕ ಪೂರೈಸಿದರು.

ಇದರೊಂದಿಗೆ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಸೇರಿದಂತೆ ನಾಲ್ಕೂ ಸೇನಾ ರಾಷ್ಟ್ರಗಳಲ್ಲಿ ಟೆಸ್ಟ್ ಶತಕ ಗಳಿಸಿದ ಭಾರತದ ಐದನೇ ಬ್ಯಾಟರ್ ಎಂಬ ಗೌರವಕ್ಕೂ ರಾಹುಲ್ ಪಾತ್ರರಾಗಿದ್ದಾರೆ.

ಈ ನಾಲ್ಕೂ ದೇಶಗಳಲ್ಲಿ ಟೆಸ್ಟ್ ಶತಕ ಗಳಿಸಿದ ಭಾರತದ ಮೊದಲ ಆರಂಭಿಕ ಆಟಗಾರ ಎಂಬ ಮತ್ತೊಂದು ವಿಶೇಷ ಸಾಧನೆಯನ್ನೂ ಅವರು ಮಾಡಿದ್ದಾರೆ.

ರಾಹುಲ್ ಅವರ ಈ ಇನ್ನಿಂಗ್ಸ್ ಭರ್ಜರಿ ಹೊಡೆತಗಳು ಅಥವಾ ವೇಗದ ರನ್ ಗಳಿಕೆಯ ಮೇಲೆ ನಿಂತಿರಲಿಲ್ಲ. ಬದಲಿಗೆ, ತಾಳ್ಮೆಯಿಂದ ಬ್ಯಾಟ್ ಬೀಸಿದ ಅವರು ನ್ಯೂಜಿಲೆಂಡ್ ವೇಗದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿ, ಉತ್ತಮ ಆರಂಭವನ್ನು ಭಾರತ ಕೈಚೆಲ್ಲದಂತೆ ನೋಡಿಕೊಂಡರು.

ನ್ಯೂಜಿಲೆಂಡ್‌ನ ವಾತಾವರಣ ಮತ್ತು ಪಿಚ್ ಪರಿಸ್ಥಿತಿಗಳ ಪರಿಚಯವೂ ರಾಹುಲ್‌ಗೆ ನೆರವಾಗಿರಬಹುದು. ಸರಣಿಗೂ ಮುನ್ನ ಅವರು ಮತ್ತು ಯಶಸ್ವಿ ಜೈಸ್ವಾಲ್ ನ್ಯೂಜಿಲೆಂಡ್ ಎ ತಂಡದ ವಿರುದ್ಧ ಅಭ್ಯಾಸ ಪಂದ್ಯಗಳಲ್ಲಿ ಆಡಿದ್ದರು.

ಭಾರತದ ಟೆಸ್ಟ್ ತಂಡದ ಸಿದ್ಧತೆಯ ಭಾಗವಾಗಿ ನಡೆದ ಈ ಪಂದ್ಯಗಳು ಇಬ್ಬರೂ ಬ್ಯಾಟರ್‌ಗಳಿಗೆ ಅಲ್ಲಿನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಅವಕಾಶ ನೀಡಿದ್ದವು. ರಾಹುಲ್ ಒಂದು ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಆಡಿದ್ದರೆ, ಜೈಸ್ವಾಲ್ ಮೂರೂ ಪಂದ್ಯಗಳಲ್ಲಿ ಪಾಲ್ಗೊಂಡಿದ್ದರು.

ಎರಡನೇ ದಿನದಾಟದಲ್ಲಿ ಈ ಸಿದ್ಧತೆಯ ಫಲ ಸ್ಪಷ್ಟವಾಗಿ ಕಾಣಿಸಿತು. ರಾಹುಲ್ ಮತ್ತು ಜೈಸ್ವಾಲ್ ಮೊದಲ ವಿಕೆಟ್‌ಗೆ 130 ರನ್‌ಗಳ ಜೊತೆಯಾಟವಾಡಿದರು. ನ್ಯೂಜಿಲೆಂಡ್ ನೆಲದಲ್ಲಿ ಟೆಸ್ಟ್ ಪಂದ್ಯವೊಂದರಲ್ಲಿ ಭಾರತ ಮೊದಲ ವಿಕೆಟ್‌ಗೆ ಶತಕದ ಜೊತೆಯಾಟವಾಡಿದ್ದು 32 ವರ್ಷಗಳ ಬಳಿಕ ಇದೇ ಮೊದಲು. ಜೈಸ್ವಾಲ್ ಆಕ್ರಮಣಕಾರಿ ಆಟವಾಡಿ ಕೇವಲ 89 ಎಸೆತಗಳಲ್ಲಿ 85 ರನ್ ಗಳಿಸಿದರೆ, ರಾಹುಲ್ ಮತ್ತೊಂದು ತುದಿಯಲ್ಲಿ ತಾಳ್ಮೆಯ ಆಟ ಪ್ರದರ್ಶಿಸಿದರು.

99 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ರಾಹುಲ್, ಜೈಸ್ವಾಲ್ 15 ರನ್‌ಗಳಿಂದ ಶತಕ ವಂಚಿತರಾಗಿ ವಿಕೆಟ್ ಒಪ್ಪಿಸಿದ ಬಳಿಕ ಹೆಚ್ಚಿನ ಜವಾಬ್ದಾರಿ ವಹಿಸಿಕೊಂಡರು. ನಂತರ ದೇವದತ್ ಪಡಿಕ್ಕಲ್ ಅವರೊಂದಿಗೆ ಸೇರಿಕೊಂಡು ಭಾರತದ ಇನ್ನಿಂಗ್ಸ್ ಅನ್ನು ಮೂರನೇ ದಿನಕ್ಕೆ ಕೊಂಡೊಯ್ದರು.

K.L.Rahul
IND vs NZ: ವೆಲ್ಲಿಂಗ್ಟನ್‌ನಲ್ಲಿ ಜೈಸ್ವಾಲ್-ರಾಹುಲ್ ಜುಗಲ್‌ಬಂದಿ: ನ್ಯೂಝಿಲೆಂಡ್ ಬೌಲರ್‌ಗಳ ಬೆವರಿಳಿಸಿದ ಟೀಮ್ ಇಂಡಿಯಾ..!

ಮೂರನೇ ದಿನವೂ ರಾಹುಲ್ ಮತ್ತು ಪಡಿಕ್ಕಲ್ ಉತ್ತಮ ಬ್ಯಾಟಿಂಗ್ ಮುಂದುವರಿಸಿದರು. ನ್ಯೂಜಿಲೆಂಡ್ ಬೌಲರ್‌ಗಳಿಗೆ ಹೆಚ್ಚಿನ ಅವಕಾಶ ನೀಡದೆ ಎಚ್ಚರಿಕೆಯಿಂದ ಆಡಿದರು. ರಾಹುಲ್ ಕೆಟ್ಟ ಎಸೆತಗಳಿಗಾಗಿ ಕಾಯುತ್ತಾ ರನ್ ಗಳಿಸಿದರೆ, ಮತ್ತೊಂದು ತುದಿಯಲ್ಲಿ ಪಡಿಕ್ಕಲ್ ಆತ್ಮವಿಶ್ವಾಸದಿಂದ ಬ್ಯಾಟ್ ಬೀಸಿದರು.

ರಾಹುಲ್‌ಗಿಂತ ಮೊದಲು ಭಾರತದ ಕೇವಲ ನಾಲ್ವರು ಬ್ಯಾಟರ್‌ಗಳು ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ದೇಶಗಳಲ್ಲಿ ಟೆಸ್ಟ್ ಶತಕ ಗಳಿಸಿದ್ದರು. ಅವರಲ್ಲಿ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ರಾಹುಲ್ ದ್ರಾವಿಡ್ ಮತ್ತು ಮೊಹಮ್ಮದ್ ಅಜರುದ್ದೀನ್ ಸೇರಿದ್ದಾರೆ.

ಇದೀಗ ಈ ಸಾಧನೆ ಮಾಡಿದ ಭಾರತದ ಐದನೇ ಆಟಗಾರನಾಗಿ ರಾಹುಲ್ ಹೊರಹೊಮ್ಮಿದ್ದಾರೆ. ಈ ನಾಲ್ಕೂ ದೇಶಗಳಲ್ಲಿ ಟೆಸ್ಟ್ ಶತಕ ಗಳಿಸಿದ ಮೊದಲ ಭಾರತೀಯ ಆರಂಭಿಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಏಷ್ಯಾದ ಬ್ಯಾಟರ್‌ಗಳ ಪೈಕಿ ಈ ನಾಲ್ಕೂ ದೇಶಗಳಲ್ಲಿ ಟೆಸ್ಟ್ ಶತಕ ಗಳಿಸಿದ ಆಟಗಾರರ ವಿಶೇಷ ಪಟ್ಟಿಯಲ್ಲೂ ರಾಹುಲ್ ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಮೊಹಮ್ಮದ್ ಅಜರುದ್ದೀನ್, ಸಚಿನ್ ತೆಂಡೂಲ್ಕರ್, ಸಯೀದ್ ಅನ್ವರ್, ರಾಹುಲ್ ದ್ರಾವಿಡ್, ಯೂನಿಸ್ ಖಾನ್, ಕುಮಾರ ಸಂಗಕ್ಕಾರ, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಇದ್ದಾರೆ.

ಈ ನಾಲ್ಕೂ ದೇಶಗಳಲ್ಲಿ ಆರಂಭಿಕ ಆಟಗಾರನಾಗಿ ಟೆಸ್ಟ್ ಶತಕ ಗಳಿಸಿದ ಸಾಧನೆಯನ್ನು ಪಾಕಿಸ್ತಾನದ ಸಯೀದ್ ಅನ್ವರ್ ಅವರೊಂದಿಗೆ ರಾಹುಲ್ ಹಂಚಿಕೊಂಡಿದ್ದಾರೆ. ಈ ಸಾಧನೆ ಮಾಡಿದ ಮತ್ತೊಬ್ಬ ಆರಂಭಿಕ ಆಟಗಾರ ಸಯೀದ್ ಅನ್ವರ್ ಮಾತ್ರ.

ವರದಿ ಸಿದ್ಧಪಡಿಸುವ ವೇಳೆಗೆ ಭಾರತ ಒಂದು ವಿಕೆಟ್ ನಷ್ಟಕ್ಕೆ 247 ರನ್ ಗಳಿಸಿತ್ತು. ನ್ಯೂಜಿಲೆಂಡ್‌ನ ಮೊದಲ ಇನ್ನಿಂಗ್ಸ್‌ಗಿಂತ 121 ರನ್‌ಗಳ ಹಿನ್ನಡೆಯಲ್ಲಿತ್ತು. ರಾಹುಲ್ ಮತ್ತು ಪಡಿಕ್ಕಲ್ ಕ್ರೀಸ್‌ನಲ್ಲೇ ಮುಂದುವರಿದಿದ್ದು, ಭಾರತೀಯ ಬ್ಯಾಟರ್‌ಗಳ ತಾಳ್ಮೆಯ ಆಟಕ್ಕೆ ನ್ಯೂಜಿಲೆಂಡ್ ಬೌಲರ್‌ಗಳು ಉತ್ತರ ಕಂಡುಕೊಳ್ಳಲು ಪರದಾಡುತ್ತಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X