

ದೋಹಾ: ಸದ್ಯ ನಡೆಯುತ್ತಿರುವ 'ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್' (Rising Stars Asia Cup) ಟೂರ್ನಿಯಲ್ಲಿ, ಭಾರತದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಮತ್ತು ಹಿರಿಯ ಬ್ಯಾಟರ್ ಅಭಿಷೇಕ್ ಶರ್ಮಾ ಅವರ ನಡುವಿನ ಆತ್ಮೀಯ ಸುಂದರ ಕ್ಷಣದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಇಬ್ಬರೂ ಆಟಗಾರರು ಅಭಿಮಾನಿಗಳಿಗೆ ಆಟೋಗ್ರಾಫ್ ನೀಡುತ್ತಿದ್ದಾಗ, ಯುವ ಅಭಿಮಾನಿಯೊಬ್ಬ ಅವರನ್ನು ಕೇವಲ ಹೆಸರಿನಿಂದ (ಅಭಿಷೇಕ್ ಮತ್ತು ವೈಭವ್ ಎಂದು) ಕರೆದಿದ್ದಾರೆ. ಕೂಡಲೇ ಮಧ್ಯಪ್ರವೇಶಿಸಿದ ವೈಭವ್, ಅಭಿಷೇಕ್ ಅವರನ್ನು 'ಭಯ್ಯಾ' (ಅಣ್ಣ) ಎಂದು ಕರೆಯುವಂತೆ ಆ ಅಭಿಮಾನಿಗೆ ಬುದ್ದಿಮಾತು ಹೇಳಿದ್ದಾರೆ.
ಭಾರತ 'ಎ' ಮತ್ತು ಪಾಕಿಸ್ತಾನ 'ಎ' ತಂಡಗಳ ನಡುವಿನ ಬಹುನಿರೀಕ್ಷಿತ ಪಂದ್ಯಕ್ಕೂ ಮುನ್ನವೇ, ಈ ವಿಡಿಯೋ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದೆ. 'ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್'ನಲ್ಲಿ ನೇಪಾಳದ ವಿರುದ್ಧ ಭಾರತ ಭರ್ಜರಿ ಜಯ ಸಾಧಿಸಿದ ನಂತರ ಈ ಘಟನೆ ನಡೆದಿದೆ.
ಅಭಿಷೇಕ್ ಶರ್ಮಾ ಮತ್ತು ವೈಭವ್ ಸೂರ್ಯವಂಶಿ ಮೈದಾನದ ಬೌಂಡರಿ ಗೆರೆಯ ಬಳಿ ಅಭಿಮಾನಿಗಳೊಂದಿಗೆ ಸಂವಾದ ನಡೆಸುತ್ತಾ ಆಟೋಗ್ರಾಫ್ ನೀಡುತ್ತಿದ್ದರು. ಆಗ ಯುವ ಅಭಿಮಾನಿಯೊಬ್ಬ ತನ್ನ ಫೋನ್ ಹಿಡಿದುಕೊಂಡು, ಅವರೊಂದಿಗೆ ಫೋಟೋ ತೆಗೆದುಕೊಳ್ಳುವ ಆಸೆಯಿಂದ ಇಬ್ಬರ ಬಳಿ ಬಂದಿದ್ದಾನೆ.
ಆ ಹುಡುಗ ಅವರನ್ನು ಕರೆಯುವಾಗ 'ಅಭಿಷೇಕ್' ಮತ್ತು 'ವೈಭವ್' ಎಂದು ನೇರವಾಗಿ ಹೆಸರಿಡಿದು ಕರೆದಿದ್ದಾನೆ. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ವೈಭವ್, "ಅಭಿಷೇಕ್ ಭಯ್ಯಾ ಎಂದು ಕರೆಯಬೇಕು, ಕೇವಲ ಅಭಿಷೇಕ್ ಎನ್ನಬಾರದು" ಎಂದು ತಿದ್ದಿದ್ದಾರೆ.
ವೈಭವ್ ಅವರ ಈ ಮುಗ್ಧ ಹಾಗೂ ಗೌರವಯುತ ಪ್ರತಿಕ್ರಿಯೆ ಆನ್‌ಲೈನ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸಾಕಷ್ಟು ವೀಕ್ಷಣೆಗಳನ್ನು ಪಡೆಯುತ್ತಿದೆ.