'ಭಾರತ ತಂಡಕ್ಕೆ ಮತ್ತೊಬ್ಬ RCB ಸ್ಟಾರ್ ಆಟಗಾರನನ್ನು ಕರೆತನ್ನಿ'; ಆಟಗಾರರ ವಯಸ್ಸನ್ನು ನೋಡಬೇಡಿ ಎಂದ ಸುನೀಲ್ ಗವಾಸ್ಕರ್!

2021ರಲ್ಲಿ ಕೊನೆಯ ಬಾರಿಗೆ ಭಾರತ ತಂಡದ ಪರ ಆಡಿದ್ದ ಅವರು, 2025 ಮತ್ತು 2026ರ ಐಪಿಎಲ್ ಆವೃತ್ತಿಗಳಲ್ಲಿ ಆರ್‌ಸಿಬಿ ಪ್ರಶಸ್ತಿಗಳನ್ನು ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.
Sunil Gavaskar
ಸುನೀಲ್ ಗವಾಸ್ಕರ್Photo | AFP
Updated on: 

ಭಾರತದ ಟಿ20 ಅಂತರರಾಷ್ಟ್ರೀಯ (T20I) ತಂಡಕ್ಕೆ ಭುವನೇಶ್ವರ್ ಕುಮಾರ್ ಅವರ ಮರಳುವಿಕೆಯು, ತಂಡದ ಆಡಳಿತ ಮಂಡಳಿ ಇದೀಗ ಅನುಭವಕ್ಕೂ ಆದ್ಯತೆ ನೀಡುತ್ತಿದೆ ಎಂಬುದಕ್ಕೆ ಸ್ಪಷ್ಟ ಸೂಚನೆಯಾಗಿದೆ. ಈ ಅನುಭವಿ ವೇಗದ ಬೌಲರ್ ತಂಡಕ್ಕೆ ಸೇರ್ಪಡೆಗೊಂಡಿರುವ ಬೆನ್ನಲ್ಲೇ, ರಾಷ್ಟ್ರೀಯ ತಂಡಕ್ಕೆ ಮರಳಲು ತುದಿಗಾಲಲ್ಲಿ ಕಾಯುತ್ತಿರುವ ಮೊಹಮ್ಮದ್ ಶಮಿಯತ್ತ ಇದೀಗ ಎಲ್ಲರ ಚಿತ್ತ ನೆಟ್ಟಿದೆ. ದೇಶೀಯ ಕ್ರಿಕೆಟ್ ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರೂ, ರಾಷ್ಟ್ರೀಯ ತಂಡದಲ್ಲಿ ಶಮಿ ಅವರ ಭವಿಷ್ಯ ಇನ್ನೂ ಅನಿಶ್ಚಿತವಾಗಿಯೇ ಉಳಿದಿದೆ. ತಂಡದ ಬೌಲಿಂಗ್ ವಿಭಾಗದಲ್ಲಿ ಎಲ್ಲರ ಗಮನ ಭುವನೇಶ್ವರ್ ಮತ್ತು ಶಮಿ ಅವರ ಮೇಲಿರುವಾಗ, ಭಾರತದ ಮಾಜಿ ಆಟಗಾರ ಸುನೀಲ್ ಗವಾಸ್ಕರ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮತ್ತೊಬ್ಬ ಆಟಗಾರ ಕೃನಾಲ್ ಪಾಂಡ್ಯ ಕೂಡ ಭಾರತ ತಂಡಕ್ಕೆ ಮರಳಬೇಕು ಎಂದಿದ್ದಾರೆ.

'ಅತ್ಯುತ್ತಮ ಕ್ರಿಕೆಟಿಗ, ನಮ್ಮಲ್ಲಿರುವ ಅತ್ಯಂತ ಚಾಣಾಕ್ಷ ಕ್ರಿಕೆಟಿಗರಲ್ಲಿ ಇವರು ಒಬ್ಬರು. ಇವರ ಬೌಲಿಂಗ್ ಶೈಲಿಯನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಇವರು ಚೆಂಡಿಗೆ ಹೆಚ್ಚು ಟರ್ನ್ ನೀಡುವುದಿಲ್ಲ, ಆದರೆ ತಮ್ಮ ಬೌಲಿಂಗ್‌ನ ಲೈನ್ ಮತ್ತು ಲೆಂತ್‌ಗಳನ್ನು ಬಹಳ ಚಾಣಾಕ್ಷತನದಿಂದ ಬದಲಾಯಿಸುತ್ತಾರೆ. ಬ್ಯಾಟರ್‌ನ ಮನಸ್ಥಿತಿಯನ್ನು ಅರಿತುಕೊಂಡು, ಪ್ಯಾಡ್‌ಗಳನ್ನು ಗುರಿಯಾಗಿಸಿ ಬೌಲ್ ಮಾಡುತ್ತಾರೆ. ಇವರು ಆಗೊಮ್ಮೆ ಈಗೊಮ್ಮೆ ಬೌನ್ಸರ್‌ಗಳನ್ನು ಎಸೆಯುವುದನ್ನೂ ನೀವು ನೋಡಿರಬಹುದು; ಇವರು ಸದಾ ಬ್ಯಾಟರ್ ವಿರುದ್ಧ ಯೋಚಿಸುತ್ತಾ, ತಂತ್ರಗಳನ್ನು ರೂಪಿಸುತ್ತಿರುತ್ತಾರೆ. ಬ್ಯಾಟರ್‌ನ ವಿಕೆಟ್ ಪಡೆಯಲು ಸಾಧ್ಯವಾಗದಿದ್ದರೂ, ಕನಿಷ್ಠ ಪಕ್ಷ ಅವರ ರನ್ ಗಳಿಕೆಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಾರೆ' ಎಂದು ಗವಾಸ್ಕರ್ 'ಜಿಯೋಸ್ಟಾರ್'ಗೆ ತಿಳಿಸಿದರು.

'ಬ್ಯಾಟರ್ ಆಗಿ ಹಾಗೂ ಬೌಂಡರಿ ಲೈನ್ ಬಳಿ ಫೀಲ್ಡರ್ ಆಗಿ, ಅವರು ಒಬ್ಬ ಅತ್ಯುತ್ತಮ ಕ್ರಿಕೆಟಿಗ. ವಿಶ್ವಕಪ್‌ಗಳನ್ನು ಗೆಲ್ಲಬೇಕೆಂದರೆ, ವಿಶ್ವಕಪ್ ಗೆಲ್ಲಿಸಿಕೊಡಬಲ್ಲರು ಎಂದು ನಿಮಗೆ ಅನಿಸುವ ಆಟಗಾರರನ್ನೇ ನೀವು ಆಯ್ಕೆ ಮಾಡಿಕೊಳ್ಳಬೇಕು ಎಂದು ನಾನು ನಂಬುತ್ತೇನೆ' ಎಂದು ಅವರು ಹೇಳಿದರು.

Sunil Gavaskar
ಟೀಂ ಇಂಡಿಯಾಗೆ RCB ಆಟಗಾರ ಕಂಬ್ಯಾಕ್: ಅಜಿತ್ ಅಗರ್ಕರ್ ಹೊರಬಿದ್ದ ಬೆನ್ನಲ್ಲೇ BCCI ಅಚ್ಚರಿ ನಿರ್ಧಾರ; ನ್ಯೂಜಿಲೆಂಡ್ ವಿರುದ್ಧ ಬ್ಲೂ ಜೆರ್ಸಿಯಲ್ಲಿ ಭುವಿ!

2021ರಲ್ಲಿ ಕೊನೆಯ ಬಾರಿಗೆ ಭಾರತ ತಂಡದ ಪರ ಆಡಿದ್ದ ಕೃನಾಲ್, 2025 ಮತ್ತು 2026ರ ಐಪಿಎಲ್ ಆವೃತ್ತಿಗಳಲ್ಲಿ ಆರ್‌ಸಿಬಿ ಪ್ರಶಸ್ತಿಗಳನ್ನು ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಇತ್ತೀಚಿನ ಸೀಸನ್‌ನಲ್ಲಿ, ಅವರು 16 ಪಂದ್ಯಗಳಲ್ಲಿ 14 ವಿಕೆಟ್‌ಗಳನ್ನು ಕಬಳಿಸುವುದರ ಜೊತೆಗೆ 226 ರನ್‌ಗಳನ್ನೂ ಗಳಿಸಿದರು.

ಭಾರತ ತಂಡದ ಮಾಜಿ ನಾಯಕ, 'ಆಟಗಾರರ ವಯಸ್ಸನ್ನು ನೋಡಬೇಡಿ. ಅದು ಮುಖ್ಯವಲ್ಲ. ಅವರು ಐಪಿಎಲ್ ಆಡುತ್ತಿದ್ದಾರೆ ಎಂದರೆ, ಅವರು ದೈಹಿಕವಾಗಿ ಸದೃಢವಾಗಿದ್ದಾರೆ ಎಂದೇ ಅರ್ಥ. ಅವರು ದೇಶೀಯ ಕ್ರಿಕೆಟ್ ಆಡುತ್ತಿದ್ದರೆ, ಅವರು ಫಿಟ್ ಆಗಿದ್ದಾರೆ ಎಂದೇ ಭಾವಿಸಬೇಕು; ಮತ್ತು ಅಲ್ಲಿ ಅವರು ಉತ್ತಮ ಪ್ರದರ್ಶನ ನೀಡಿದ್ದರೆ, ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಿಕೊಳ್ಳಿ. ಈ ರೀತಿಯಾಗಿಯೇ ನೀವು ಮುಂದುವರಿಯಬೇಕು' ಎಂದು ಗವಾಸ್ಕರ್ ತಮ್ಮ ಮಾತನ್ನು ಮುಕ್ತಾಯಗೊಳಿಸಿದರು.

Sunil Gavaskar
RCB ಪರ ಭುವಿ ತೋರಿದ ಪ್ರದರ್ಶನವೇ ಟೀಂ ಇಂಡಿಯಾ ಕಂಬ್ಯಾಕ್‌ಗೆ ಮುಖ್ಯ ಕಾರಣ; ಅಚ್ಚರಿ ವ್ಯಕ್ತಪಡಿಸಿದ ದಿನೇಶ್ ಕಾರ್ತಿಕ್!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com