ಇಂದು ಭಾರತ-ನ್ಯೂಜಿಲೆಂಡ್ ಟಿ20 ಕದನ; ಆಡುವ 11ರ ಬಳಗದಲ್ಲಿ ಯಾರಿಗೆಲ್ಲಾ ಸ್ಥಾನ? ಗಂಭೀರ್‌ಗೆ ಎದುರಾದ ಹೊಸ ಆಯ್ಕೆ ಸವಾಲು!

ಯುವ ಪ್ರತಿಭೆ ವೈಭವ್ ಸೂರ್ಯವಂಶಿಗೆ ಸದ್ಯಕ್ಕೆ ತಂಡದಲ್ಲಿ ಸ್ಥಾನವಿಲ್ಲ ಎಂದು ನಾಯಕ ಶ್ರೇಯಸ್ ಅಯ್ಯರ್ ಈಗಾಗಲೇ ಸ್ಪಷ್ಟಪಡಿಸಿದ್ದು, ಮುಖ್ಯ ಕೋಚ್ ಗೌತಮ್ ಗಂಭೀರ್ ಮುಂದಿರುವ ಆಯ್ಕೆಯ ಸವಾಲುಗಳು ಮತ್ತಷ್ಟು..
Tough Calls Await Gautam Gambhir Beyond Sooryavanshi
ಭಾರತ ನ್ಯೂಜಿಲೆಂಡ್ ಪಂದ್ಯಕ್ಕೆ ಟೀಂ ಇಂಡಿಯಾ
Updated on: 

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ಪ್ರವಾಸ ಆರಂಭಿಸಿರುವ ಭಾರತ ತಂಡ ಗುರುವಾರ ನಡೆಯಲಿರುವ ಮೊದಲ ಟಿ20 ಪಂದ್ಯದಲ್ಲಿ ಆತಿಥೇಯರನ್ನು ಎದುರಿಸಲು ಸಜ್ಜಾಗಿದೆ.

ಸರಣಿಯ ಆರಂಭಿಕ ಪಂದ್ಯದಲ್ಲೇ ಟೀಮ್ ಇಂಡಿಯಾದ ಪ್ಲೇಯಿಂಗ್ XI ಹೇಗಿರಲಿದೆ ಎಂಬ ಕುತೂಹಲ ಮೂಡಿದೆ. ಯುವ ಪ್ರತಿಭೆ ವೈಭವ್ ಸೂರ್ಯವಂಶಿಗೆ ಸದ್ಯಕ್ಕೆ ತಂಡದಲ್ಲಿ ಸ್ಥಾನವಿಲ್ಲ ಎಂದು ನಾಯಕ ಶ್ರೇಯಸ್ ಅಯ್ಯರ್ ಈಗಾಗಲೇ ಸ್ಪಷ್ಟಪಡಿಸಿದ್ದು, ಮುಖ್ಯ ಕೋಚ್ ಗೌತಮ್ ಗಂಭೀರ್ ಮುಂದಿರುವ ಆಯ್ಕೆಯ ಸವಾಲುಗಳು ಮತ್ತಷ್ಟು ಹೆಚ್ಚಿವೆ.

ಈ ನಡುವೆ ಅನುಭವಿ ವೇಗದ ಬೌಲರ್ ಭುವನೇಶ್ವರ್ ಕುಮಾರ್ ತಂಡಕ್ಕೆ ಮರಳಿರುವುದು ಈ ಸರಣಿಯ ವಿಶೇಷತೆಗಳಲ್ಲಿ ಒಂದಾಗಿದೆ. ಆದರೆ, ಅಂತಿಮ ಹನ್ನೊಂದರ ಬಳಗದಲ್ಲಿ ಹೆಚ್ಚುವರಿ ಸ್ಪಿನ್ನರ್‌ಗೆ ಅವಕಾಶ ನೀಡಬೇಕೇ ಅಥವಾ ಮತ್ತೊಬ್ಬ ವೇಗದ ಬೌಲರ್‌ಗೆ ಮಣೆ ಹಾಕಬೇಕೇ ಎಂಬುದು ತಂಡದ ಆಡಳಿತ ಮಂಡಳಿಯ ಮುಂದಿರುವ ಪ್ರಮುಖ ಪ್ರಶ್ನೆಯಾಗಿದೆ.

ಅಭಿಷೇಕ್ ಶರ್ಮಾ ಜೊತೆ ಸಂಜು ಸ್ಯಾಮ್ಸನ್ ಓಪನಿಂಗ್!

ನಾಯಕ ಶ್ರೇಯಸ್ ಅಯ್ಯರ್ ಬುಧವಾರದ ಪತ್ರಿಕಾಗೋಷ್ಠಿಯಲ್ಲಿ ನೀಡಿದ ಮಾಹಿತಿ ಪ್ರಕಾರ, ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಭಾರತದ ಪರ ಇನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ. ಹೀಗಾಗಿ, ಯುವ ಆಟಗಾರ ವೈಭವ್ ಸೂರ್ಯವಂಶಿ ಮತ್ತೊಮ್ಮೆ ಬೆಂಚ್‌ನಲ್ಲೇ ಕೂರಬೇಕಾಗಬಹುದು.

ಅಂತೆಯೇ ಇಶಾನ್ ಕಿಶನ್ ಮೂರನೇ ಕ್ರಮಾಂಕದಲ್ಲಿ ಆಡಲಿದ್ದು, ನಾಯಕ ಶ್ರೇಯಸ್ ಅಯ್ಯರ್ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ನಿರೀಕ್ಷೆಯಿದೆ. ಕಳೆದ ಒಂದು ವರ್ಷದಿಂದ ಭಾರತ ತಂಡದಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿರುವ ತಿಲಕ್ ವರ್ಮಾ ಮತ್ತೊಮ್ಮೆ ಫಿನಿಶರ್ ಜವಾಬ್ದಾರಿ ವಹಿಸಿಕೊಳ್ಳುವ ಸಾಧ್ಯತೆಯಿದೆ.

ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಗಮನ ಸೆಳೆದ ನಮನ್ ಧೀರ್ ಆರನೇ ಕ್ರಮಾಂಕದಲ್ಲಿ ಮುಂದುವರಿಯುವ ನಿರೀಕ್ಷೆಯಿದೆ. ಆದರೆ, ಅವರ ಬದಲಿಗೆ ಶಿವಂ ದುಬೆ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಆಯ್ಕೆಯೂ ಇದೆ.

ಭುವನೇಶ್ವರ್ ಕುಮಾರ್‌ಗೆ ಸ್ಥಾನ?

ಆಲ್‌ರೌಂಡರ್‌ಗಳಾದ ನಿತೀಶ್ ಕುಮಾರ್ ರೆಡ್ಡಿ ಮತ್ತು ಅಕ್ಷರ್ ಪಟೇಲ್ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ. ವೇಗದ ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್ ಮತ್ತು ಅರ್ಷದೀಪ್ ಸಿಂಗ್ ಪ್ರಮುಖ ಆಯ್ಕೆಗಳಾಗಿದ್ದಾರೆ.

ಇನ್ನುಳಿದ ಒಂದು ಸ್ಥಾನಕ್ಕಾಗಿ ಸ್ಪಿನ್ನರ್ ವರುಣ್ ಚಕ್ರವರ್ತಿ ಹಾಗೂ ವೇಗದ ಬೌಲರ್‌ಗಳಾದ ಮಯಾಂಕ್ ಯಾದವ್ ಮತ್ತು ಪ್ರಿನ್ಸ್ ಯಾದವ್ ನಡುವೆ ಪೈಪೋಟಿ ಇದೆ. ಗಾಯದಿಂದ ಚೇತರಿಸಿಕೊಂಡಿರುವ ವರುಣ್ ಚಕ್ರವರ್ತಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

ಆದರೆ, ನ್ಯೂಜಿಲೆಂಡ್‌ನ ಪಿಚ್‌ಗಳಲ್ಲಿ ಸಾಮಾನ್ಯವಾಗಿ ವೇಗ ಮತ್ತು ಬೌನ್ಸ್‌ಗೆ ನೆರವು ಸಿಗುವುದರಿಂದ ಹೆಚ್ಚುವರಿ ವೇಗದ ಬೌಲರ್‌ಗೆ ಅವಕಾಶ ನೀಡುವ ಸಾಧ್ಯತೆಯೂ ಇದೆ. ಹೀಗಾಗಿ, ಸ್ಪಿನ್ನರ್‌ ವರುಣ್ ಚಕ್ರವರ್ತಿಯನ್ನು ಆಡಿಸಬೇಕೇ ಅಥವಾ ಪ್ರಿನ್ಸ್ ಯಾದವ್‌ಗೆ ಅವಕಾಶ ನೀಡಬೇಕೇ ಎಂಬ ನಿರ್ಧಾರ ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ಶ್ರೇಯಸ್ ಅಯ್ಯರ್ ಪಾಲಿಗೆ ಸವಾಲಾಗಿದೆ.

ನ್ಯೂಜಿಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI ಇಂತಿದೆ

  • ಸಂಜು ಸ್ಯಾಮ್ಸನ್ (ವಿಕೆಟ್‌ ಕೀಪರ್)

  • ಅಭಿಷೇಕ್ ಶರ್ಮಾ

  • ಇಶಾನ್ ಕಿಶನ್

  • ಶ್ರೇಯಸ್ ಅಯ್ಯರ್ (ನಾಯಕ)

  • ತಿಲಕ್ ವರ್ಮಾ

  • ನಮನ್ ಧೀರ್

  • ನಿತೀಶ್ ಕುಮಾರ್ ರೆಡ್ಡಿ

  • ಅಕ್ಷರ್ ಪಟೇಲ್

  • ಭುವನೇಶ್ವರ್ ಕುಮಾರ್

  • ಪ್ರಿನ್ಸ್ ಯಾದವ್ / ವರುಣ್ ಚಕ್ರವರ್ತಿ

  • ಅರ್ಷದೀಪ್ ಸಿಂಗ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com