

ಲಾಹೋರ್: ತ್ರಿಕೋನ ಸರಣಿ ಆಡುತ್ತಿರುವ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಮತ್ತೊಂದು ಬರೆ ಹಾಕಿದ್ದು, ತಂಡದ ಸ್ಟಾರ್ ವೇಗಿಗೆ ದುಬಾರಿ ದಂಡ ಹೇರಿದೆ.
ಇಂಗ್ಲೆಂಡ್ ವಿರುದ್ಧದ ತ್ರಿಕೋನ ಸರಣಿಯ ಪಂದ್ಯದಲ್ಲಿ ಆಟದ ನಿಯಮ ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ಬುಧವಾರ ಪಾಕಿಸ್ತಾನದ ಸ್ಟಾರ್ ವೇಗಿ ಹ್ಯಾರಿಸ್ ರೌಫ್ಗೆ ಪಂದ್ಯದ ಸಂಭಾವನೆಯ ಶೇ.20ರಷ್ಟು ದಂಡ ವಿಧಿಸಲಾಗಿದೆ. ಮಾತ್ರವಲ್ಲದೇ ಅಮಾನತು ಭೀತಿಯನ್ನೂ ಎದುರಿಸುವಂತಾಗಿದೆ.
ಇದೇ ವೇಳೆ ನಿಧಾನಗತಿಯಲ್ಲಿ ಓವರ್ಗಳನ್ನು ಪೂರ್ಣಗೊಳಿಸಿದ್ದಕ್ಕಾಗಿ ಇಂಗ್ಲೆಂಡ್ ತಂಡಕ್ಕೂ ದಂಡ ವಿಧಿಸಲಾಗಿದೆ.
ಭಾನುವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಒಂದು ವಿಕೆಟ್ನ ರೋಚಕ ಗೆಲುವು ಸಾಧಿಸಿತ್ತು. ಶಾದಾಬ್ ಖಾನ್ ಶತಕ ಸಿಡಿಸಿದರೆ, ರೌಫ್ ಅವರೊಂದಿಗೆ ಕೊನೆಯ ವಿಕೆಟ್ಗೆ ನಿರ್ಣಾಯಕ ಜೊತೆಯಾಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು.
ಇಂಗ್ಲೆಂಡ್ ನೀಡಿದ್ದ 243 ರನ್ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ 154 ರನ್ಗಳಿಗೆ 9 ವಿಕೆಟ್ ಕಳೆದುಕೊಂಡು ಸೋಲಿನ ಅಂಚಿನಲ್ಲಿತ್ತು. ಈ ಹಂತದಲ್ಲಿ ಶಾದಾಬ್ ಮತ್ತು ರೌಫ್ 89 ರನ್ಗಳ ಜೊತೆಯಾಟವಾಡಿ ತಂಡಕ್ಕೆ ಜಯ ತಂದುಕೊಟ್ಟರು. ಕೊನೆಯ ರನ್ ಗಳಿಸುವ ಮೂಲಕ ರೌಫ್ ಗೆಲುವು ಖಚಿತಪಡಿಸಿದ್ದರು.
ವಿಲ್ ಜ್ಯಾಕ್ಸ್ ಜೊತೆ ವಾಗ್ವಾದ; ಅಂಪೈರ್ ಎಚ್ಚರಿಕೆಯನ್ನೂ ನಿರ್ಲಕ್ಷಿಸಿದ ರೌಫ್
ಪಂದ್ಯದ 46ನೇ ಓವರ್ನ ಅಂತ್ಯದಲ್ಲಿ ವೈಡ್ಗಾಗಿ ಮನವಿ ಮಾಡಿದ ರೌಫ್, ಇಂಗ್ಲೆಂಡ್ ಆಲ್ರೌಂಡರ್ ವಿಲ್ ಜ್ಯಾಕ್ಸ್ ಜೊತೆ ವಾಗ್ವಾದಕ್ಕಿಳಿದಿದ್ದರು. ಈ ವೇಳೆ ಅಂಪೈರ್ ಶರ್ಫುದ್ದೌಲಾ ಇಬ್ನೆ ಶಾಹಿದ್ ಎಚ್ಚರಿಕೆ ನೀಡಿದರೂ ರೌಫ್ ತಮ್ಮ ವಾದವನ್ನು ಮುಂದುವರಿಸಿದ್ದರು ಎಂದು ಐಸಿಸಿ ತಿಳಿಸಿದೆ.
"ರೌಫ್ ತಮ್ಮ ಬ್ಯಾಟ್ ಎತ್ತಿ ತೋರಿಸಿದ್ದಲ್ಲದೆ, ಅಂಪೈರ್ ಎಚ್ಚರಿಕೆ ನೀಡಿದ ನಂತರವೂ ವಾಗ್ವಾದ ಮುಂದುವರಿಸಿದರು. ಬಳಿಕ ಜ್ಯಾಕ್ಸ್ ಕಡೆಗೆ ತೆರಳುವಾಗ ಅಂಪೈರ್ ಅವರನ್ನು ತಾಗಿಕೊಂಡು ಹಾದುಹೋದರು" ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ರೌಫ್ ಅವರ ವರ್ತನೆಯು ಆಟದ ಸ್ಫೂರ್ತಿಗೆ ವಿರುದ್ಧವಾಗಿದೆ ಎಂದು ಐಸಿಸಿ ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ ಅವರ ಪಂದ್ಯದ ಸಂಭಾವನೆಯ ಶೇ.20ರಷ್ಟು ದಂಡ ವಿಧಿಸಲಾಗಿದ್ದು, ಶಿಸ್ತು ದಾಖಲೆಗೆ ಒಂದು ಡಿಮೆರಿಟ್ ಅಂಕವನ್ನೂ ಸೇರಿಸಲಾಗಿದೆ.
ಡಿಮೆರಿಟ್ ಅಂಕ 5ಕ್ಕೆ ಏರಿಕೆ; ಅಮಾನತು ಸಾಧ್ಯತೆ
ಕಳೆದ 24 ತಿಂಗಳ ಅವಧಿಯಲ್ಲಿ ರೌಫ್ ಮೂರನೇ ಬಾರಿಗೆ ಶಿಸ್ತು ಉಲ್ಲಂಘನೆ ಮಾಡಿದಂತಾಗಿದೆ. ಹೊಸ ಅಂಕ ಸೇರ್ಪಡೆಯೊಂದಿಗೆ ಅವರ ಒಟ್ಟು ಡಿಮೆರಿಟ್ ಅಂಕಗಳ ಸಂಖ್ಯೆ ಐದಕ್ಕೆ ಏರಿದೆ. ಐಸಿಸಿ ನಿಯಮದ ಪ್ರಕಾರ, 24 ತಿಂಗಳ ಅವಧಿಯಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಡಿಮೆರಿಟ್ ಅಂಕಗಳನ್ನು ಗಳಿಸಿದ ಆಟಗಾರನಿಗೆ ಎರಡು ಅಮಾನತು ಅಂಕಗಳು ಅನ್ವಯಿಸುತ್ತವೆ. ಇದರ ಪರಿಣಾಮವಾಗಿ ಒಂದು ಟೆಸ್ಟ್ ಪಂದ್ಯ, ಎರಡು ಏಕದಿನ ಪಂದ್ಯಗಳು ಅಥವಾ ಎರಡು ಟಿ20 ಪಂದ್ಯಗಳಿಂದ ನಿಷೇಧ ಎದುರಾಗಬಹುದು.
ಕಳೆದ ವರ್ಷ ಏಷ್ಯಾ ಕಪ್ನಲ್ಲಿ ಭಾರತದ ವಿರುದ್ಧ ನಡೆದ ಮೂರು ಪಂದ್ಯಗಳಲ್ಲಿ ಶಿಸ್ತು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ರೌಫ್ ಎರಡು ಏಕದಿನ ಪಂದ್ಯಗಳಿಂದ ನಿಷೇಧಕ್ಕೊಳಗಾಗಿದ್ದರು. ಒಂದು ವೇಳೆ ಅವರ ಡಿಮೆರಿಟ್ ಅಂಕಗಳ ಸಂಖ್ಯೆ ಎಂಟಕ್ಕೆ ತಲುಪಿದರೆ, ಅಮಾನತು ಶಿಕ್ಷೆ ದುಪ್ಪಟ್ಟಾಗಲಿದೆ ಎಂದು ಐಸಿಸಿ ನಿಯಮಗಳು ತಿಳಿಸುತ್ತವೆ.
ಇಂಗ್ಲೆಂಡ್ಗೂ ದಂಡ
ಇದೇ ಪಂದ್ಯದಲ್ಲಿ ನಿಗದಿತ ಸಮಯದೊಳಗೆ ಬೌಲಿಂಗ್ ಮುಗಿಸಲು ವಿಫಲವಾದ ಇಂಗ್ಲೆಂಡ್ ತಂಡಕ್ಕೆ ಪಂದ್ಯದ ಸಂಭಾವನೆಯ ಶೇ.15ರಷ್ಟು ದಂಡ ವಿಧಿಸಲಾಗಿದೆ. ನಿಗದಿತ ಗುರಿಗಿಂತ ಮೂರು ಓವರ್ಗಳನ್ನು ಕಡಿಮೆ ಬೌಲಿಂಗ್ ಮಾಡಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ಟೂರ್ನಿಯಿಂದ ಹೊರಬಿದ್ದ ಇಂಗ್ಲೆಂಡ್
ಇನ್ನು ತ್ರಿಕೋನ ಸರಣಿಯಲ್ಲಿ ಮೊದಲ ಮೂರು ಪಂದ್ಯಗಳಲ್ಲೂ ಸೋಲು ಕಂಡಿದ್ದ ಇಂಗ್ಲೆಂಡ್ ತಂಡ ಫೈನಲ್ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ. ಇದೀಗ ಲಾಹೋರ್ನಲ್ಲಿ ಶನಿವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.