

ದುಬೈ: ಇಂಗ್ಲೆಂಡ್ ಪ್ರವಾಸದಲ್ಲಿ ಹೀನಾಯ ಪ್ರದರ್ಶನ ತೋರಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಪಾಕಿಸ್ತಾನ ಕ್ರಿಕೆಟ್ ತಂಡ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ ವಿರುದ್ಧ ಐಸ್ ಲ್ಯಾಂಡ್ ಕ್ರಿಕೆಟ್ ಮಂಡಳಿ ಭೀಕರ ಟ್ರೋಲ್ ಮಾಡಿದೆ.
ಹೌದು.. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನ ತಂಡ ಸತತ ಎರಡು ಪಂದ್ಯಗಳಲ್ಲಿ ಸೋಲು ಕಂಡಿರುವ ಹಿನ್ನೆಲೆಯಲ್ಲಿ PCB ಕೈಗೊಂಡ ಆಯ್ಕೆ ನಿರ್ಧಾರಗಳ ಬಗ್ಗೆ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಎರಡನೇ ಟೆಸ್ಟ್ ಬಳಿಕ ಪಾಕಿಸ್ತಾನ ಮಂಡಳಿ ಏಳು ಆಟಗಾರರನ್ನು ತವರಿಗೆ ಕಳುಹಿಸುವ ನಿರ್ಧಾರ ಕೈಗೊಂಡಿತ್ತು.
ಶಾಹಿದ್ ಅಫ್ರಿದಿ, ಮೊಹಮ್ಮದ್ ಯೂಸುಫ್ ಹಾಗೂ ರಶೀದ್ ಲತೀಫ್ ಸೇರಿದಂತೆ ಪಾಕಿಸ್ತಾನದ ಹಲವು ಮಾಜಿ ಆಟಗಾರರೂ ಪಾಕಿಸ್ತಾನ ತಂಡದ ಪ್ರದರ್ಶನ ಹಾಗೂ ಆಯ್ಕೆ ನೀತಿಯನ್ನು ಟೀಕಿಸಿದ್ದರು.
ಈ ನಡುವೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಮುಖ್ಯಸ್ಥ ಮೊಹ್ಸಿನ್ ನಖ್ವಿ ಹಾಗೂ ತಂಡದ ಆಯ್ಕೆ ವಿಚಾರವಾಗಿ ಟೀಕೆಗಳು ಹೆಚ್ಚುತ್ತಿರುವ ಬೆನ್ನಲ್ಲೇ ಐಸ್‌ಲ್ಯಾಂಡ್ ಕ್ರಿಕೆಟ್ ತನ್ನದೇ ಶೈಲಿಯಲ್ಲಿ ವ್ಯಂಗ್ಯವಾಡಿದೆ. ಐಸ್‌ಲ್ಯಾಂಡ್ ಕ್ರಿಕೆಟ್‌ನ ಅಧಿಕೃತ ‘X’ ಖಾತೆಯಲ್ಲಿ ಮೊಹ್ಸಿನ್ ನಖ್ವಿ ಹಾಗೂ PCBಯ ಆಯ್ಕೆ ತಂತ್ರವನ್ನು ಗುರಿಯಾಗಿಸಿಕೊಂಡು ವ್ಯಂಗ್ಯ ಪೋಸ್ಟ್ ಮಾಡಲಾಗಿದೆ.
ಗೆದ್ದರೆ ಮೊಹ್ಸಿನ್ ನಖ್ವಿಯನ್ನು ಭೇಟಿ ಮಾಡಿ
ಜನ ನಮ್ಮ ಪೋಸ್ಟ್ ಗಳನ್ನು ತುಂಬಾ 'Cold' ಆಗಿರುತ್ತದೆ ಎನ್ನುತ್ತಾರೆ. ನಮ್ಮ ವಾಯುವ್ಯ ಕರಾವಳಿಯಲ್ಲಿ ಇಂದು ಮಂಜುಗಡ್ಡೆಗಳು ಪತ್ತೆಯಾಗಿವೆ' ಎಂದು ಪೋಸ್ಟ್ ಮಾಡಿದೆ.
ಮತ್ತೊಂದು ಪೋಸ್ಟ್ ನಲ್ಲಿ “ಕರಾವಳಿ ಪ್ರದೇಶದ ಕ್ರಿಕೆಟಿಗರಿಗಾಗಿ ನಾವು ಹೊಸ ಕ್ರಿಕೆಟ್ ಸವಾಲನ್ನು ಆರಂಭಿಸಲಿದ್ದೇವೆ. ಒಂದು ಹಿಮಗಡ್ಡೆಯನ್ನು ತೆರವುಗೊಳಿಸಿ. ಗೆದ್ದರೆ ಮೊಹ್ಸಿನ್ ನಖ್ವಿಯನ್ನು ಭೇಟಿ ಮಾಡಿ ಆಯ್ಕೆ ತಂತ್ರದ ಬಗ್ಗೆ ಕಲಿಯಲು ಎಲ್ಲ ಖರ್ಚು ಭರಿಸಿದ ಶೈಕ್ಷಣಿಕ ಪ್ರವಾಸ ಸಿಗಲಿದೆ. ನಿಮಗೆ ಬೇಕಾದರೆ ಈ ಪ್ರವಾಸ ಒನ್‌ವೇ ಆಗಿರಬಹುದು” ಎಂದು ಐಸ್‌ಲ್ಯಾಂಡ್ ಕ್ರಿಕೆಟ್ ಮಂಡಳಿ ತನ್ನ ಎಕ್ಸ್ ಖಾತೆಯಲ್ಲಿ ವ್ಯಂಗ್ಯವಾಗಿ ಬರೆದಿದೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನ 0-2 ರಿಂದ ಹಿನ್ನಡೆಯಲ್ಲಿರುವ ಸಂದರ್ಭದಲ್ಲಿ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ.
ಟೀಕಾಕಾರರ ವಿರುದ್ಧ ನಖ್ವಿ ಗರಂ
ಇದಕ್ಕೂ ಮುನ್ನ ಇಂಗ್ಲೆಂಡ್ ವಿರುದ್ಧದ ಭಾರೀ ಸೋಲುಗಳ ಬಳಿಕ ಪಾಕಿಸ್ತಾನ ಕ್ರಿಕೆಟ್ ತಂಡ ಎದುರಿಸುತ್ತಿರುವ ಟೀಕೆಗಳಿಗೆ PCB ಅಧ್ಯಕ್ಷ ಮೊಹ್ಸಿನ್ ನಖ್ವಿ ತೀವ್ರವಾಗಿ ಪ್ರತಿಕ್ರಿಯಿಸಿದ್ದರು.
ಲಂಡನ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ತಮ್ಮ ಜೀವನದಲ್ಲಿ ಏನನ್ನೂ ಸಾಧಿಸದವರು” ತಂಡವನ್ನು ಟೀಕಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಇತರ ತಂಡಗಳು ದುರ್ಬಲ ಎದುರಾಳಿಗಳ ವಿರುದ್ಧ ಸೋತಿರುವ ಉದಾಹರಣೆಗಳನ್ನು ನೀಡಿದ ನಖ್ವಿ, ಕೆಲವು ಸೋಲುಗಳಿಂದ ಇಡೀ ತಂಡವನ್ನು ನಿರ್ಧರಿಸುವುದು ಸರಿಯಲ್ಲ ಎಂದರು.
ಭಾರತ ಕೂಡ ಸೋತಿದೆ
ಭಾರತದ ಇತ್ತೀಚಿನ ಟಿ20 ಪಂದ್ಯಗಳಲ್ಲಿ ಐರ್ಲೆಂಡ್ ವಿರುದ್ಧದ ಸೋಲನ್ನೂ ನಖ್ವಿ ಉಲ್ಲೇಖಿಸಿದರು. ಇಂಗ್ಲೆಂಡ್ ಪ್ರವಾಸದಲ್ಲಿರುವ ತಂಡದಿಂದ ಏಳು ಆಟಗಾರರನ್ನು ಬದಲಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಯುವ ಆಟಗಾರರನ್ನು ಸೇರಿಸಿದ್ದಕ್ಕಾಗಿ ನಖ್ವಿ ಹಾಗೂ PCB ವಿರುದ್ಧ ಟೀಕೆಗಳು ವ್ಯಕ್ತವಾಗಿದ್ದವು.
“ನಮ್ಮ ಕ್ರಿಕೆಟ್ ಈಗ ಅತ್ಯಂತ ಕೆಟ್ಟ ಸ್ಥಿತಿಯಲ್ಲಿದೆ ಎಂದು ಹೇಳುವುದು ಸರಿಯಲ್ಲ,” ಎಂದು ನಖ್ವಿ ಹೇಳಿದರು. “ಒಂದು ಕಾಲದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಎಂಟನೇ ಸ್ಥಾನದಲ್ಲಿದ್ದೆವು. ಈಗ ಐದನೇ ಸ್ಥಾನಕ್ಕೆ ಏರಿದ್ದೇವೆ. ಆಡಿದ ಆರು ಏಕದಿನ ಸರಣಿಗಳಲ್ಲಿ ನಾಲ್ಕನ್ನು ಗೆದ್ದಿದ್ದೇವೆ. ಆದರೂ ನಮ್ಮ ಕ್ರಿಕೆಟ್ ಮುಗಿದಿದೆ ಎಂದು ಹೇಳುತ್ತೀರಾ?” ಎಂದು ಅವರು ಪ್ರಶ್ನಿಸಿದರು.
ಅಲ್ಲದೆ ತಂಡದ ಯಶಸ್ಸಿನ ಪ್ರಮಾಣವು 24 ಪ್ರತಿಶತದಿಂದ 73 ಪ್ರತಿಶತಕ್ಕೆ ಏರಿಕೆಯಾಗಿದೆ. ಆಟಗಾರರ ಆತ್ಮವಿಶ್ವಾಸ ಕುಗ್ಗಿಸುವ ರೀತಿಯಲ್ಲಿ ಅಭಿಮಾನಿಗಳು ಹಾಗೂ ಟೀಕಾಕಾರರು ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಅವರು ಮನವಿ ಮಾಡಿದ್ದರು.
‘ಆಯ್ಕೆಯಲ್ಲಿ ತಪ್ಪುಗಳಾಗಬಹುದು’
ಆಯ್ಕೆ ಪ್ರಕ್ರಿಯೆಯಲ್ಲಿ ಕೆಲವೊಮ್ಮೆ ತಪ್ಪುಗಳು ನಡೆಯಬಹುದು ಎಂದು ನಖ್ವಿ ಒಪ್ಪಿಕೊಂಡಿದ್ದಾರೆ. “ಕೆಲವೊಮ್ಮೆ ಆಯ್ಕೆಯಲ್ಲೂ ತಪ್ಪುಗಳು ಆಗುತ್ತವೆ. ಅದಕ್ಕೆ ನಾನು ಉತ್ತರದಾಯಿಯಾಗಿದ್ದೇನೆ. ನಾವು ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು,” ಎಂದು ಅವರು ಹೇಳಿದ್ದಾರೆ.
ಅದೇ ವೇಳೆ, ಆಟಗಾರರು ನಿರೀಕ್ಷಿತ ಪ್ರದರ್ಶನ ನೀಡದಿದ್ದರೆ ಅವರನ್ನು ತಂಡದಿಂದ ಕೈಬಿಡುವುದು ಕೆಲವೊಮ್ಮೆ ಅನಿವಾರ್ಯವಾಗುತ್ತದೆ ಎಂದರು. ಪಾಕಿಸ್ತಾನ ತಂಡವನ್ನು ಮೂರು ಅಥವಾ ಆರು ತಿಂಗಳಲ್ಲಿ 9ನೇ ಸ್ಥಾನದಿಂದ ನಂಬರ್ ಒನ್ ಸ್ಥಾನಕ್ಕೆ ಕೊಂಡೊಯ್ಯಲು ಸಾಧ್ಯವಿಲ್ಲ. ಮುಂದೆ ಸಾಗಬೇಕಾದ ದಾರಿ ಇನ್ನೂ ಬಹಳಷ್ಟಿದೆ ಎಂದು ನಖ್ವಿ ಹೇಳಿದ್ದಾರೆ.