

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸೂಪರ್ ಸ್ಟಾರ್ ಸ್ಮೃತಿ ಮಂಧಾನಾ ಅವರು ಆಧುನಿಕ ಕ್ರಿಕೆಟ್ ಜಗತ್ತಿನ ನಿಜವಾದ ಐಕಾನ್ ಆಗಿದ್ದಾರೆ. ತಂಡದ ಪ್ರಮುಖ ಆಧಾರಸ್ತಂಭಗಳಲ್ಲಿ ಒಬ್ಬರಾಗಿರುವ ಮಂಧಾನಾ, ದೇಶಕ್ಕಾಗಿ ಅದ್ಭುತ ಸಾಧನೆಗಳನ್ನು ಮಾಡಿದ್ದಾರೆ. ಅತ್ಯುತ್ತಮ ಬ್ಯಾಟಿಂಗ್ ಪ್ರತಿಭೆ ಮತ್ತು ನಾಯಕತ್ವದ ಗುಣಗಳನ್ನು ಹೊಂದಿರುವ ಮಂಧಾನಾ, ಸಾವಿರಾರು ಮಂದಿ ಕ್ರಿಕೆಟ್ ಅನ್ನು ವೃತ್ತಿಜೀವನವನ್ನಾಗಿ ಆಯ್ಕೆ ಮಾಡಿಕೊಳ್ಳಲು ಸ್ಫೂರ್ತಿಯಾಗಿದ್ದಾರೆ. ಅವರ ಕ್ರಿಕೆಟ್ ವೃತ್ತಿಜೀವನ ಯಶಸ್ಸಿನತ್ತ ಸಾಗುತ್ತಿದ್ದರೂ, ಅವರ ವೈಯಕ್ತಿಕ ಜೀವನದಲ್ಲಿ ಮದುವೆ ರದ್ದಾಗುವಂತಹ ದೊಡ್ಡ ಹಿನ್ನಡೆಯೊಂದು ಸಂಭವಿಸಿತ್ತು. ರಾಜ್ ಶಮಾನಿ ಅವರೊಂದಿಗಿನ ಪಾಡ್‌ಕಾಸ್ಟ್‌ನಲ್ಲಿ, ತಮ್ಮ ಜೀವನದಲ್ಲಿ ಎದುರಿಸಿದ 'ಅತ್ಯಂತ ಕಠಿಣ ರಾತ್ರಿ'ಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಂಧಾನಾ, ಸ್ವಲ್ಪ ಸಮಯ ಮೌನವಾದರು, ತಾನು 'ಕೇವಲ ಕ್ರಿಕೆಟ್ ಬಗ್ಗೆ ಮಾತ್ರ ಮಾತನಾಡಲಿದ್ದೇನೆ' ಎಂದು ಸ್ಪಷ್ಟಪಡಿಸಿದರು.
ತಮ್ಮ ವಿವಾಹ ರದ್ದಾದಾಗಿನಿಂದ, ಕಳೆದ ವರ್ಷ ತಾವು ಯಾರನ್ನು ಮದುವೆಯಾಗಬೇಕಿತ್ತೋ ಆ ಪಲಾಶ್ ಮುಚ್ಚಲ್ ಅವರ ಬಗ್ಗೆ ಮಂಧಾನಾ ಈವರೆಗೆ ಏನನ್ನೂ ಮಾತನಾಡಿಲ್ಲ. ಶಮಾನಿ ಅವರು 'ಅತ್ಯಂತ ಕಠಿಣ ರಾತ್ರಿ'ಯ ಬಗ್ಗೆ ಕೇಳಿದಾಗಲೂ ಮಂಧಾನ, ಕೇವಲ ತಮ್ಮ ಕ್ರಿಕೆಟ್ ಪಯಣದ ಬಗ್ಗೆ ಮಾತ್ರ ಮಾತನಾಡುವುದಾಗಿ ಹೇಳಿದರು.
'ನಿಮ್ಮ ಜೀವನದ ಅತ್ಯಂತ ಕಠಿಣ ರಾತ್ರಿ ಯಾವುದು?' ಎಂದು ಶಮಾನಿ ಕೇಳಿದರು. ಆಗ ಮಂಧಾನ ಅತ್ಯಂತ ಭಾವುಕರಾದಂತೆ ಕಂಡುಬಂದರು ಮತ್ತು ಉತ್ತರಿಸುವ ಮೊದಲು ಕೆಲಕಾಲ ಮೌನವಾಗಿದ್ದರು.
ಯಾವುದೇ ನಿರ್ದಿಷ್ಟ ಪಂದ್ಯಾವಳಿ ಅಥವಾ ಪಂದ್ಯವನ್ನು ಹೆಸರಿಸದೆ, ಅವರು 'ಬಹುಶಃ ಯಾವುದಾದರೂ ವಿಶ್ವಕಪ್' ಎಂದು ಸಂಕ್ಷಿಪ್ತವಾಗಿ ಉತ್ತರಿಸಿದರು. 'ನಾನು ಕ್ರಿಕೆಟ್ ಬಗ್ಗೆ ಮಾತ್ರ ಮಾತನಾಡುತ್ತೇನೆ ಎಂದ ಅವರು, ಕೋವಿಡ್-19 ಅವಧಿಯು ಕೂಡ ತಮಗೆ ಸಾಕಷ್ಟು ಕಷ್ಟಕರವಾಗಿತ್ತು ಎಂದು ಅವರು ಹೇಳಿದರು.
ತಮ್ಮ ಸ್ವಭಾವದ ಕುರಿತು ಮಾತನಾಡುತ್ತಾ, ತಾವು ಮೇಲ್ನೋಟಕ್ಕೆ ಸಿಡುಕು ಸ್ವಭಾವದವರಂತೆ ಕಾಣಿಸದಿದ್ದರೂ, ತಮ್ಮಲ್ಲಿ ಸಾಕಷ್ಟು ಸಿಟ್ಟು ಅಡಗಿದೆ ಎಂದು ಹೇಳಿದರು. ತಾವು ಸೇಡು ತೀರಿಸಿಕೊಳ್ಳುವ ಸ್ವಭಾವದವರೇ ಎಂದು ಕೇಳಿದಾಗ, ಅಂತಹ ವಿಷಯಗಳಲ್ಲಿ ತಮಗೆ ನಂಬಿಕೆಯಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
'ನನ್ನ ಸ್ವಭಾವಕ್ಕೆ ಹೊಂದಿಕೆಯಾಗುವಂತಹವರು ಯಾರೂ ಇಲ್ಲ, ಆದರೆ ನನಗೆ ವಿಪರೀತ ಕೋಪ ಬರಬಹುದು. 'ನನ್ನೊಂದಿಗೆ ಗೋಜಿಗೆ ಹೋಗಬೇಡಿ' ಎಂಬ ಮನಸ್ಥಿತಿ ನನ್ನದು. 'ನಾನು ನಿಮ್ಮ ದಾರಿಗೆ ಅಡ್ಡ ಬರುವುದಿಲ್ಲ, ನೀವು ನನ್ನ ದಾರಿಗೆ ಅಡ್ಡ ಬರಬೇಡಿ' ಎಂಬುದು ನನ್ನ ನಿಲುವು. ನಾನು ಸೇಡು ತೀರಿಸಿಕೊಳ್ಳುವುದಿಲ್ಲ, ಆದರೆ ನಡೆದದ್ದನ್ನು ಮರೆಯುವುದೂ ಇಲ್ಲ. ಆದಾಗ್ಯೂ, ನಾನು ಯಾರಿಗೂ ಕೆಟ್ಟದ್ದನ್ನು ಮಾಡುವುದಿಲ್ಲ' ಎಂದರು.
ಜನರನ್ನು ಸುಲಭವಾಗಿ ಕ್ಷಮಿಸುತ್ತೀರಾ ಎಂದು ಕೇಳಿದಾಗ, 'ನಾನು ಕ್ಷಮಿಸುತ್ತೇನೆ, ಆದರೆ ಮರೆಯುವುದಿಲ್ಲ' ಎಂದರು.