'ಟ್ರೋಫಿ ಕಳ್ಳ'; Asia Cup Trophy ಫೈನಲ್ ಪಂದ್ಯ ಬಳಿಕ ಅಭಿಮಾನಿಗಳಿಂದ ಘೋಷಣೆ, ತಿರುಗಿಯೂ ನೋಡದೇ ಓಟಕಿತ್ತ Mohsin Naqvi, ಮತ್ತೆ ಮುಖಭಂಗ!

ಫೈನಲ್ ಪಂದ್ಯ ಮುಗಿದ ಬಳಿಕ ನಡೆದ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಭಾರತ ತಂಡದ ಆಟಗಾರ್ತಿಯರು ಮೈದಾನಕ್ಕೆ ಆಗಮಿಸಲಿಲ್ಲ. ಇದರಿಂದಾಗಿ ಎಸಿಸಿ ಮುಖ್ಯಸ್ಥ ಮೊಹ್ಸಿನ್ ನಖ್ವಿಗೆ ಮತ್ತೊಮ್ಮೆ ಮುಜುಗರ ಉಂಟಾಯಿತು.
Mohsin Naqvi Suffers Huge Embarrassment After Another Asia Cup Trophy 2026 Drama
ಮೊಹ್ಸಿನ್ ನಖ್ವಿ
Updated on

ದುಬೈ: ಏಷ್ಯಾ ಕಪ್‌ ಟ್ರೋಫಿ ವಿವಾದ ಸತತ ಎರಡನೇ ವರ್ಷವೂ ಮುಂದುವರಿದಿದ್ದು, ಭಾನುವಾರ ಶ್ರೀಲಂಕಾ ವಿರುದ್ಧ ಗೆದ್ದು ಏಷ್ಯಾ ಕಪ್‌ ಪ್ರಶಸ್ತಿ ಮುಡಿಗೇರಿಸಿಕೊಂಡ ಭಾರತ ಮಹಿಳಾ ಕ್ರಿಕೆಟ್‌ ತಂಡವು, ಪಾಕಿಸ್ತಾನದ ಆಂತರಿಕ ಸಚಿವ ಹಾಗೂ ಏಷ್ಯನ್ ಕ್ರಿಕೆಟ್‌ ಕೌನ್ಸಿಲ್‌ (ಎಸಿಸಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದೆ.

ಹೌದು.. ದುಬೈ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಹರ್ಮನ್‌ಪ್ರೀತ್‌ ಕೌರ್‌ ನಾಯಕತ್ವದ ಭಾರತ ತಂಡವು ಶ್ರೀಲಂಕಾವನ್ನು 72 ರನ್‌ಗಳಿಂದ ಮಣಿಸಿತು. ಈ ಗೆಲುವಿನೊಂದಿಗೆ ಭಾರತ ಮಹಿಳಾ ತಂಡವು ದಾಖಲೆಯ 8ನೇ ಏಷ್ಯಾ ಕಪ್‌ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಆದರೆ ಫೈನಲ್ ಪಂದ್ಯ ಮುಗಿದ ಬಳಿಕ ನಡೆದ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಭಾರತ ತಂಡದ ಆಟಗಾರ್ತಿಯರು ಮೈದಾನಕ್ಕೆ ಆಗಮಿಸಲಿಲ್ಲ. ಇದರಿಂದಾಗಿ ಎಸಿಸಿ ಮುಖ್ಯಸ್ಥ ಮೊಹ್ಸಿನ್ ನಖ್ವಿಗೆ ಮತ್ತೊಮ್ಮೆ ಮುಜುಗರ ಉಂಟಾಯಿತು. ಮೊಹ್ಸಿನ್ ನಖ್ವಿ ಮತ್ತು ಅವರ ತಂಡಕ್ಕೆ ಭಾರತ ತಂಡ ಈ ಫೈನಲ್ ಗೆದ್ದ ಬಳಿಕ ತಮ್ಮಿಂದ ಟ್ರೋಫಿ ಸ್ವೀಕರಿಸುವುದಿಲ್ಲ ಎಂದು ತಿಳಿದಿದ್ದರೂ ಅವರು ಉದ್ದೇಶಪೂರ್ವಕವಾಗಿಯೇ ವೇದಿಕೆ ಹತ್ತಿದ್ದರು.

ಆದರೆ ಕೊನೆಗೆ ಭಾರತೀಯ ಆಟಗಾರ್ತಿಯರು ಆಯೋಜಕರ ಮನವಿಯ ಹೊರತಾಗಿಯೂ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ಒಪ್ಪಲಿಲ್ಲ. ಇದರಿಂದ ತೀವ್ರ ಮುಜುಗರಕ್ಕೀಡಾದ ನಖ್ವಿ ಮೈದಾನದಿಂದ ಹೊರಗೆ ನಡೆದರು.

Mohsin Naqvi Suffers Huge Embarrassment After Another Asia Cup Trophy 2026 Drama
women asia cup 2026: ಪುರುಷರ ಹಾದಿಯಲ್ಲೇ ಭಾರತೀಯ ಮಹಿಳಾ ತಂಡ, ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ನಿರಾಕರಣೆ!

ಟ್ರೋಫಿ ಕಳ್ಳ ಎಂದ ಅಭಿಮಾನಿಗಳು

ಇತ್ತ ಮೊಹ್ಸಿನ್ ನಖ್ವಿ ಮೈದಾನದಿಂದ ಹೊರಗೆ ಹೋಗುವಾಗ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳು ‘ಟ್ರೋಫಿ ಚೋರ್‌’ (ಟ್ರೋಫಿ ಕಳ್ಳ) ಎಂದು ಘೋಷಣೆ ಕೂಗಿದರು. ನಖ್ವಿ ಟ್ರೋಫಿ ಕದಿಯುವ ವ್ಯಕ್ತಿ ಎಂಬ ಅರ್ಥದಲ್ಲಿ ಅಭಿಮಾನಿಗಳು ಈ ಘೋಷಣೆ ಕೂಗಿದ್ದಾರೆ.

ಇದೇ ಮೊದಲೇನಲ್ಲ

ಕಳೆದ ವರ್ಷವೂ ಇದೇ ರೀತಿಯ ಘಟನೆ ನಡೆದಿತ್ತು. ಭಾರತ ಪುರುಷರ ಕ್ರಿಕೆಟ್‌ ತಂಡವು ಏಷ್ಯಾ ಕಪ್‌ ಗೆದ್ದ ಬಳಿಕ ನಖ್ವಿ ಅವರಿಂದ ಟ್ರೋಫಿ ಹಾಗೂ ಪದಕಗಳನ್ನು ಸ್ವೀಕರಿಸಲು ನಿರಾಕರಿಸಿತ್ತು. ನಖ್ವಿ ಅವರು ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯ ಮುಖ್ಯಸ್ಥರೂ ಆಗಿದ್ದಾರೆ. ಭಾರತ ತಂಡಕ್ಕೆ ಇನ್ನೂ ಏಷ್ಯಾ ಕಪ್‌ ಟ್ರೋಫಿ ಹಸ್ತಾಂತರವಾಗಿಲ್ಲ. ಆ ಟ್ರೋಫಿಯನ್ನು ಸದ್ಯ ಎಸಿಸಿ ಕಚೇರಿಯಲ್ಲಿ ಇರಿಸಲಾಗಿದೆ.

ಕಳೆದ ವರ್ಷ ಸೂರ್ಯಕುಮಾರ್‌ ಯಾದವ್‌ ನಾಯಕತ್ವದ ಭಾರತ ತಂಡವು ಟ್ರೋಫಿ ಇಲ್ಲದೆಯೇ ವೇದಿಕೆಯಲ್ಲಿ ಸ್ವಯಂಪ್ರೇರಿತವಾಗಿ ಸಂಭ್ರಮಿಸಿತ್ತು. ಆದರೆ, ಈ ಬಾರಿ ಭಾರತ ಮಹಿಳಾ ತಂಡದ ಆಟಗಾರ್ತಿಯರು ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ ಮೈದಾನಕ್ಕೆ ಮರಳಲೂ ಇಲ್ಲ.

ರನ್ನರ್ ಅಪ್ ಪ್ರಶಸ್ತಿ ಸ್ವೀಕರಿಸಿದ ಶ್ರೀಲಂಕಾ

ಮತ್ತೊಂದೆಡೆ, ಶ್ರೀಲಂಕಾ ತಂಡವು ನಖ್ವಿ ಅವರಿಂದ ರನ್ನರ್‌ ಅಪ್‌ ಚೆಕ್‌ ಸ್ವೀಕರಿಸಿತು. ಅದಕ್ಕೂ ಮೊದಲು ಶ್ರೀಲಂಕಾ ಕ್ರಿಕೆಟ್‌ ಮಂಡಳಿಯ ಹಂಗಾಮಿ ಮುಖ್ಯಸ್ಥ ಎರಾನ್‌ ವಿಕ್ರಮರತ್ನೆ ಅವರಿಂದ ತಂಡದ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿ ಪದಕಗಳನ್ನು ಸ್ವೀಕರಿಸಿದರು.

ಶ್ರೀಲಂಕಾ ನಾಯಕಿ ಚಮಾರಿ ಅಟಪಟ್ಟು ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ ಬಳಿಕ ನಖ್ವಿ ಕೂಡಲೇ ಕ್ರೀಡಾಂಗಣದಿಂದ ನಿರ್ಗಮಿಸಿದರು. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅವರು ಟ್ರೋಫಿಯನ್ನು ತಮ್ಮೊಂದಿಗೆ ಕೊಂಡೊಯ್ಯಲಿಲ್ಲ.

ಪಹಲ್ಗಾಮ್ ದಾಳಿ ಬಳಿಕ ಹದಗೆಟ್ಟ ಸಂಬಂಧ

ಕಳೆದ ವರ್ಷ ನಡೆದ ಪಹಲ್ಗಾಮ್‌ ಉಗ್ರ ದಾಳಿ ಹಾಗೂ ನಂತರದ ‘ಆಪರೇಷನ್‌ ಸಿಂಧೂರ್‌’ ಕಾರ್ಯಾಚರಣೆಯ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಿನ ರಾಜತಾಂತ್ರಿಕ ಸಂಬಂಧಗಳು ಮತ್ತಷ್ಟು ಹದಗೆಟ್ಟಿವೆ. ಇದರ ಪರಿಣಾಮವಾಗಿ, ಏಷ್ಯನ್‌ ಅಥವಾ ಐಸಿಸಿ ಆಯೋಜಿಸುವ ಜಾಗತಿಕ ಕ್ರಿಕೆಟ್‌ ಟೂರ್ನಿಗಳಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ಆಟಗಾರರು ಪರಸ್ಪರ ಭೇಟಿಯಾದಾಗ ಹಸ್ತಲಾಘವ ಮಾಡದ ನಿಯಮವನ್ನು ಪಾಲಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com