ದಸರಾ ಆನೆಗಳ ತಯಾರಿ ಹೇಗಿರುತ್ತೆ ಗೊತ್ತಾ..?

ವಿಶ್ವವಿಖ್ಯಾತ ಮೈಸೂರು ದಸರಾ ಎಂದ ತಕ್ಷಣ ಜನರ ಕಣ್ಣಮುಂದೆ ಬರುವುದು ಜಂಬೂ ಸವಾರಿ. 750 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತ ಆನೆ ರಾಜಗಾಂಭೀರ್ಯದ ಹೆಜ್ಜೆ ಹಾಕುತ್ತಾ ತಾಯಿ ಚಾಮುಂಡೇಶ್ವರಿ ಹೊತ್ತು ನಗರದ ಪ್ರಮುಖ ಬೀದಿಗಳಲ್ಲಿ ನಡೆಯುತ್ತದೆ...
ತಾಲೀಮಿನಲ್ಲಿ ತೊಡಗಿರುವ ದಸರಾ ಆನೆಗಳು (ಸಂಗ್ರಹ ಚಿತ್ರ)
ತಾಲೀಮಿನಲ್ಲಿ ತೊಡಗಿರುವ ದಸರಾ ಆನೆಗಳು (ಸಂಗ್ರಹ ಚಿತ್ರ)

ವಿಶ್ವವಿಖ್ಯಾತ ಮೈಸೂರು ದಸರಾ ಎಂದ ತಕ್ಷಣ ಜನರ ಕಣ್ಣಮುಂದೆ ಬರುವುದು ಜಂಬೂ ಸವಾರಿ. 750 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತ ಆನೆ ರಾಜಗಾಂಭೀರ್ಯದ ಹೆಜ್ಜೆ ಹಾಕುತ್ತಾ ತಾಯಿ ಚಾಮುಂಡೇಶ್ವರಿ ಹೊತ್ತು ನಗರದ ಪ್ರಮುಖ ಬೀದಿಗಳಲ್ಲಿ ನಡೆಯುತ್ತದೆ.

ಉಳಿದ ಆನೆಗಳು ಅಂಬಾರಿ ಹೊತ್ತ ಆನೆಯನ್ನು ಹಿಂಬಾಲಿಸುತ್ತವೆ.  ಕಳೆದ ಬಾರಿಯಂತೆ ಈ ಬಾರಿಯ ದಸರಾದಲ್ಲಿಯೂ ಅಂಬಾರಿ ಹೊರುವ ಜವಾಬ್ದಾರಿ ಅರ್ಜುನನದ್ದು. ಅದರ ಹಿಂದೆ-ಮುಂದೆ ಶಿಸ್ತು ಬದ್ಧವಾಗಿ ಉಳಿದ ಆನೆಗಳು ಹೆಜ್ಜೆ ಹಾಕುತ್ತವೆ. ಅರ್ಜುನನ ಅಕ್ಕಪಕ್ಕ ಬಲರಾಮ, ಅಭಿಮನ್ಯು, ವಿಕ್ರಮ, ಕಾವೇರಿ, ಚೈತ್ರ, ಹರ್ಷ, ಪ್ರಶಾಂತ, ಗೋಪಿ, ಗೋಪಾಲಸ್ವಾಮಿ, ದುರ್ಗಾ ಪರಮೇಶ್ವರಿ, ಕೆಂಚಾಂಬ ಆನೆಗಳನ್ನು ಒಳಗೊಂಡ ಗಜಪಡೆ ಸಾಗುತ್ತದೆ. ವಿಜಯದಶಮಿ ದಿನ ನಡೆಯುವ ಜಂಬೂ ಸವಾರಿಯ ಒಂದು ದಿನದ ಐತಿಹಾಸಿಕ ಕ್ಷಣಕ್ಕೆ ಹಲವಾರು ತಿಂಗಳುಗಳ ಶ್ರಮವಿದೆ. ಇಡೀ ರಾಜ್ಯದ ಕೇಂದ್ರ ಬಿಂದುವಾಗಿರುವ ಜಂಬೂ ಸವಾರಿಗೆ ಆನೆಗಳನ್ನು ಒಂದು ತಿಂಗಳ ಮುಂಚಿತವಾಗಿಯೇ  ಸಿದ್ದಗೊಳಿಸಲಾಗುತ್ತದೆ.

ತಿಂಗಳ ಮುಂಚಿತವಾಗಿಯೇ ಆನೆಗಳ ಆಗಮನ
ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳನ್ನು ಸಾಮಾನ್ಯವಾಗಿ ಹಬ್ಬದ ಒಂದು ತಿಂಗಳ ಮುಂಚಿತವಾಗಿಯೇ ಮೈಸೂರಿಗೆ ಕರೆತರಲಾಗುತ್ತದೆ. ಈ ಗಜಪಡೆಯ ಆಗಮನದಿಂದಲೇ ಮೈಸೂರು ದಸರಾ ಹಬ್ಬದ ಪ್ರಾರಂಭಿಕ ಚಟುವಟಿಕೆ ಅಧಿಕೃತವಾಗಿ ಆರಂಭಗೊಳ್ಳುತ್ತದೆ. ಒಂದು ತಿಂಗಳವರೆಗೆ ಈ ಆನೆಗಳು ಮೆರವಣಿಗೆಯ ತರಬೇತಿಗೆ ಒಳಪಡುತ್ತವೆ. ಪ್ರತಿ ಆನೆಗೂ ಒಬ್ಬೊಬ್ಬ ಮಾವುತನಿದ್ದು, ಆತ ಅವುಗಳ ಉಸ್ತುವಾರಿಯನ್ನು ವಹಿಸಿರುತ್ತಾನೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನದಿಂದ ಟ್ರಕ್ಕುಗಳಲ್ಲಿ ಈ ಆನೆಗಳನ್ನು ಕರೆತರಲಾಗುತ್ತದೆಯಾದರೂ, ಕೆಲವೊಮ್ಮೆ ನಡೆಸಿಕೊಂಡೇ ಕರೆತಂದ ಉದಾಹರಣೆಯೂ ಇದೆ. ಹೀಗೆ ಮೈಸೂರಿನತ್ತ ಪ್ರಯಾಣ ಬೆಳೆಸುವ ದಸರಾ ಆನೆಗಳಿಗೆ ಅಕ್ಕಪಕ್ಕದ ಹಳ್ಳಿಗಳ ಜನರು ಮಾರ್ಗ ಮಧ್ಯೆ ಸಾಕಷ್ಟು ಜನರು ಈ ಆನೆಗಳಿಗೆ ಪೂಜೆ ಸಲ್ಲಿಸಿ, ಶುಭ ಹಾರೈಸುತ್ತಾರೆ.

ಹೀಗೆ ಬಂದ ಆನೆಗಳ ಗುಂಪನ್ನು ಹುಣಸೂರು ತಾಲೂಕಿನ ವೀರಣ್ಣ ಹೊಸಹಳ್ಳಿ ಕಾಡಿನ ಪರೀಶಿಲನಾ ಕೇಂದ್ರಕ್ಕೆ (ಚೆಕ್‍ಪೊಸ್ಟ್) ಕರೆತಂದು ಪ್ರತಿ ಆನೆಗಳನ್ನು ಆ ತಾಲೂಕಿನ ಅಥವಾ ಜಿಲ್ಲೆಯ ಮಂತ್ರಿಗಳು ಹಾಗೂ ಇತರೆ ಅಧಿಕಾರಿಗಳು ಆತ್ಮೀಯವಾಗಿ ಸ್ವಾಗತ ಕೋರಿ ಬರಮಾಡಿಕೊಳ್ಳುತ್ತಾರೆ. ಈ ಕಾರ್ಯಕ್ರಮ ಕೂಡ ವಿಶೇಷವಾಗಿದ್ದು, ಸುತ್ತಮುತ್ತಲಿನ ಹಳ್ಳಿಗಳ ಜನರು ಜನಪದ ಗೀತೆ ಹಾಡುತ್ತ, ಕುಣಿಯುತ್ತ ಅತಿ ಆದರ ಸಂತೋಷಗಳಿಂದ ಆನೆಗಳನ್ನು ಬರಮಾಡಿಕೊಳ್ಳುತ್ತಾರೆ. ಇದು ವರ್ಷಕ್ಕೊಮ್ಮೆ ಮಾತ್ರ ಲಭಿಸುವ ಅಪರೂಪದ ದೃಶ್ಯವಾಗಿರುತ್ತದೆ.

ಆನೆಗಳ ತಯಾರಿ ಹೇಗೆ?
ಹೀಗೆ ಮೈಸೂರಿಗೆ ಆಗಮಿಸುವ ಆನೆಗಳನ್ನು ರಾಜ ಕುಟುಂಬದ ಸದಸ್ಯರು ಅರಮನೆ ಆವರಣದಲ್ಲಿ ಪೂಜೆ ಸಲ್ಲಿಸುವ ಮೂಲಕ ಬರ ಮಾಡಿಕೊಳ್ಳುತ್ತಾರೆ. ಬಳಿಕ ಆನೆಗಳನ್ನು ಅರಮನೆ ಆವರಣದಲ್ಲಿರುವ ಆನೆ ಶಿಬಿರಕ್ಕೆ ಕರೆದೊಯ್ಯಲಾಗುತ್ತದೆ. ಹೀಗೆ ಶಿಬಿರಕ್ಕೆ ಬಂದ ಆನೆಗಳಿಗೆ ದಿನಕ್ಕೊಂದು ತಾಲೀಮು ನೀಡಲಾಗುತ್ತದೆ. ಶಿಬಿರದಲ್ಲಿದ್ದಾಗ ರಾಗಿ ಮುದ್ದೆಗಳನ್ನು ಸವಿಯುವ ಈ ಆನೆಗಳು ಮೈಸೂರಿಗೆ ಬಂದಾಗಿನಿಂದ ಜಂಬೂ ಸವಾರಿಯ ಕೊನೆಯವರೆಗೆ ರಾಜವೈಭವದ ಭೋಜನ ಸವಿಯುತ್ತವೆ. ಹಸಿರು ಕಾಳುಗಳು, ಬೆಲ್ಲ, ಕಡಲೆ ಬೀಜ, ಕಬ್ಬು, ಮೇವು, ಬಾಳೆ ಎಲೆಗಳು, ಬೇಯಿಸಿದ ಅನ್ನ ರುಚಿಗೆ ತಕ್ಕ ಉಪ್ಪು ಹೀಗೆ ಹತ್ತು ಹಲವು ಖಾದ್ಯಗಳನ್ನು ಮನಸೋ ಇಚ್ಛೆ ಆನೆಗಳು ಸವಿಯುತ್ತವೆ. ದಸರಾ ಗಜಪಡೆಗಳ ಪೈಕಿ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತು ಸಾಗುವ ಅರ್ಜುನನಿಗೆ ವಿಶೇಷ ಸತ್ಕಾರಗಳು ನಡೆಯುತ್ತವೆ. ಉದ್ದು. ಗೋಧಿ, ಕುಸುಲಕ್ಕಿ, ಈರುಳ್ಳಿ, ಹಸಿ ತರಕಾರಿಗಳ ದೊಡ್ಡ ಉಂಡೆ ಜೊತೆಗೆ ಬೆಣ್ಣೆ, ಭತ್ತ, ತೆಂಗಿನಕಾಯಿ, ಹಿಂಡಿ, ಕಬ್ಬು, ಬೆಲ್ಲ, ಮೊದಲಾದ ಆಹಾರಗಳು ಅರ್ಜುನನಿಗೆ ನೀಡಲಾಗುತ್ತದೆ. ಹಸಿರು ಮೇವುಗಳಾಗಿ ಆಲದ ಮರದ ಸೊಪ್ಪು, ಹುಲ್ಲನ್ನು ಆಗಾಗ ನೀಡಲಾಗುತ್ತಿದೆ. ದಿನಕ್ಕೆರಡು ಬಾರಿ ಸ್ನಾನ ಮಾಡಿಸಲಾಗುತ್ತದೆ.

ಕಾವಾಡಿಗಳಿಗೆ ಮೈಸೂರೇ ತವರು
ಮೈಸೂರಿಗೆ ಗಜಪಡೆಗಳೊಂದಿಗೆ ಆಗಮಿಸುವ ಮಾವುತರ, ಕಾವಾಡಿಗಳ ಕುಟುಂಬಗಳಿಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಮತ್ತು ಮಕ್ಕಳಿಗೆ ಟೆಂಟ್ ಶಾಲೆಯ ವ್ಯವಸ್ಥೆಯನ್ನೂ ಮಾಡಲಾಗುತ್ತದೆ. ಕೆಲವು ತಿಂಗಳ ಮಟ್ಟಿಗೆ ಇವರಿಗೆ ಮೈಸೂರು ನಗರವೇ ತವರು ಮನೆ. ಬೆಳಗ್ಗೆ ಹಾಗೂ ಸಂಜೆ ನಗರದ ಮುಖ್ಯ ರಸ್ತೆಯಲ್ಲಿ ಗಜಪಡೆಗಳು ಸಾಗುತ್ತಿದರೆ ಅದನ್ನು ನೂರಾರು ಜನರು ನೋಡಿ ಖುಷಿಪಡುತ್ತಾರೆ. ದಸರಾ ಮುಗಿಯುವ ತನಕ ಅರಮನೆ ನಗರಿಯಲ್ಲಿ ಗಜಪಡೆಗಳೇ ಮಖ್ಯ ಆಕರ್ಷಣೆ.

ದಿನಕ್ಕೆರಡು ಬಾರಿ ತಾಲೀಮು
ಜಂಬೂ ಸವಾರಿಯಲ್ಲಿ ಯಾವುದೇ ಅಡೆತಡೆಗೆ ಬಗ್ಗದೆ ಮುನ್ನಡೆಯಲು ಅರ್ಜುನನಿಗೆ 750 ಕೆಜಿ ತೂಕದ ಮರದ ಅಂಬಾರಿಯನ್ನು, ಉಳಿದ ಆನೆಗಳಿಗೆ ಮರಳಿನ ಮೂಟೆ (ಗಾದಿ ಹಮ್ದಾ)ಯನ್ನು ಕಟ್ಟಿ ದಿನಕ್ಕೆರಡು ಬಾರಿ ತಾಲೀಮು ನೀಡಲಾಗುತ್ತದೆ. ಪ್ರತಿದಿನ ಅರಮನೆ ಆವರಣದಿಂದ ಆರಂಭವಾಗುವ ಈ ತಾಲೀಮು ಸುಮಾರು 6 ಕಿ.ಮೀ. ದೂರವಿರುವ ಬನ್ನಿಮಂಟಪದವರೆಗೆ ದಿನನಿತ್ಯ ನಡೆಯುತ್ತದೆ. ಈ ರೀತಿಯ ಮರಳು ತಾಲೀಮನ್ನು ಸುಮುಹೂರ್ತದಲ್ಲಿ ಆರಂಭಿಸಲಾಗುತ್ತದೆ.



ಅಂಬಾರಿ ಕಟ್ಟುವುದು ಹೇಗೆ?
ಮೊದಲಿಗೆ ಅರ್ಜುನ ಮಂಡಿಯೂರಿ ಮಲಗುತ್ತದೆ. ಆಗ ಸುಮಾರು 300 ಕೆಜಿ ಭಾರದ 'ಗಾದಿ ಹಮ್ದಾ' ಎಂದು ಕರೆಯುವ ಮರಳು ತುಂಬಿದ ಚೀಲವನ್ನು ಅದರ ಬೆನ್ನ ಮೇಲೆ ಹಾಸಿ ಮಾರುದ್ದದ ಹಗ್ಗದಿಂದ ಆನೆಯ ಹೊಟ್ಟೆ ಭಾಗಕ್ಕೆ ಸುತ್ತಿ ಬಿಗಿಯಾಗಿ ಕಟ್ಟಲಾಗುತ್ತದೆ. ಬಳಿಕ ಗೋಣಿ ಚೀಲಗಳನ್ನು ಹಾಸಿ ಅದರ ಮೇಲೆ ಕಬ್ಬಿಣದ ತೊಟ್ಟಿಲನ್ನು ಕಟ್ಟಲಾಗುತ್ತದೆ. ಇದು ಸುಲಭದ ಕೆಲಸವಲ್ಲ. ಆದರೂ 10ಕ್ಕೂ ಹೆಚ್ಚು ಮಾವುತರು ಇದನ್ನು ಮಾಡಿ ಮುಗಿಸುತ್ತಾರೆ. ಆ ನಂತರ ತೊಟ್ಟಿಯಲ್ಲಿ ಮರಳು ಚೀಲಗಳನ್ನು ಇಡಲಾಗುತ್ತದೆ. ಪ್ರತಿ ದಿನವೂ ಚೀಲಗಳ ಸಂಖ್ಯೆಯನ್ನು ಹೆಚ್ಚಿಸುತ್ತಾ ಹೋಗಲಾಗುತ್ತದೆ. ಈ ರೀತಿಯ ಭಾರವನ್ನು ಅರ್ಜುನ ಮಾತ್ರವಲ್ಲದೆ, ಇತರ ಕೆಲ ಆನೆಗಳಿಗೂ ಕಟ್ಟಿ ಸುಮಾರು 15 ದಿನಗಳ ಕಾಲ ಸರತಿಯ ಸಾಲಿನಲ್ಲಿ ತಾಲೀಮು ನಡೆಸಲಾಗುತ್ತದೆ. ಸುಮಾರು ನೂರು ಕೆಜಿಯಿಂದ ಆರಂಭವಾಗುವ ತಾಲೀಮು 750 ಕೆಜಿಗೆ ಬಂದು ತಲುಪುತ್ತದೆ. ಆ ನಂತರ ಮರದ ಅಂಬಾರಿಯನ್ನು ಕಟ್ಟಿ ತಾಲೀಮು ನಡೆಸಲಾಗುತ್ತದೆ. ಇದಾದ ಬಳಿಕ ದಸರಾ ದಿನದಂದು ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸಿ ಜಂಬೂ ಸವಾರಿ ನಡೆಸಲಾಗುತ್ತದೆ. ಅರಮನೆ ಆವರಣದಿಂದ ಹೊರಡುವ ಈ ಜಂಬೂ ಸವಾರಿ ಸಯ್ಯಾಜಿರಾವ್ ರಸ್ತೆಯ ಮೂಲಕ ಬನ್ನಿಮಂಟಪ ತಲುಪುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com