ಬೆಂಗಳೂರು: ಕಳಪೆ ಪ್ಲಾಸ್ಟಿಕ್ ತಯಾರಿಸುವ ತಾಣಗಳ ಮೇಲೆ ಮಂಗಳವಾರ ದಿಢೀರ್ ದಾಳಿ ನಡೆಸಿದ ಮೇಯರ್ ಶಾಂತಕುಮಾರಿ ಹಾಗೂ ಅಧಿಕಾರಿಗಳ ತಂಡ 5 ಪ್ರಮುಖ ಕಾರ್ಖಾನೆಗಳಿಗೆ ಬೀಗ ಜಡಿದಿದ್ದಾರೆ.
ಆ ಕಾರ್ಖಾನೆಗಳಿದ್ದ ಪ್ಲಾಸ್ಟಿಕ್ ಹಾಗೂ ಸಲಕರಣೆಗಳನ್ನು ವಶಕ್ಕೆ ತೆಗೆದುಕೊಂಡ ತಂಡ, ಕಾರ್ಖಾನೆ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಿದೆ. ಅಷ್ಟೇ ಅಲ್ಲ, ಮಾಲೀಕರ ವಿರುದ್ಧ ಸಂಬಂಧಿಸಿದ ಠಾಣೆಗಳಲ್ಲಿ ಪ್ರಕರಣಗಳನ್ನೂ ದಾಖಲಿಸಿದೆ.
ನಗರದಲ್ಲಿ ಕಸ ಸಮಸ್ಯೆ ಹೆಚ್ಚಾಗಲು ಪ್ಲಾಸ್ಟಿಕ್ ಉತ್ಪಾದನೆ, ಬಳಕೆ ಹೆಚ್ಚಾಗಿರುವುದೇ ಕಾರಣ. ಈ ಹಿನ್ನೆಲೆಯಲ್ಲಿ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗ ರೆಡ್ಡಿ ಅಧಿಕಾರಿಗಳ ಸಭೆ ನಡೆಸಿ ಕಳಪೆ ಪ್ಲಾಸ್ಟಿಕ್ ಉತ್ಪಾದನೆಯನ್ನು ತಡೆಗಟ್ಟಬೇಕೆಂದು ಸೂಚಿಸಿದ್ದರು.
ನಂತರ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳಲಿಲ್ಲ. ಇದನ್ನರಿತ ಮೇಯರ್ ಶಾಂತಕುಮಾರಿ ಪ್ಲಾಸ್ಟಿಕ್ ನಿಷೇಧಿಸುವಂತೆ ಕೌನ್ಸಲ್‌ನಲ್ಲಿ ನಿರ್ಣಯ ಕೈಗೊಳ್ಳುವಂತೆ ಮಾಡಿದರು. ಇದರಿಂದ ಯಾವುದೇ ಪ್ರಯೋಜನವಾಗದ ಕಾರಣ ಪ್ಲಾಸ್ಟಿಕ್ ಉತ್ಪಾದನಾ ಘಟಕಗಳ ಮೇಲೆಯೇ ದಾಳಿ ನಡೆಸಿದರು.
ಕಳೆದವಾರ ಕೆ.ಆರ್.ಮಾರುಕಟ್ಟೆ ಹಾಗೂ ಅವೆನ್ಯೂ ರಸ್ತೆಯ ಅಂಗಡಿಗಳ ಮೇಲೆ ದಾಳಿ ನಡೆಸಿ ಕಳಪೆ ಪ್ಲಾಸ್ಟಿಕ್ ವಶಪಡಿಸಿಕೊಂಡಿದ್ದ ಮೇಯರ್ ನೇತೃತ್ವದ ತಂಡ, ಅನೇಕ ವ್ಯಾಪಾರಿಗಳ ವಿರುದ್ಧ ಕೇಸ್ ದಾಖಲಾಗುವಂತೆ ಮಾಡಿದರು.
ಅದರ ಮುಂದುವರಿದ ಭಾಗವಾಗಿ ಮಂಗಳವಾರ ರಾಜರಾಜೇಶ್ವರಿನಗರ, ಹನುಮಂತನಗರ, ಸುಂಕದಕಟ್ಟೆ ಹಾಗೂ ಮಾಗಡಿ ರಸ್ತೆಗಳಲ್ಲಿರುವ ಪ್ಲಾಸ್ಟಿಕ್ ಕಾರ್ಖಾನೆ ಹಾಗೂ ಅಂಗಡಿಗಳ ಮೇಲೆ ದಾಳಿ ನಡೆಸಿದರು. ಮೊದಲಿಗೆ ಸುಂಕದಕಟ್ಟೆ ನಿತೀಶ್ ಪ್ಲಾಸ್ಟಿಕ್ ತಯಾರಿಕಾ ಘಟಕಕ್ಕೆ ತೆರಳಿ ಪರಿಶೀಲಿಸಿದರು. ಅಲ್ಲಿದ್ದ ಕಳಪೆ ಪ್ಲಾಸ್ಟಿಕ್‌ಗಳನ್ನು ವಶಕ್ಕೆ ತೆಗೆದುಕೊಳ್ಳುವಂತೆ ಸೂಚಿಸಿದ ಮೇಯರ್, ಕೂಡಲೇ ಆ ಘಟಕಕ್ಕೆ ಬೀಗ ಜಡಿಯುವಂತೆ ಮಾಡಿದರು.
ಅದೇ ರೀತಿ ಮಾಗಡಿ ರಸ್ತೆಯ ಬ್ಯಾಡರಹಳ್ಳಿಯ ಮಂಜುನಾಥ ಪ್ಲಾಸ್ಟಿಕ್ ಹಾಗೂ ಕುಮಾರ್ ಲಕ್ಷ್ಮೀ ಪಾಲಿಮರ್ ಘಟಕಗಳ ಮೇಲೆ ದಾಳಿ ನಡೆಸಿದರು. ಅಲ್ಲಿ 40 ಮೈಕ್ರಾನ್‌ಗಿಂತಲೂ ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್‌ಗಳನ್ನು ಪತ್ತೆ ಮಾಡಿದರು. ಅವುಗಳನ್ನು ವಶಕ್ಕೆ ತೆಗೆದುಕೊಳ್ಳುವಂತೆ ಸೂಚಿಸಿ, ಅನಧಿಕೃತವಾಗಿ ಅಂಗಡಿ ನಡೆಸುತ್ತಿರುವ ಬಗ್ಗೆಯೂ ಆಕ್ರೋಶ ವ್ಯಕಪಡಿಸಿ ಕಠಿಣ ಕ್ರಮಕ್ಕೆ ಸೂಚಿಸಿದರು.
ನಂತರ ಗೊಲ್ಲಹಳ್ಳಿಯ ಲಕ್ಷ್ಮೀ ಎಂಟರ್ ಪ್ರೈಸಸ್, ಫಿಸಾ ಪಾಲಿಮರ್ ಸೇರಿದಂತೆ 5 ಪ್ರಮುಖ ಉತ್ಪಾದನಾ ಘಟಕಗಳನ್ನು ಮುಚ್ಚಿಸಿ ಬೀಗ ಜಡಿಯುವಂತೆ ಮಾಡಿದರು. ಉಪ ಮೇಯರ್ ರಂಗಣ್ಣ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ನಾರಾಯಣ, ಜೆಡಿಎಸ್‌ನ ಪ್ರಕಾಶ್ ಹಾಗೂ ಆರೋಗ್ಯಾಧಿಕಾರಿಗಳು ಹಾಜರಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ