ಗೌಪ್ಯ ಸ್ಥಳದಲ್ಲಿ ಪಾಲಕರೊಂದಿಗೆ ಮೆಹ್ದಿ ಮಾತುಕತೆಗೆ ಅವಕಾಶ

ಮೆಹ್ದಿ ಮಸ್ರೂರ್ ಬಿಸ್ವಾಸ್‌
ಮೆಹ್ದಿ ಮಸ್ರೂರ್ ಬಿಸ್ವಾಸ್‌

ಬೆಂಗಳೂರು: ಇಸಿಸ್ ಸಂಘಟನೆ ಟ್ವಿಟರ್ ಅಕೌಂಟ್ ನಿರ್ವಹಿಸುತ್ತಿದ್ದ ಆರೋಪದ ಮೇಲೆ ಬಂಧಿತನಾಗಿರುವ ಮೆಹ್ದಿ ಮಸ್ರೂರ್ ಬಿಸ್ವಾಸ್‌ನ ಪಾಲಕರು ನಗರ ಪೊಲೀಸ್ ಆಯುಕ್ತ ಎಂ.ಎನ್ ರೆಡ್ಡಿ ಅವರನ್ನು ಬುಧವಾರ ಭೇಟಿ ಮಾಡಿ ಮಾತುಕತೆ ನಡೆಸಿದರು.

ಮೆಹ್ದಿ ತಂದೆ ಮಿಖಾಯಿಲ್ ಬಿಸ್ವಾಸ್, ತಾಯಿ ಮುಮ್ತಾಜ್ ಬೇಂಗಂ ಆಯುಕ್ತರ ಕಚೇರಿಯಲ್ಲಿ ಕೆಲ ಹೊತ್ತು ಚರ್ಚೆ ನಡೆಸಿದರು. ಈ ವೇಳೆ ಪಾಲಕರು ಮಗನ ಹವ್ಯಾಸಗಳು, ಖಾಸಗಿ ವಿಚಾರಗಳು, ಚಟುವಟಿಕೆಗಳ ಬಗ್ಗೆ ಆಯುಕ್ತರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ತನಿಖೆಯ ಭಾಗವಾಗಿ ಪಾಲಕರಿಗೆ ನೋಟಿಸ್ ನೀಡಿ ವಿಚಾರಣೆಗೆ ಒಳಪಡಿಸಲಾಗಿಲ್ಲ. ಪಾಲಕರು ತಾವಾಗಿಯೇ ಬಂದಿರುವುದರಿಂದ ಆಯುಕ್ತರ ಬಳಿ ತಮ್ಮ ಮಗ ಅಮಾಯಕ ಎಂದು ಹೇಳಿದ್ದಾರೆ ಎನ್ನಲಾಗಿದೆ. ಆಯುಕ್ತರು ಇಬ್ಬರಿಗೂ ಪ್ರಕರಣದ ಗಂಭೀರತೆ, ಆತನ ವಿರುದ್ಧ ಇರುವ ಆರೋಪಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಚರ್ಚೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಲು ಪಾಲಕರು ನಿರಾಕರಿಸಿ ಸ್ಥಳದಿಂದ ತೆರಳಿದರು. ಮಗನೊಂದಿಗೆ ಮಾತನಾಡಲು ಪಾಲಕರಿಗೆ ಗೌಪ್ಯ ಸ್ಥಳದಲ್ಲಿ ಅವಕಾಶ ನೀಡಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇದೇ ವೇಳೆ ಮೆಹ್ದಿ ಟ್ವಿಟರ್, ಈ ಮೇಲ್‌ನಿಂದ ಸಂಗ್ರಹಿಸಲಾದ ಮಾಹಿತಿ ಪೈಕಿ ಹಲವು ಅರೆಬಿಕ್ ಭಾಷೆಯಲ್ಲಿವೆ. ಇಂಗ್ಲಿಷ್‌ಗೆ ಭಾಷಾಂತರಿಸಿ ಓದಿಕೊಳ್ಳಲು ಸಾಕಷ್ಟು ಕಾಲಾವಕಾಶ ಬೇಕಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಡಿ.8ಕ್ಕೆ ಮೆಹ್ದಿ ಪೊಲೀಸ್ ಕಸ್ಟಡಿ ಅಂತ್ಯವಾಗಲಿದೆ. ಹೀಗಾಗಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ವಿಚಾರಣೆ ಅಗತ್ಯ ಇರುವುದರಿಂದ ಮತ್ತಷ್ಟು ದಿನ ವಶಕ್ಕೆ ನೀಡುವಂತೆ ಮನವಿ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com