
ಬೆಂಗಳೂರು: ಬೆಂಗಳೂರಿನಲ್ಲಿ ಕೆರೆ ಒತ್ತುವರಿ ಮಾಡಿದವರು ಎಷ್ಟೇ ಬಲಿಷ್ಠರಿದ್ದರೂ ಅವರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದರು.
ಬೆಂಗಳೂರಿನಲ್ಲಿ ಕೆರೆ ಒತ್ತುವರಿ ಆಗಿದ್ದು ನಿಜ. ಎಷ್ಟು ಕೆರೆಗಳಲ್ಲಿ ಯಾವ ಪ್ರಮಾಣದಲ್ಲಿ ಒತ್ತುವರಿಯಾಗಿದೆ ಎನ್ನುವುದನ್ನು ಪರಿಶೀಲಿಸಲು ಕೋಳಿವಾಡ ಅವರ ಅಧ್ಯಕ್ಷತೆಯಲ್ಲಿ ಸದನ ಸಮಿತಿ ಮಾಡಿದ್ದೇವೆ. ಸಮಿತಿಯ ವರದಿ ಬಂದ ತರುವಾಯ ಕ್ರಮ ಕೈಗೊಳ್ಳುತ್ತೇವೆ. ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ಹೇಳಿದರು.
ಇದಕ್ಕೂ ಮುನ್ನ ಬಿಜೆಪಿಯ ರಾಮಚಂದ್ರ ಗೌಡ, ಬೆಂಗಳೂರಿನ 390 ಕೆರೆಗಳಲ್ಲಿ 243 ಕೆರೆಗಳ ಒತ್ತುವರಿಯಾಗಿದೆ. ಕೆರೆಗಳು ಉಳಿದಲ್ಲಿ ಮನುಷ್ಯನ ಪ್ರಾಣವೂ ಉಳಿಯಲು ಸಾಧ್ಯ. ಹೀಗಾಗಿ ಕೆರೆಗಳ ಒತ್ತುವರಿ ತೆರವಿಗೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದರು. ಅಲ್ಲದೆ ಸರ್ಕಾರ ಅಮಾಯಕರು ಮಾಡಿರುವ ಮಾಡಿರುವ ಒತ್ತುವರಿಯನ್ನು ಮಾತ್ರ ತೆರವುಗೊಳಿಸುತ್ತಿದೆ. ಬಲಾಢ್ಯರ ಸುದ್ದಿಗೆ ಹೋಗುತ್ತಿಲ್ಲ ಎಂದು ಆಪಾದಿಸಿದರು.
2 ಲಕ್ಷ ಆಸ್ತಿಗಳಿಂದ ತೆರಿಗೆ ಬರುತ್ತಿಲ್ಲ
ಬೆಂಗಳೂರು ನಗರದಲ್ಲಿ 1406ಕೋಟಿ ಆಸ್ತಿ ತೆರಿಗೆ ವಸೂಲಿ ಬಾಕಿ ಇದ್ದು, ವಸೂಲಿಗೆ ಗುರಿ ನಿಗದಿಪಡಿಸಿ ಅಗತ್ಯ ಕ್ರಮ ಕೈಗೊಂಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವೈಎ ನಾರಾಯಣ ಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಅವರು, ತೆರಿಗೆ ವಸೂಲಿಯಲ್ಲಿ ಪಾಲಿಕೆ ಹಿಂದೆ ಬಿದ್ದಿದೆ. ಬೆಂಗಳೂರಿನಲ್ಲಿ ಒಟ್ಟು 16 ಲಕ್ಷ ಆಸ್ತಿಗಳಿಗೆ. ಇದರಲ್ಲಿ 14 ಲಕ್ಷ ಆಸ್ತಿಯಿಂದ ಮಾತ್ರ ತೆರಿಗೆ ವಸೂಲಿ ಆಗುತ್ತಿದೆ. ಉಳಿದ 2 ಲಕ್ಷ ಆಸ್ತಿಯಿಂದ ತೆರಿಗೆಯೇ ಬರುತ್ತಿಲ್ಲ. ಇವು ಅನಧಿಕೃತವಾಗಿಯೇ ಉಳಿದುಕೊಂಡಿವೆ.
ಇವನ್ನು ಪತ್ತೆ ಹಚ್ಚಬೇಕಾಗಿದೆ ಎಂದರು. ಬೆಂಗಳೂರಿನಲ್ಲಿ ತೆರಿಗೆ ಇಲ್ಲದಿದ್ದರೆ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಮುಖ್ಯಮಂತ್ರಿ ಡಿಸೆಂಬರ್ ಆರಂಭದಲ್ಲಿ 1400ಕೋಟಿ ತೆರಿಗೆ ಸಂಗ್ರಹವಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯವೇ ತೆರಿಗೆ ವಸೂಲಿ ಆಗದಿರಲು ಕಾರಣ. ತೆರಿಗೆ ವಸೂಲಿ ಮಾಡದಿದ್ದರೆ ಕಠಿಣ ಕ್ರಮ ಕೈಗೊಳ್ಳಲು ನಾವು ಸಿದ್ದರಿದ್ದೇವೆ ಎಂದರು.
ಐದು ವರ್ಷದಲ್ಲಿ 16, 461 ಆತ್ಮಹತ್ಯೆ
ಬೆಂಗಳೂರಿನಲ್ಲಿ ಕಳೆದ ಐದು ವರ್ಷದಲ್ಲಿ 16,461 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಜೆಡಿಎಸ್ ಸದಸ್ಯ ಎಂ.ಶ್ರೀನಿವಾಸ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಕೆಜೆ ಜಾರ್ಜ್ ಅವರು, ಆತ್ಮಹತ್ಯೆ ತಡೆಗೆ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದರು. ಠಾಣೆಗಳ ವ್ಯಾಪ್ತಿಯಲ್ಲಿ ನಡೆಯುವ ಕಮ್ಯುನಿಟಿ ಪೊಲೀಸಿಂಗ್, ಜನಸಂಪರ್ಕ ಸಭೆಗಳಲ್ಲಿ ಈ ಬಗ್ಗೆ ತಿಳಿವಳಿಕೆ, ಸ್ಪಂದನ ಕೇಂದ್ರಗಳಲ್ಲಿ ಮನೋವಿಜ್ಞಾನಿಗಳಿಂದ ಕೌನ್ಸಿಲಿಂಗ್ ನಡೆಸಲಾಗುತ್ತಿದೆ ಎಂದರು.
Advertisement