ಮಾತೃಭಾಷೆಯ ಕತ್ತು ಹಿಸುಕಿದ ಸನ್ನಿವೇಶದಲ್ಲಿ ಆಧ್ಯಕ್ಷನಾಗಲಾರೆ

ಭಾಷಾಮಾಧ್ಯಮದ ಕುರಿತು ಸುಪ್ರೀಂಕೋರ್ಟ್ ತೀರ್ಪಿನ ಹಿನ್ನಲೆಯಲ್ಲಿ ಮಾತೃಭಾಷೆಯ ಕತ್ತು ಹಿಸುಕಿದಂತಾಗಿರುವ...
ಸಾಹಿತಿ ದೇವನೂರು ಮಹಾದೇವ (ಸಂಗ್ರಹ ಚಿತ್ರ)
ಸಾಹಿತಿ ದೇವನೂರು ಮಹಾದೇವ (ಸಂಗ್ರಹ ಚಿತ್ರ)
Updated on

ಮೈಸೂರು: ಭಾಷಾಮಾಧ್ಯಮದ ಕುರಿತು ಸುಪ್ರೀಂಕೋರ್ಟ್ ತೀರ್ಪಿನ ಹಿನ್ನಲೆಯಲ್ಲಿ ಮಾತೃಭಾಷೆಯ ಕತ್ತು ಹಿಸುಕಿದಂತಾಗಿರುವ ಸನ್ನಿವೇಶದಲ್ಲಿ ಯಾಂತ್ರಿಕ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವುದಿಲ್ಲ ಎಂದು ಸಾಹಿತಿ ದೇವನೂರು ಮಹಾದೇವ ಸ್ಪಷ್ಟಪಡಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿತ್ ಅಧ್ಯಕ್ಷ ಪುಂಡಲೀಕ ಹಾಲಂಬಿಯವರಿಗೆ ಬಹಿರಂಗ ಪತ್ರವೊಂದನ್ನು ಬರೆದಿರುವ ಮಹಾದೇವ ಇಂದಿನ ಭಾಷಾ ಸನ್ನಿವೇಶದಲ್ಲಿ ಸಾಹಿತ್ಯ ಪರಿಷತ್ ಪೊರೆ ಕಳಚಿಕೊಂಡು ಎಲ್ಲರನ್ನೂ ಒಡಗೂಡಿ ಹೋರಾಡುವ ಅಗತ್ಯವಿದೆ. ಪರಿಷತ್ ಪೊರೆ ಕಳಚಿ ನಿಂತರೆ ನಾನು ಜೊತೆಗೂಡುತ್ತೇನೆ ಎಂದೂ ಹೇಳಿದ್ದಾರೆ.

'ಈ ಎಲ್ಲ ಹಿನ್ನಲೆಯಲ್ಲಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಲು ನಾನು ಸಮ್ಮತಿಸುತ್ತಿಲ್ಲ, ಇದರಿಂದ ಸಾಹಿತ್ಯ ಪರಿಷತ್‌ನ ಒಂದು ಹಲ್ಲಿಗೆ ನೋವು ಮಾಡಿಬಿಟ್ಟಿರುವೆ! ಈ ನೋವು ಕಡೆಗೆ ಪರಿಷತ್ ನಾಲಿಗೆ ಆಗಾಗಲಾದರೂ ಹೊರಳುತ್ತಿರಲಿ. ಇದರಿಂದಲೂ ಸಾಧ್ಯತೆ ಹುಟ್ಟಬಹುದೇನೋ ಎಂಬ ಆಸೆಯಿಂದ' ಎಂದು ಹೇಳಿದ್ದಾರೆ.

ಕನ್ನಡದ ಭಾಷಾ ಹಿನ್ನಲೆಯಲ್ಲಿ ಪಾರ್ಲಿಮೆಂಟ್‌ಗೇ ಚಾಟಿ ಬೀಸಬೇಕಿದೆ. ಜನಾಂದೋಲನ, ರಾಜಕೀಯದ ಮೇಲೆ ಒತ್ತಡ ವ್ಯಾಪಕವಾಗಿದೆ. ಸಾಹಿತ್ಯ ಪರಿಷತ್‌ನಿಂದಲೂ ಈ ನಡೆಯನ್ನೇ ನಿರೀಕ್ಷಿಸುತ್ತೇನೆ. ಪರಿಷತ್‌ಗೆ ನೂರು ವರ್ಷಗಳ ಹಿರಿಮೆ ಜತೆ ನೂರು ವರ್ಷದ ಜಡ್ಡೂ ಇರಬಹುದು. ಆದರೆ ಜೀವವಿದೆ. ಪೊರೆ ಕಳಚಬೇಕಿದೆ ಅಷ್ಟೇ ಎಂದು ಪರಿಷತ್‌ಗೂ ಚಾಟಿ ಬೀಸಿದರು.

ಸಾಹಿತ್ಯ ಪರಿಷತ್ ಹೊಸ ಹುಟ್ಟು ಪಡೆದರೆ ಅದಕ್ಕೆ ಪೂರಕ ವಾತಾವರಣ ಈಗ ಕರ್ನಾಟಕದಲ್ಲಿ ಇದೆ. ಏಕೆಂದರೆ ನನ್ನಷ್ಟೇ ಅಥವಾ ನಿಮ್ಮಷ್ಟೇ, ಮಾತೃಭಾಷೆ ಪ್ರಾಥಮಿಕ ನೆರೆಹೊರೆ ಸಮಾನ ಶಿಕ್ಷಣದ ಕಳಕಳಿ ಇರುವ ಮುಖ್ಯಮಂತ್ರಿಯನ್ನು ರಾಜ್ಯ ಪಡೆದಿದೆ ಎಂದಿರುವ ಮಹಾದೇವ, ಸಿದ್ದರಾಮಯ್ಯ ಮುಖವಾಡ ಇಲ್ಲದವರು, ಹೃತ್ಪೂರ್ವಕತೆ ಇರುವವರು. ಹಾಗಾಗಿ ಈ ರಾಜಕಾರಣದೋಳಗೂ ಇಂಥವರಿಂದ ಒಂದಿಷ್ಟು ನೀರೀಕ್ಷಿಸಬಹುದು. ಈಗ ಸಾಹಿತ್ಯ ಪರಿಷತ್ ಧೈರ್ಯ ಮಾಡಿ ಹೊಸ ಹುಟ್ಟು ಪಡೆದು ಸರ್ಕಾರಕ್ಕೆ ಸವಾಲೆಸೆದರೆ ಒಂದಿಷ್ಟು ಬದಲಾವಣೆ ಆಗಲೂಬಹುದು. ಹೊಸ ಸಾಧ್ಯತೆಗಳು ಗೋಚರಿಸಲೂಬಹುದು ಎಂಬ ಆಶಾಭಾವ ವ್ಯಕ್ತಪಡಿಸಿದ್ದಾರೆ.

ಸಿದ್ದಲಿಂಗಯ್ಯ ಆಯ್ಕೆ?
ಬೆಂಗಳೂರು:
ಶ್ರವಣಬೆಳಗೊಳದಲ್ಲಿ ನಡೆಯಲಿರುವ 81 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆಗೆ ದಲಿತ ಸಾಹಿತಿ ಡಾ. ಸಿದ್ದಲಿಂಗಯ್ಯ ಆಯ್ಕೆ ಬಹುತೇಕ ಖಚಿತವಾಗಿದೆ. ದೇವನೂರು ಮಹಾದೇವ ಅವರು ಒಪ್ಪದ ಕಾರಣ, ಸಮ್ಮೇಳನಾಧ್ಯಕ್ಷರ ಆಯ್ಕೆಗಾಗಿ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯನ್ನು ಶುಕ್ರವಾರ ಕರೆಯಲಾಗಿದೆ. ಡಾ.ಸಿದ್ದಲಿಂಗಯ್ಯ ಅವರ ಹೆಸರೇ ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಅಂತಿಮವಾಗುವ ಸಾಧ್ಯತೆಗಳಿವೆ ಎಂದು ಪರಿಷ್ತತಿನ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com