
ಬೆಂಗಳೂರು: ಇಸಿಸ್ ಉಗ್ರ ಸಂಘಟನೆ ಪರ ಟ್ವಿಟರ್ ಅಕೌಂಟ್ ನಿರ್ವಹಿಸುತ್ತಿದ್ದ ಮೆಹ್ದಿ ತನಿಖೆಗೆ ಸಹಕರಿಸುತ್ತಿಲ್ಲವೆಂದು ತನಿಖಾಧಿಕಾರಿಗಳು ಕೋರ್ಟ್‌ಗೆ ಲಿಖಿತ ಹೇಳಿಕೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ತನಿಖೆ ವೇಳೆ ಮೆಹ್ದಿ ಹಲವು ಈ-ಮೇಲ್‌ಗಳ ಹೊಂದಿದ್ದ ಎನ್ನುವುದು ಗೊತ್ತಾಗಿದೆ. ಆದರೆ, ಆ ಈ-ಮೇಲ್ ಪಾಸ್‌ವರ್ಡ್‌ಗಳನ್ನು ಆತ ನೀಡುತ್ತಿಲ್ಲ. ಪಾಸ್‌ವರ್ಡ್ ಮರೆತುಹೋಗಿದೆ ಎಂದು ಹೇಳುತ್ತಿದ್ದಾನೆ. ಇದರಿಂದ ತನಿಖೆಗೆ ಹಿನ್ನಡೆಯಾಗಿದೆ ಎಂದು ಪೊಲೀಸರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೆಹ್ದಿ ಸ್ನೇಹಿತ ಎನ್ನಲಾದ ಕೋಲ್ಕತಾದ ಶಹಜಮ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಆತನಿಂದ ಮೆಹ್ದಿ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಮತ್ತೊಂದೆಡೆ ಅಬ್ದುಲ್ ಖಾದರ್ ಸುಲ್ತಾನ್ ಎಂಬಾತ ಶಮಿವಿಟ್ನೆಸ್ ಟ್ವಿಟರ್‌ನಲ್ಲಿ ಮೆಹ್ದಿ ಜತೆ ನಿರಂತರ ಸಂಪರ್ಕ ಹೊಂದಿರುವುದು ಗೊತ್ತಾಗಿದೆ.
ಮೆಹ್ದಿಯ ಪ್ರತಿ ಟ್ವೀಟ್‌ಗೂ ಸುಲ್ತಾನ್ ಪ್ರತಿಕ್ರಿಯಿಸಿದ್ದಾನೆ. ಆತನ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಮೆಹ್ದಿ ಪ್ರಕರಣದ ತನಿಖಾ ಪ್ರಗತಿ, ಮಾಹಿತಿಯನ್ನು ಕೇಂದ್ರದ ತನಿಖಾಧಿಕಾರಿಗಳು ಕೇಳಿದ ಕಾರಣ ನಗರ ಪೊಲೀಸ್ ಆಯುಕ್ತ ಎಂ.ಎನ್ ರೆಡ್ಡಿ ಪ್ರಕರಣದ ಸಮಗ್ರ ಮಾಹಿತಿಯೊಂದಿಗೆ ದೆಹಲಿಗೆ ತೆರಳಿದ್ದಾರೆ.
ಸೈಬರ್ ಕೆಫೆಗಳ ಮೇಲೆ ದಾಳಿ
ಗ್ರಾಹಕರ ಮಾಹಿತಿ ಸಂಗ್ರಹಿಸದೆ ಇಂಟರ್ನೆಟ್ ಬಳಕೆಗೆ ಅವಕಾಶ ನೀಡುತ್ತಿದ್ದ ಸೈಬರ್ ಕೆಫೆಗಳ ಮೇಲೆ ದಾಳಿ ನಡೆಸಿದ ನಗರ ಪೊಲೀಸರು, ಮಾಲೀಕರ ವಿರುದ್ಧ 94 ಪ್ರಕರಣಗಳನ್ನು ದಾಖಲಿಸಿದ್ದಾರೆ.
Advertisement