
ಬೆಂಗಳೂರು: ಆಟೋ ಚಾಲಕರಿಗೆ ಬಿಸಿ ಮುಟ್ಟಿಸಿದ ಒಂದು ದಿನದ ನಂತರ ನಗರ ಸಂಚಾರ ಪೊಲೀಸರು ನಿಯಮ ಸಂಚಾರ ಉಲ್ಲಂಘಿಸುವ ದ್ವಿಚಕ್ರ ವಾಹನ ಸವಾರರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ ಒಂದೇ ದಿನದಲ್ಲಿ ಬರೋಬ್ಬರಿ 16,475 ಪ್ರಕರಣಗಳನ್ನು ದಾಖಲಿಸಿದ್ದಾರೆ.
ನಿಯಮ ಉಲ್ಲಂಘನೆ ಸಂಬಂಧ 253 ವಾಹನಗಳನ್ನು ಜಪ್ತಿ ಮಾಡಲಾಗಿದ್ದು 148 ಸವಾರರ ಚಾಲನಾ ಪರವಾನಗಿಯನ್ನು (ಡಿಎಲ್) ವಶಪಡಿಸಿಕೊಳ್ಳಲಾಗಿದೆ.
ಪಾದಚಾರಿ ಮಾರ್ಗದ ಮೇಲೆ ಬೈಕ್ ಸವಾರಿ, ಅತಿ ವೇಗ ಚಾಲನೆ, ಪ್ರವೇಶ ನಿಷೇಧ ರಸ್ತೆಯಲ್ಲಿ ವಾಹನ ಚಾಲನೆ, ಹೆಲ್ಮೆಟ್ ಇಲ್ಲದೆ ವಾಹನ ಚಾಲನೆ ಮತ್ತು ಟ್ರಿಪಲ್ ರೈಡಿಂಗ್, ಸಿಗ್ನಲ್ ಜಂಪ್ ಮುಂತಾದ ಸಂಚಾರ ಉಲ್ಲಂಘಿಸಿದ ದ್ವಿಚಕ್ರ ವಾಹನ ಸವಾರರ ವಿರುದ್ಧ ಬುಧವಾರ (ಡಿ.24) ಬೆಳಗ್ಗೆ 6ರಿಂದ ಸಂಜೆ 5ರವರೆಗೆ ಕಾರ್ಯಾಚರಣೆ ನಡೆಯಿತು.
ಬೈಕ್ ಚಾಲನೆ ವೇಳೆ ಮೊಬೈಲ್ ಫೋನ್ ಬಳಕೆ ಮಾಡುವ ಹಾಗೂ ಜನರ ಓಡಾಟಕ್ಕಾಗಿ ಇರುವ ಪಾದಚಾರಿ ಮಾರ್ಗದ ಮೇಲೆ ವಾಹನ ಚಲಾಯಿಸಿದ ಸವಾರರ ಡಿಎಲ್ ರದ್ದುಗೊಳಿಸಲು ಸಾರಿಗೆ ಇಲಾಖೆಗೆ ಶಿಫಾರಸು ಮಾಡಲಾಗಿದೆ.
ಇದೇ ವೇಳೆ ತಪಾಸಣೆ ವೇಳೆ ಸೂಕ್ತ ದಾಖಲೆಗಳು ಇಲ್ಲದ, ಅನುಮಾನಾಸ್ಪದವಾಗಿರುವ ವಾಹನಗಳನ್ನು ಜಪ್ತಿ ಮಾಡಿಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ವಿಶೇಷ ಕಾರ್ಯಾಚರಣೆ: ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರು, ಚಾಲಕರ ವಿರುದ್ಧ ಕಾರ್ಯಾಚರಣೆ ಮುಂದುವರೆಯಲಿದೆ. ನಗರದ ಎಲ್ಲಾ ಪ್ರದೇಶಗಳಲ್ಲೂ ಕಾರ್ಯಾಚರಣೆ ನಡೆಸುತ್ತೇವೆ. ಮುಂದಿನ ದಿನಗಳಲ್ಲಿ ಯಾವ ವಾಹನಗಳ ಮೇಲೆ ವಿಶೇಷ ಕಾರ್ಯಾಚರಣೆ ನಡುಸತ್ತೇವೆ ಎನ್ನುವುದನ್ನು ಹೇಳಲಾಗುದು ಎಂದು ಸಂಚಾರ ಪೊಲೀಸ್ ಹಿರಿಯ ಅಧಿಕಾರಿ ತಿಳಿಸಿದರು.
Advertisement