
ಬೆಂಗಳೂರು: ಆರೋಗ್ಯಕ್ಕೆ ಹಾನಿಕರವಾದ ಸೀಮೆಎಣ್ಣೆಯನ್ನು ಅಡುಗೆ ಇಂಧನವಾಗಿ ಬಳಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿ ಅಡುಗೆ ಅನಿಲವನ್ನು ಬಳಸುವ ಮೂಲಕ ಬೆಂಗಳೂರನ್ನು ಸೀಮೆಎಣ್ಣೆ ಮುಕ್ತ ನಗರವನ್ನಾಗಿಸಲು ಸರ್ಕಾರ ಮುಂದಾಗಿದೆ.
ಬೆಂಗಳೂರನ್ನು ಸೀಮೆಎಣ್ಣೆ ಮುಕ್ತ ನಗರವನ್ನಾಗಿಸುವ ನಿಟ್ಟಿನಲ್ಲಿ ಬಿಪಿಎಲ್ ಅನಿಲ ರಹಿತ ಪಡಿತದಾರರಿಗೆ ಸಬ್ಸಿಡಿ ದರದಲ್ಲಿ ಅಡುಗೆ ಅನಿಲ ಪೂರೈಕೆ ಮಾಡುವ ಸಂಬಂಧ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪ್ರಸ್ತಾವನೆಯನ್ನು ಸಲ್ಲಿಸಿದೆ.
ಪ್ರಸ್ತುತ ಸೀಮೆಎಣ್ಣೆಯನ್ನು ಅಡುಗೆಗೆ ಬಳಸುವ ಪಡಿತರ ಚೀಟಿದಾರರಿಗೆ ಸಬ್ಸಿಡಿಯಲ್ಲಿ ಅಡುಗೆ ಅನಿಲ ಸಂಪರ್ಕವನ್ನು ನೀಡುವಂತೆ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ನೀಡಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ದಿನೇಶ್ ಗುಂಡುರಾವ್ ಹೇಳಿದ್ದಾರೆ.
ನಗರದಲ್ಲಿ ಬಿಪಿಎಲ್ ಪಡಿತದಾರರು ಈಗಲೂ ಅಡುಗೆ ಮಾಡಲು ಇಂಧನವಾಗಿ ಸೀಮೆಎಣ್ಣೆಯನ್ನು ಬಳಸುತ್ತಾರೆ. ಇದು ಬಹಳ ಹಾನಿಕರ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ನಗರಾಭಿವೃದ್ಧಿ ಇಲಾಖೆಯಲ್ಲಿ ವಿಶೇಷ ಯೋಜನೆಗಳಿಗೆ ಮೀಸಲಿರಿಸಿರುವ ನಿಧಿಯಿಂದ ಸಬ್ಸಿಡಿ ದರದಲ್ಲಿ ಬಿಪಿಎಲ್ ವರ್ಗದವರಿಗೆ ಎಲ್‌ಪಿಜಿ ಪೂರೈಕೆ ಮಾಡಲು ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಸೀಮೆಎಣ್ಣೆ ಮುಕ್ತಗೊಳಿಸಲು ಪಡಿತರ ಚೀಟಿ ಮೂಲಕ ಸೀಮೆಎಣ್ಣೆ ಪಡೆಯುತ್ತಿರುವವರಿಗೆ ಎಲ್ ಪಿ ಜಿ ಗ್ಯಾಸ್ ಸಂಪರ್ಕ ಕಲ್ಪಿಸುವ ಕಾರ್ಯಕ್ರಮ ಹಾಗೂ ಸೀಮೆಎಣ್ಣೆ ಮತ್ತು ಅನಿಲದ ಬಳಕೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲು ಸರ್ಕಾರ ಮುಂದಾಗಿದೆ.
ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾರಿ ಮತ್ತು ಪಂಗಡ ಫಲಾನುಭವಿಗಳಿಗೆ ಮತ್ತು ಕಡಿಮೆ ಆದಾಯ ಹೊಂದಿದವರಿಗೆ ನಗರಾಭಿವೃದ್ಧಿ ಮತ್ತು ನಗರಾಪಾಲಿಕೆ ಸಹಾಯಧನ ಮೂಲಕ ಗ್ಯಾಸ್ ಸಂಪರ್ಕ ಒದಗಿಸಲಾಗುವುದು ಎಂದು ದಿನೇಶ್ ತಿಳಿಸಿದ್ದಾರೆ.
Advertisement