ಹೆತ್ತವಳನ್ನೇ ಸಾಯಿಸಿದ ವಿಮ್ಸ್, ಅಮ್ಮನಿದ್ದೂ ಅನಾಥ!

ಹೆತ್ತವಳು ವಾಸ್ತವದಲ್ಲಿ ಸತ್ತೇ ಇಲ್ಲ. ಹಾಗಂತ ಮಗು ಬೇಡವೆನ್ನಲು ಅಕ್ರಮ ಸಂಬಂಧ ಕಾರಣವಲ್ಲ...
ನವಜಾತ ಹೆಣ್ಣು ಶಿಶು
ನವಜಾತ ಹೆಣ್ಣು ಶಿಶು

ಬಳ್ಳಾರಿ: ಬಡಿದು ಹೊರಗಟ್ಟಿದ ಗಂಡ, ಕಿತ್ತು ತಿನ್ನುವ ಬಡತನದಿಂದಾಗಿ ತಾಯಿಯೇ ಹೆಣ್ಣು ಮಗುವನ್ನು ಆಸ್ಪತ್ರೆಯಸಲ್ಲಿ ಬಿಟ್ಟು ಹೋಗುವಂತೆ ಮಾಡಿದ ಕರುಣಾಜನಕನ ಕಥೆ ಇದು.
'ತಾಯಿ ಸತ್ತು ಹೋಗಿದ್ದರಿಂದ ಎರಡೂವರೆ ತಿಂಗಳ ಅನಾಥ ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಹೋಗಿದ್ದಾರೆ' ಎಂಬ ಸುದ್ದಿಗೆ ವಿಚಿತ್ರ ತಿರುವು ಸಿಕ್ಕಿದೆ.

ಹೆತ್ತವಳು  ವಾಸ್ತವದಲ್ಲಿ ಸತ್ತೇ ಇಲ್ಲ. ಹಾಗಂತ ಮಗು ಬೇಡವೆನ್ನಲು ಅಕ್ರಮ ಸಂಬಂಧ ಕಾರಣವಲ್ಲ, ಹೆಣ್ಣು ಮಗುವೆಂಬ ತಾತ್ಸಾರವೂ ಇಲ್ಲ.

ಬಡತನದಲ್ಲೇ ಬೆಂದ ಜೀವದ ಮೇಲೆ ಗಂಡನ ಹಿಂಸೆಯ ಬರೆಯೂ ಸೇರಿತ್ತು. ಹುಟ್ಟಿದ ಮಗುವನ್ನು ಕರೆದೊಯ್ದರೆ, ದಿನದ ಸಮಯವೆಲ್ಲ ಅದರ ಆರೈಕೆಗೆ ಮೀಸಲಾಗಿ, ಎಲ್ಲಿ ಬದುಕೇ ದುಸ್ತರವಾಗುವುದೋ ಎಂಬ ಭಯದಲ್ಲಿ ಹೆತ್ತಾಕೆ ಮಗುವನ್ನು ದೂರ ಮಾಡಿದ್ದಾಳೆ!

ಕರುಳ ಕುಡಿ ದೂರ: ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಕಾರಟಗಿ ಸಮೀಪದ ದೇವಿ ಕ್ಯಾಂಪ್ ನಿವಾಸಿ ಗೋವಿಂದಮ್ಮ ಎಂಬುವವಳೇ ಮಗುವನ್ನು ತ್ಯಜಿಸಿದ ನತದೃಷ್ಟ ತಾಯಿ. ಆಕೆಗೆ ಈಗಾಗಲೇ 3 ವರ್ಷದ ಗಂಡು ಮಗು ಇದೆ.

ಎರಡನೇ ಸಲ ಗರ್ಭಿಣಿಯಾಗಿದ್ದಾಗಲೇ ಗಂಡ ಹಿಂಸೆಕೊಟ್ಟು ದೂರತಳ್ಳಿದ್ದ. ತಂದೆ-ತಾಯಿಯೂ ಇಲ್ಲ. ಗರ್ಭಪಾತ ಮಾಡಿಸಿಕೊಳ್ಳುವ ನಿರ್ಧಾರಕ್ಕೆ ಬಂದರೂ ಹಣವಿಲ್ಲದೇ ಅನಿವಾರ್ಯವಾಗಿ ಬಸಿರು ಹೊತ್ತಿದ್ದಳಂತೆ.

ಗೋವಿಂದಮ್ಮ, ಕಳೆದ ಅ.28ರಂದು ಹೆಣ್ಣು ಮಗುವಿಗೇ ಜನ್ಮ ನೀಡಿದ್ದಳು. ಅದೂ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಹೋಗುವ ದಾರಿಯಲ್ಲಿಯೇ 108 ಆಂಬ್ಯುಲೆನ್ಸ್‌ನಲ್ಲೇ ಹೆರಿಗೆಯಾಗಿತ್ತು. ಆಸ್ಪತ್ರೆ ತಲುಪುವ ಹೊತ್ತಿಗೆ ನಿಶ್ಯಕ್ತಿಯಿಂದ ಗೋವಿಂದಮ್ಮ ಪ್ರಜ್ಞೆ ತಪ್ಪಿದರು.

ಎರಡು ದಿನ ಆಕೆಗೆ ಚಿಕಿತ್ಸೇ ನೀಡಲಾಯಿತು. ತೂಕ ಕಮ್ಮಿ ಇದ್ದ ಕಾರಣ, ಮಗುವನ್ನು ಐಸಿಯುದಲ್ಲಿ ಇರಿಸಿದ್ದರು. ಮೊದಲೇ ಬಡತನದಿಂದ ನೊಂದಿದ್ದ ಗೋವಿಂದಮ್ಮ ಮಗುವಿನ ಬಗ್ಗೆ ಕೇಳುವ ಗೋಜಿಗೂ ಹೋಗಲಿಲ್ಲ.

ಒಮದು ಹಂತದಲ್ಲಿ ಯಾರಿಗೂ ಹೇಳದೇ ಊರಿನತ್ತ ಹೆಜ್ಜೆ ಹಾಕಿಬಿಟ್ಟಿದ್ದಳು. ಈಕೆಯ ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಳ್ಳದ ಸಿಬ್ಬಂದಿ, ತಾಯಿ ಸತ್ತಿದ್ದಾಳೆಂದು ಹೇಳಿ, ಮಗುವಿಗೆ ಅನಾಥೆಯ ಪಟ್ಟ ಕಟ್ಟಿ, ಮಕ್ಕಳ ರಕ್ಷಣಾ ಘಟಕಕ್ಕೆ ಮಗುವನ್ನು ಸೇರಿಸಲಾಗಿತ್ತು.

ಪತ್ತೆ ಹಚ್ಚಿದ ಪೊಲೀಸರು: ವಿಮ್ಸ್ ಅಧಿಕಾರಿಗಳು ನೀಡಿದ ಮಾಹಿತಿ ಮೇರೆಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದವರು ಈ ಬಗ್ಗೆ ಕೌಲ್ ಬಜಾರ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ಬೆನ್ನುಬಿದ್ದ ಕೌಲ್‌ಬಜಾರ್ ಸಿಪಿಐ ಎಂ.ಬಿ.ಗೊಳ ಸಂಗಿ, ತಾಯಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಗುರುವಾರ ಗೋವಿಂದಮ್ಮನನ್ನು ಠಾಣೆಗೆ ಕರೆ ತಂದಿದ್ದು, ತನ್ನ ಸದ್ಯದ ಸ್ಥಿತಿಯಲ್ಲಿ ಮಗುವನ್ನು ಕರೆದೊಯ್ಯಲು ನಿರಾಕರಿಸಿದ್ದಾಳೆ. ಒಟ್ಟಾರೆ ಮಗು ತಾಯಿಯಿದ್ದೂ ಅನಾಥೆಯಾಗಿದೆ.

-ಶಶಿಧರ ಮೇಟಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com