ನಿಲ್ಲದ ಸರಣಿ ಸರಗಳ್ಳತನ

ಸರಗಳ್ಳರ ಭಾವಚಿತ್ರ
ಸರಗಳ್ಳರ ಭಾವಚಿತ್ರ

ಬೆಂಗಳೂರು: ನಗರದಲ್ಲಿ ಸರಣಿ ಸರಗಳ್ಳತನ ಮುಂದುವರಿದಿದ್ದು, ಇದು ಪೊಲೀಸರ ನಿದ್ದೆಗೆಡಿಸಿದೆ.

ಸರಗಳ್ಳರ ಕೃತ್ಯಕ್ಕೆ ಬ್ರೇಕ್ ಹಾಕಲು ಆರೋಪಿಗಳು ಪತ್ತೆಗೆ ವಿಶೇಷ ತಂಡ ರಚಿಸಿರುವ ಪೊಲೀಸರು, ಅವರ ಬಂಧನಕ್ಕೆ ಸಹಕರಿಸುವಂತೆ ಮಹಿಳೆಯರಲ್ಲಿ ಮನವಿ ಮಾಡಿದ್ದಾರೆ. ಮತ್ತೊಂದೆಡೆ ಗಿರವಿ ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ.

ಈ ನಡುವೆ ಕಳೆದೆರಡು ದಿನಗಳಿಂದ ನಡೆಯುತ್ತಿರುವ ಸರಣಿ ಸರಗಳ್ಳತನಕ್ಕೆ ಕಾರಣ ಎನ್ನಲಾದ ಇಬ್ಬರು ಶಂಕಿತರ ಭಾವಚಿತ್ರ ಹಾಗೂ ಎರಡು ದ್ವಿಚಕ್ರ ವಾಹನಗಳು ಚಿತ್ರವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.

ಬನಶಂಕರಿ, ಮಡಿವಾಳ ಹಾಗೂ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯ ಸಿಸಿಟಿವಿ ಪರಿಶೀಲನೆ ವೇಳೆ ಆರೋಪಿಗಳು ಹಾಗೂ ದ್ವಿಚಕ್ರ ವಾಹನದ ಸ್ಪಷ್ಟತೆ ಕಾಣಿಸಿರುವ ಹಿನ್ನೆಲೆಯಲ್ಲಿ ಶಂಕಿತರ ಭಾವಚಿತ್ರಗಳನ್ನು ಬಿಡುಗಡೆಗೊಳಿಸಲಾಗಿದೆ. ಈ ವಾಹನಗಳು ಅಥವಾ ಆರೋಪಿಗಳ ಬಗ್ಗೆ ಸುಳಿವು ಸಿಕ್ಕಲ್ಲಿ 9480800926ಕ್ಕೆ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಮಹಿಳೆಯರಲ್ಲಿ ಮನವಿ: ಮುಂಜಾನೆ ಹಾಗೂ ಸಂಜೆ ವಾಕಿಂಗ್ ಹೋಗುವಾಗ ಸರ ಧರಿಸಬೇಡಿ. ಒಂದು ವೇಳೆ ಧರಿಸಿದರೂ ಅದು ಕಾಣದಂತೆ ಬಟ್ಟೆ ಮುಚ್ಚಿಕೊಳ್ಳವಂತೆ ಮಹಿಳೆಯರಿಗೆ ಸಲಹೆ ನೀಡಿರುವ ಪೊಲೀಸರು, ಆರೋಪಗಳ ಬಗ್ಗೆ ಸುಳಿವು/ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.

ಸರ ಕಳೆದುಕೊಂಡಿರುವ ಮಹಿಳೆಯರು ಆರೋಪಿಗಳು ಯಾವ ವಾಹನದಲ್ಲಿ ಬಂದಿದ್ದರು, ವಾಹನ ಸಂಖ್ಯೆ, ಸಾಧ್ಯವಾದರೆ ಅವರ ಚಹರೆ ಬಗ್ಗೆ ಮಾಹಿತಿ ನೀಡುವಂತೆ ಕೋರಲಾಗಿದೆ. ಇದರಿಂದ ತನಿಖೆಗೆ ಸಹಕಾರಿಯಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸರಗಳ್ಳರು ಹೆಚ್ಚಾಗಿ ಕಪ್ಪುಬಣ್ಣದ ಪಲ್ಸರ್ ಬೈಕ್‌ನಲ್ಲಿ ಬಂದು ಸರಗಳ್ಳತನ ಮಾಡಿರುವ ಬಗ್ಗೆ ಸಿಸಿಟಿವಿಯಿಂದ ಬೆಳಕಿಗೆ ಬಂದಿದೆ. ಹಾಗಾಗಿ ಪೊಲೀಸರು ಕಪ್ಪು ಬಣ್ಣದ ಪಲ್ಸರ್ ಬೈಕ್‌ಗಳ ಮೇಲೆ ಕಣ್ಣಿಟ್ಟಿದ್ದು, ಮುಂಜಾನೆ ಹಾಗೂ ಸಂಜೆ ವೇಳೆ ತಪಾಸಣೆ ಬಿಗಿಗೊಳಿಸಿದ್ದಾರೆ. ಅನುಮಾನಾಸ್ಪದ ವ್ಯಕ್ತಿಗಳು ಹಾಗೂ ವಾಹನ ಸವಾರರ ಮೇಲೆ ನಿಗಾ ಇಡುವಂತೆ ಎಲ್ಲ ಠಾಣೆಗಳ ಅಧಿಕಾರಿಗಳು, ಸಿಬ್ಬಂದಿಗೆ ಕಟ್ಟು ನಿಟ್ಟಾಗಿ ಸೂಚಿಸಲಾಗಿದೆ.

60 ತಂಡ ರಚನೆ: ಸರಗಳ್ಳರನ್ನು ಪತ್ತೆ ಮಾಡಲು ಹೆಚ್ಚುವರಿ ಪೊಲೀಸ್ ಆಯುಕ್ತ ಪಿ. ಹರಿಶೇಖರನ್(ಅಪರಾಧ) ಅವರ ನೇತೃತ್ವದಲ್ಲಿ 60 ತಂಡಗಳನ್ನು ರಚಿಸಲಾಗಿದೆ. ಘಟನೆ ನಡೆದಿರುವ ಸ್ಥಳಗಳಲ್ಲಿರುವ ಎಲ್ಲ ಸಿಸಿಟಿವಿಗಳನ್ನು ಪರಿಶೀಲಿಸಿ, ವಿಶೇಷ ತಂಡದ ಸಿಬ್ಬಂದಿ ತನಿಖೆ ನಡೆಸುತ್ತಿದ್ದಾರೆ.

ಮತ್ತೆ ಸರಗಳ್ಳರ ಕೈಚಳಕ
ನಗರದಲ್ಲಿ ಸರಗಳ್ಳರ ಹಾವಳಿಗೆ ಇನ್ನೂ ಬ್ರೇಕ್ ಬಿದ್ದಿಲ್ಲ. ಗುರುವಾರ ರಾತ್ರಿ, ಶುಕ್ರವಾರ ಬೆಳಗ್ಗೆಯೂ ಸರಗಳ್ಳರ ಹಾವಳಿ ಮುಂದುವರಿದಿದ್ದು, ಮತ್ತ ಕೈಚಳಕ ತೋರಿಸಿದ್ದಾರೆ.

ಘಟನೆ1
ಕೆಲಸಕ್ಕೆ ಹೋಗುತ್ತಿದ್ದ ಮಹಿಳೆಯ ಸರ ದೋಚಿರುವ ಘಟನೆ ರಾಜಾಜಿನಗರ 5ನೇ ಹಂತದಲ್ಲಿ ಧರಿಸಿದ್ದ ಸರ ಬಂಗಾರದ್ದಲ್ಲ, ಬದಲಾಗಿ ತಾಳಿ ಮಾತ್ರ ಬಂಗಾರದ್ದಾಗಿದ್ದು, 10 ಗ್ರಾಂ. ತಾಳಿ ಕಳವಾಗಿದೆ ಎನ್ನಲಾಗಿದೆ. ಸರ ಹಾಗೂ ತಾಳಿ ಕಳೆದುಕೊಂಡ ಅಗ್ರಹಾರ ದಾಸರಹಳ್ಳಿ ನಿವಾಸಿ ಜ್ಯೋತಿ ಈ ಸಂಬಂಧ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿಗಳು ದ್ವಿಚಕ್ರ ವಾಹನದಲ್ಲಿ ಬಂದು ಸರಗಳ್ಳತನ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಘಟನೆ 2
ದೇವಸಂದ್ರ ಸಮೀಪದ ಲಕ್ಷ್ಮೀಪುರ ಬಡಾವಣೆಯಲ್ಲಿ ಶುಕ್ರವಾರ ಬೆಳಿಗ್ಗೆ ಕಳ್ಳರು ಡಿ.ವಿ ಸಾಕಮ್ಮ(57) ಎಂಬುವರ ಸರ ದೋಚಿದ್ದಾರೆ. ಬೆಳಿಗ್ಗೆ 7.30ರ ಸುಮಾರಿಗೆ ಸಾಕಮ್ಮ ಅವರು ಲಕ್ಷ್ಮೀಪುರ ಬಡಾವಣೆಯಲ್ಲಿರುವ ಮಗಳ ಮನೆಗೆ ಹಾಲು ಕೊಟ್ಟು ಮನಗೆ ಹಿಂತಿರುಗುತ್ತಿದ್ದ ವೇಳೆ ಪಲ್ಸರ್ ಬೈಕ್‌ನಲ್ಲಿ ಬಂದ ಕಳ್ಳರು 99 ಗ್ರಾಂ ತೂಕದ ಸರ ದೋಚಿ ಪರಾರಿಯಾಗಿದ್ದಾರೆ. ಆರೋಪಿಗಳು ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದರು ಎಂದು ಸಾಕಷ್ಟು ದೂರಿನಲ್ಲಿ ತಿಳಿಸಿದ್ದಾರೆ. ಕೆ.ಆರ್.ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ 3 ಎಚ್‌ಎಸ್‌ಆರ್ ಬಡಾವಣೆ 1ನೇ ಹಂತದಲ್ಲಿ ಸೀತಾದೇವಿ ಎಂಬುವವರು ಗುರುವಾರ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಅವರ 75 ಗ್ರಾಂ. ಸರ ದೋಚಿ ಪರಾರಿಯಾಗಿದ್ದಾರೆ. ಸಹಾಯಕ್ಕಾಗಿ ಕೂಗಿಕೊಂಡರಾದರೂ ಪ್ರಯೋಜನವಾಗಿಲ್ಲ. ಈ ಸಂಬಂಧ ಎಚ್‌ಎಸ್‌ಆರ್ ಲೇಔಟ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com