ಬೆಂಗಳೂರು ಸ್ಫೋಟ: ಸಿಮಿ ಕೈವಾಡ ಶಂಕೆ, ಎನ್‌ಐಎ ತನಿಖೆ

ಬೆಂಗಳೂರು ಬಾಂಬ್ ಸ್ಫೋಟ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ.
ಸ್ಫೋಟ ಸಂಭವಿಸಿದ ಕೋಕನಟ್ ಗ್ರೋವ್ ಪಬ್ ಎದುರಿನಲ್ಲಿ ಶ್ವಾನದಳದಿಂದ ಪರಿಶೀಲನೆ (ಸಂಗ್ರಹ ಚಿತ್ರ)
ಸ್ಫೋಟ ಸಂಭವಿಸಿದ ಕೋಕನಟ್ ಗ್ರೋವ್ ಪಬ್ ಎದುರಿನಲ್ಲಿ ಶ್ವಾನದಳದಿಂದ ಪರಿಶೀಲನೆ (ಸಂಗ್ರಹ ಚಿತ್ರ)

ಬೆಂಗಳೂರು: ಬೆಂಗಳೂರು ಬಾಂಬ್ ಸ್ಫೋಟ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ.

ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಇಂದು ನಡೆದ ಪೊಲೀಸ್ ಉನ್ನತಾಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದ್ದು, ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಲಾಗಿದೆ. ಸಭೆಯಲ್ಲಿ ಗೃಹ ಸಚಿವ ಕೆಜೆ ಜಾರ್ಜ್, ಡಿಜಿಪಿ ಲಾಲ್ ರುಕುಮ್ ಪಚಾವೋ, ಬೆಂಗಳೂರು ಪೊಲೀಸ್ ಆಯುಕ್ತ ಎಂಎನ್ ರೆಡ್ಡಿ, ಜಂಟಿ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಅಲೋಕ್ ಕುಮಾರ್ ಸೇರಿದಂತೆ ಮತ್ತಿತ್ತರ ಉನ್ನತಾಧಿಕಾರಿಗಳು ಭಾಗವಹಿಸಿದ್ದರು.

ಪ್ರಸ್ತುತ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳು ಚರ್ಚ್ ಸ್ಟ್ರೀಟ್‌ನಲ್ಲಿರುವ ಹೊಟೆಲ್ ಮತ್ತು ವಾಣಿಜ್ಯ ಕೇಂದ್ರಗಳಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಲು ಮುಂದಾಗಿದ್ದಾರೆ. ಅಂತೆಯೇ ಪ್ರಕರಣ ಸಂಬಂಧ ದೊರೆತ ಪ್ರಾಥಮಿಕ ಮಾಹಿತಿಯ ಆಧಾರದ ಮೇಲೆ ಚೆನ್ನೈ ಮತ್ತು ಪುಣೆಗೆ ಪೊಲೀಸ್ ತಂಡಗಳನ್ನು ರವಾನೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇನ್ನು ಬೆಂಗಳೂರು ಬಾಂಬ್ ಸ್ಫೋಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ವಿಶೇಷ ತನಿಖಾ ತಂಡವನ್ನು, ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರನ್ನು ಮತ್ತು ಇತರೆ ಉನ್ನತಾಧಿಕಾರಿಗಳನ್ನು ಬೆಂಗಳೂರಿಗೆ ರವಾನಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಅವರು ಸ್ಫೋಟದಲ್ಲಿ ಸಿಮಿ ಸಂಘಟನೆ ಕೈವಾಡವಿರುವ ಕುರಿತು ಶಂಕೆ ವ್ಯಕ್ತಪಡಿಸಿದ್ದಾರೆ. 'ಖಂಡಿತ ಇದೊಂದು ಭಯೋತ್ಪಾದಕರ ದಾಳಿಯಾಗಿದೆ. ಆದರ ತನಿಖೆ ಪೂರ್ಣಗೊಳ್ಳುವ ಮುನ್ನವೇ ನಾವು ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಕಿರಣ್ ರಿಜಿಜು ಅವರು ಅಭಿಪ್ರಾಯಪಟ್ಟಿದ್ದಾರೆ.

ನಿನ್ನೆ ರಾತ್ರಿ ಸುಮಾರು 8.30ರ ಹೊತ್ತಿನಲ್ಲಿ ಬೆಂಗಳೂರಿನ ಹೃದಯಭಾಗದಲ್ಲಿರುವ ಚರ್ಚ್ ಸ್ಟ್ರೀಟ್‌ನಲ್ಲಿ ಕಡಿಮೆ ತೀವ್ರತೆಯ ಸುಧಾರಿತ ಬಾಂಬ್ ಸ್ಫೋಟವಾಗಿತ್ತು. ಸ್ಫೋಟದಲ್ಲಿ ತಮಿಳುನಾಡು ಮೂಲದ 37 ವರ್ಷದ ಮಹಿಳೆ ಭವಾನಿ ಎಂಬುವವರು ಸಾವನ್ನಪ್ಪಿ, ಮೂವರು ಸಾರ್ವಜನಿಕರು ಗಾಯಗೊಂಡಿದ್ದರು. ಕೋಕನಟ್ ಗ್ರೋವ್ ಪಬ್ ಎದುರಿನ ಫುಟ್‌ಪಾತ್‌ನಲ್ಲಿರುವ ಹೂಕುಂಡದಲ್ಲಿ ಬಟ್ಟೆಯಂತಹ ವಸ್ತುವಿನಲ್ಲಿ ಬಾಂಬ್ ಅನ್ನು ಸುತ್ತಿಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com