ಇನ್ನು ಆನ್‌ಲೈನ್‌ನಲ್ಲೇ ಚಾರ್ಜ್‌ಶೀಟ್

ಪೊಲೀಸ್ ಠಾಣೆಯಲ್ಲಿ ದಾಖಲಾಗುವ ಪ್ರಕರಣಗಳಿಗೆ ಸಂಬಂಧಿಸಿ ಆರೋಪ ಪಟ್ಟಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬಳ್ಳಾರಿ: ಪೊಲೀಸ್ ಠಾಣೆಯಲ್ಲಿ ದಾಖಲಾಗುವ ಪ್ರಕರಣಗಳಿಗೆ ಸಂಬಂಧಿಸಿ ಆರೋಪ ಪಟ್ಟಿ ಆನ್‌ಲೈನ್‌ನಲ್ಲಿಯೇ ನ್ಯಾಯಾಲಯಕ್ಕೆ ಸಲ್ಲಿಕೆಯಾಗುತ್ತದೆ!

ಮೈಸೂರು ನಗರ ಮತ್ತು ಮಂಡ್ಯದಲ್ಲಿ ಪೈಲಟ್ ಮಾದರಿಯಲ್ಲಿ ಯೋಜನೆ ಅನುಷ್ಠಾನಗೊಳಿಸುವ ಪ್ರಯತ್ನ ನಡೆಯುತ್ತಿದೆ. ಅದು ಯಶಸ್ವಿಯಾದರೆ ರಾಜ್ಯಾದ್ಯಂತ ಜಾರಿಗೆ ಬರಲಿದೆ.

ರಾಜ್ಯದ ನ್ಯಾಯಾಲಯಗಳು ಉಪಯೋಗಿಸುವ ಇ-ಕೋರ್ಟ್ ಸಾಫ್ಟ್‌ವೇರ್ ಹಾಗೂ ಪೊಲೀಸ್ ಇಲಾಖೆ ಐಟಿ ಸಾಫ್ಟ್‌ವೇರ್ ಅನ್ನು ಲಿಂಕ್ ಮಾಡಿ ಪೂರಕವಾಗಿ ಕೆಲಸ ನಿರ್ವಹಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ.

ಆರೋಪ ಪಟ್ಟಿಯನ್ನು ಕಾಗದರಹಿತವಾಗಿ ನ್ಯಾಯಾಲಯಕ್ಕೆ ಸಲ್ಲಿಸುವ ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿದೆ. ಹೀಗಾಗಿ ಲಾಠಿ ಹಿಡಿಯಬೇಕಾದ ಕೈಗಳು ಕಂಪ್ಯೂಟರ್ ತರಬೇತಿಯಲ್ಲಿ ತೊಡಗಿಸಿಕೊಂಡು ಪೊಲೀಸ್ ಐಟಿ ಸಾಫ್ಟ್‌ವೇರ್ ಅರಿಯುವ ಕಸರತ್ತು ನಡೆಸಿವೆ.

ಮೈಸೂರು ನಗರ ಹಾಗೂ ಮಂಡ್ಯದಲ್ಲಿ ಡಿಸೆಂಬರ್‌ನಿಂದಲೇ ಪ್ರಯತ್ನ ಶುರುವಾಗಿದೆ. ಲೋಪದೋಷಗಳನ್ನು ಗುರುತಿಸಿ ಸರಿಪಡಿಸಿಕೊಳ್ಳಲಾಗುತ್ತಿದೆ. ರಾಜ್ಯದ ಪ್ರತಿ ಠಾಣೆಯೂ ಸಂಬಂಧಪಟ್ಟ ಕೋರ್ಟ್‌ಗಳಿಗೆ ಆರೋಪ ಪಟ್ಟಿಯನ್ನು ಆನ್‌ಲೈನ್‌ನಲ್ಲಿ ಕಳುಹಿಸುವ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಈಗಾಗಲೇ ಪೊಲೀಸ್ ಇಲಾಖೆ ಎಲ್ಲ ಜಿಲ್ಲೆಗಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದೆ.

2011ರಿಂದಲೇ ಪೊಲೀಸ್ ಐಟಿ ಸಾಫ್ಟ್‌ವೇರ್ ಬಳಕೆಯಲ್ಲಿದೆ. ಆರೋಪ ಪಟ್ಟಿಯನ್ನು ಮಾತ್ರ ಪ್ರಿಂಟ್ ತೆಗೆದು ಪೊಲೀಸ್ ಸಿಬ್ಬಂದಿ ಮೂಲಕ ನ್ಯಾಯಾಲಯಕ್ಕೆ ಸಲ್ಲಿಸಬೇಕಾಗಿತ್ತು. ಅನಂತರ ರಿಜಿಸ್ಟರ್‌ನಲ್ಲಿ ನೋಂದಣಿಯಾಗುತ್ತದೆ. ಅನಂತರದಲ್ಲಿ ನಂಬರ್ ಕೋಟ್ಟು, ನ್ಯಾಯಾಧೀಶರ ಕೈಗೆ ಸೇರುತ್ತಿತ್ತು.

ಆದರೆ, ಪೊಲೀಸ್ ಐಟಿ ಹಾಗೂ ಇ-ಕೋರ್ಟ್ ಸಾಫ್ಟ್‌ವೇರ್ ಪರಸ್ಪರ ಪೂರಕವಾಗಿ ಕೆಲಸ ಮಾಡುವಂತಾದರೆ ಆರೋಪ ಪಟ್ಟಿಯನ್ನು ಪೊಲೀಸ್ ಐಟಿಯಲ್ಲಿ ಸಬ್‌ಮಿಟ್ ಎಂದ ಬಟನ್ ಒತ್ತಿದರೆ ನ್ಯಾಯಾಲಯ ಇ-ಕೋರ್ಟ್ ಸಾಫ್ಟ್‌ವೇರ್‌ನಲ್ಲಿ ಸಂಬಂಧಪಟ್ಟ ನ್ಯಾಯಾಧೀಶರು ನೋಡಬಹುದಾಗಿದೆ.

ಅನುಕೂಲಗಳೇನು?
ಇ-ಕೋರ್ಟ್ ಸಾಫ್ಟ್‌ವೇರ್ ಹಾಗೂ ಪೊಲೀಸ್ ಐಟಿ ಸಾಫ್ಟ್‌ವೇರ್ ಪರಸ್ಪರ ಲಿಂಕ್ ಆದರೆ,

ಆನ್‌ಲೈನ್‌ನಲ್ಲಿಯೇ ಆರೋಪ ಪಟ್ಟಿ ಸಲ್ಲಿಸಬಹುದು

ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿನ ಬೆಳವಣಿಗೆ ಮಾಹಿತಿ ಪಡೆಯಬಹುದು

ವಿಚಾರಣೆಯಲ್ಲಿ ವಿಳಂಬ ತಪ್ಪಿ, ಪಾರದರ್ಶಕತೆ ಕಾಯ್ದುಕೊಳ್ಳಲು ಸಾಧ್ಯ

-ಶಶಿಧರ ಮೇಟಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com