ವಿದ್ಯಾರ್ಥಿಗಳ ರಕ್ಷಣೆಗೆ 113 ಸುರಕ್ಷಾ ಸೂತ್ರ

ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ರಕ್ಷಣೆಗೆ 113 ಅಂಶಗಳ ಸುರಕ್ಷಾ ನಿಯಮ ಜಾರಿಗೆ ತರಲು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕನ್ನಡಪ್ರಭ ವಾರ್ತೆ, ಬೆಂಗಳೂರು: ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ರಕ್ಷಣೆಗೆ 113 ಅಂಶಗಳ ಸುರಕ್ಷಾ ನಿಯಮ ಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಕರಡು ಪ್ರತಿಯನ್ನು ಬಿಡುಗಡೆ ಮಾಡಿದೆ.

ಆರೋಗ್ಯ, ಮೂಲಸೌಕರ್ಯ, ಕ್ರೀಡೆ, ಸಾರಿಗೆ, ವೈಯಕ್ತಿಕ ಭದ್ರತೆ, ಸಾಮಾಜಿಕ-ಮಾನಸಿಕ ಭದ್ರತೆ, ತುರ್ತು ಪರಿಸ್ಥಿತಿ ನಿರ್ವಹಣೆ ಹಾಗೂ ಸೈಬರ್ ಭದ್ರತೆ ಕುರಿತಂತೆ ಒಟ್ಟು 4 ವಿಭಾಗಗಳಲ್ಲಿ 113 ನಿಯಮಗಳನ್ನು ರಚಿಸಿ ಶಿಕ್ಷಣ ಇಲಾಖೆಯು ಮಕ್ಕಳ ರಕ್ಷಣಾ ನೀತಿಯ ಕರಡು ಪ್ರತಿ ಬಹಿರಂಗಮಾಡಿದೆ.

ಈ ಸಂಬಂಧ ನ.25ರೊಳಗೆ ಸಲಹೆ ಹಾಗೂ ಆಕ್ಷೇಪಣೆ ಸಲ್ಲಿಸುವಂತೆ ಪಾಲಕರು, ಶಿಕ್ಷಣ ತಜ್ಞರು ಹಾಗೂ ಆಡಳಿತ ಮಂಡಳಿಗಳಿಗೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

ಮಣಿಪಾಲ್‌ನಲ್ಲಿನ ಅತ್ಯಾಚಾರ ಪ್ರಕರಣ ಹಾಗೂ ವಿಬ್‌ಗ್ಯೊರ್ ಶಾಲೆಯಲ್ಲಿ ನಡೆದ ಲೈಂಗಿಕ ದೌರ್ಜನ್ಯದ ಬಳಿಕ ರಾಜ್ಯ ಸರ್ಕಾರ ಶಾಲೆಗಳ ಸುರಕ್ಷೆಗಾಗಿ ಮಾರ್ಗದರ್ಶಿ ಸೂತ್ರ ಮಾಡಿತ್ತು. ಇದಾದ ಬಳಿಕ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಿಂದಲೂ ನಿಯಂತ್ರಣ ಕ್ರಮ ತೆಗೆದುಕೊಳ್ಳಲಾಗಿತ್ತು.

ಆದರೆ ಇದೇ ಮೊದಲ ಬಾರಿಗೆ ಮಕ್ಕಳ ಸುರಕ್ಷಾ ನೀತಿ ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಮೂಲಕ ಶಿಕ್ಷಣ ಸಂಸ್ಥೆಗಲನ್ನು ಕಾನೂನು ಮೂಲಕವೇ ನಿಯಂತ್ರಿಸಲು ಸರ್ಕಾರ ಮುಂದಾಗಿದೆ.

ನೀತಿಯು ಒಟ್ಟು ಮೂಲರು ಭಾಗ ಹೊಂದಿದ್ದು, 71 ಪುಟಗಳ ಕರಡು ನೀತಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ವೆಬ್‌ಸೈಟ್‌ನಲ್ಲಿ ಹಾಕಲಾಗಿದೆ. ಮೊದಲ ಭಾಗದಲ್ಲಿ ಶಾಲೆ, ಸರ್ಕಾರ, ಶಿಕ್ಷಕರು, ಸ್ಥಳೀಯ ಆಡಳಿತ, ಪಾಲಕರು ಹಾಗೂ ವಿದ್ಯಾರ್ಥಿಗಳ ಜವಾಬ್ದಾರಿ ಬಗ್ಗೆ ಮಾಹಿತಿ ನೀಡಲಾಗಿದೆ.

ಎರಡನೇ ಭಾಗದಲ್ಲಿ ಸುರಕ್ಷಾ ಕ್ರಮಗಳು ಹಾಗೂ ಅನುಷ್ಠಾನದ ಬಗ್ಗೆ ವಿವರವಾಗಿ ಮಾಹಿತಿ ನೀಡಲಾಗಿದೆ. ಇನ್ನು ಮೂರನೇ ಭಾಗದಲ್ಲಿ ಶಾಲೆಗಳಲ್ಲಿ ಕಡ್ಡಾಯವಾಗಿ ಬೇಕಾದ ಮೂಲ ಸೌಕರ್ಯ, ಇತರ ಅಂಶಗಳ ಬಗ್ಗೆ ಸ್ಪಷ್ಟವಾಗಿ ಹೇಳಲಾಗಿದೆ. ಇಲಾಖೆ ಹೇಳಿರುವ 113 ಅಂಶಗಳಲ್ಲಿ 94 ಅಂಶಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕರಡು ಪ್ರತಿಯಲ್ಲಿ ಹೇಳಲಾಗಿದೆ.

ಬಾಲಕಾರ್ಮಿಕ ತಡೆ ಕಾಯಿದೆ, ಬಾಲ ನ್ಯಾಯ ಕಾಯಿದೆ, ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗದ ಕಾಯಿದೆ, ಬಾಲ ವಿವಾಹ ತಡೆ ಕಾಯಿದೆ, ಶಿಕ್ಷಣ ಹಕ್ಕು ಕಾಯಿದೆ, ಪೋಕ್ಸೊ ಹಾಗೂ ವಿಶ್ವ ಸಂಸ್ಥೆಯ ಮಾರ್ಗದರ್ಶನದಂತೆ ಈ ಕರಡು ಪ್ರತಿ ರಚಿಸಲಾಗಿದೆ. ಶಿಕ್ಷಣ ಇಲಾಖೆ ಹಾಗೂ ಕಾನೂನು ಇಲಾಖೆಯ ತಜ್ಞರು ಸೇರಿ ಈ ನೀತಿ ಹೊರತಂದಿದ್ದಾರೆ.

ಇಲಾಖೆಯ ವೆಬ್ ವಿಳಾಸ schooleducation.kar.nic.in

ಆಕ್ಷೇಪಣೆ ಹಾಗೂ ಸಲಹೆಗೆ
suchiraog@gmail.com
cpi.edu.sgkar@kar.nic.in
directorwcd01@gmail.com


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com