
ಬೆಂಗಳೂರು: ನಮ್ಮ ಮನೆಗಳಲ್ಲಿ ಮಗು ಊಟ ಮಾಡದೇ ಹಠ ಹಿಡಿದರೆ ಅಮ್ಮಂದಿರು ಪೊಲೀಸ್ ಬಂದು ನಿನ್ನ ಹಿಡಿದುಕೊಂಡು ಹೋಗ್ತಾರೆ ಎಂದು ಹೆದರಿಸ್ತಾರೆ. ಮಕ್ಕಳಲ್ಲಿ ಪೊಲೀಸ್ ಎಂದಾಕ್ಷಣ ಭಯ ಹುಟ್ಟುತ್ತದೆ. ಹಾಗಾಗಬಾರದು, ಪೊಲೀಸರು ಸಮಾಜದ ರಕ್ಷಕರು, ರಾಕ್ಷಸರಲ್ಲ. ಮಕ್ಕಳು ಪೊಲೀಸರೊಂದಿಗೆ ಸಂಕೋಚವಿಲ್ಲದೆ ಬೆರೆಯುವಂತಾಗಬೇಕು. ಅದಕ್ಕಾಗಿಯೇ ನಾವು ತಿಂಗಳ ಪ್ರತೀ ಶನಿವಾರ ಶಾಲಾ ಮಕ್ಕಳು ಪೊಲೀಸ್ ಸ್ಟೇಷನ್‌ಗೆ ಭೇಟಿ ನೀಡುವಂತೆ ಹೇಳುತ್ತಿದ್ದೇವೆ. ಅವರು ಪೊಲೀಸ್ ಸ್ಟೇಷನ್‌ಗೆ ಬಂದು ಅಲ್ಲಿನ ವಾತಾವರಣ ಹೇಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ಅವರ ಕುತೂಹಲ ಮತ್ತು ಸಂಶಯಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು ಎಂದು ಬೆಂಗಳೂರು ಪೊಲೀಸ್ ಆಯುಕ್ತ ಎಂ.ಎನ್ ರೆಡ್ಡಿ ಹೇಳಿದ್ದಾರೆ.
ಶನಿವಾರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಮಹಿಳಾ ದಕ್ಷತ ಸಮಿತಿ ಮತ್ತು ಬೆಂಗಳೂರು ಸಿಟಿ ಪೊಲೀಸ್ ಸಹಯೋಗದಲ್ಲಿ ನಡೆದ 'ಮಕ್ಕಳ ಮೇಲಿನ ದೌರ್ಜನ್ಯ' ಕುರಿತಾದ ಸೆಮಿನಾರ್‌ನಲ್ಲಿ ರೆಡ್ಡಿ ಈ ಮಾತುಗಳನ್ನಾಡಿದ್ದಾರೆ.
ಸೆಮಿನಾರ್‌ನಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಹಾಗೂ ಯಾವ ರೀತಿಯ ಮಕ್ಕಳು ದೌರ್ಜನ್ಯಕ್ಕೊಳಗಾಗುತ್ತಾರೆ ಎಂಬುದರ ಬಗ್ಗೆ ಬಂಜಾರಾ ಅಕಾಡೆಮಿಯ ಚೇರ್‌ಮೆನ್ ಡಾ. ಅಲಿ ಕ್ವಾಜಾ ಅವರು ವಿವರಿಸಿದರು. ನಮ್ಮ ಮಕ್ಕಳ ಬಗ್ಗೆ ನಾವು ಹೆಚ್ಚಿನ ಗಮನ ಹರಿಸಬೇಕಾಗಿದೆ. ಮಗು ಏಕಾಂಗಿ ಎಂದೆನಿಸಿದಾಗ, ಆತ್ಮ ವಿಶ್ವಾಸದ ಕೊರತೆಯಿದ್ದಾಗ ಅದು ದೌರ್ಜನ್ಯಕ್ಕೊಳಗಾಗುತ್ತದೆ. ಆದ್ದರಿಂದ ನಾವು ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಮಾಡಬೇಕಾಗಿದೆ ಎಂದು ಕ್ವಾಜಾ ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬಾಸ್ಕೋ ಎಕ್ಸಿ ಕ್ಯೂಟಿವ್ ಡೈರೆಕ್ಟರ್ ಫಾದರ್ ಜಾರ್ಜ್ ದೌರ್ಜನ್ಯಕ್ಕೊಳಗಾದ ಮಕ್ಕಳಿಗೆ ಹೆಚ್ಚಿನ ಬೆಂಬಲ ನೀಡಿ ಅವರು ಕುಗ್ಗದಂತೆ ನೋಡಿಕೊಳ್ಳಬೇಕು. ಮಕ್ಕಳ ಮೇಲೆ ಯಾವುದೇ ರೀತಿಯ ದೌರ್ಜನ್ಯಗಳಾದರೆ ಸಹಾಯವಾಣಿ ಸಂಖ್ಯೆ 1098ಗೆ ಕರೆ ಮಾಡಬೇಕು. ಈ ಮೂಲಕ ಮಕ್ಕಳ ಸಹಾಯಕ್ಕೆ ಪ್ರತಿಯೊಬ್ಬ ನಾಗರಿಕನೂ ಮುಂದಾಗಬೇಕು ಎಂದಿದ್ದಾರೆ.
ಡಿಆರ್‌ಡಿಓ ಅಸೋಸಿಯೇಟ್ ಡೈರೆಕ್ಟರ್ ಡಾ. ಲತಾ ಕ್ರಿಸ್ಟಿ ಅವರು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ಬಗ್ಗೆ ವಿವರಿಸಿದರೆ, ಶೇಷಾದ್ರಿಪುರಂ ಕಾನೂನು ಕಾಲೇಜಿನ ಅತಿಥಿ ಉಪನ್ಯಾಸಕ, ನ್ಯಾಯವಾದಿ ಸಚ್ಚಿದಾನಂದ ಕಾನೂನು ಬಗ್ಗೆ ಮಾಹಿತಿ ನೀಡಿದರು.
ದೌರ್ಜನ್ಯದ ವಿರುದ್ಧ ಜನದನಿ: ಪ್ರಸ್ತುತ ಕಾರ್ಯಕ್ರಮದಲ್ಲಿ ಮಕ್ಕಳ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ದನಿಯಾಗಿರುವ ಜನದನಿ ವೇದಿಕೆಯ ಸದಸ್ಯರು ಪಾಲ್ಗೊಂಡಿದ್ದು 20 ಅಂಶಗಳನ್ನೊಳಗೊಂಡ ಮನವಿ ಪತ್ರವನ್ನು ಕಮಿಷನರ್ ಅವರಿಗೆ ಸಲ್ಲಿಸಿದರು.
Advertisement