ರವೀಂದ್ರ ಕಲಾಕ್ಷೇತ್ರ ಬಂದ್

ರವೀಂದ್ರ ಕಲಾಕ್ಷೇತ್ರ
ರವೀಂದ್ರ ಕಲಾಕ್ಷೇತ್ರ
Updated on

ಬೆಂಗಳೂರು: ನಗರದ ಪ್ರಸಿದ್ಧ ಸಾಂಸ್ಕೃತಿಕ ರಂಗ ಮಂದಿರವೆನಿಸಿರುವ ರವೀಂದ್ರ ಕಲಾಕ್ಷೇತ್ರವನ್ನು ನ.16ರಿಂದ ಎರಡು ತಿಂಗಳು ಮುಚ್ಚಲಾಗುತ್ತದೆ.

ಈ ಅವಧಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಧ್ವನಿ-ಬೆಳಕು ವ್ಯವಸ್ಥೆಯೊಂದಿಗೆ ಸುಮಾರು ರು.3.30 ಕೋಟಿ ವೆಚ್ಚದಲ್ಲಿ ನವೀಕರಣಗೊಳ್ಳಲಿದೆ.

ಸಾರ್ವಜನಿಕರ ಬಹುದಿನದ ಒತ್ತಾಯದ ಮೇರೆಗೆ ಕಲಾಕ್ಷೇತ್ರವನ್ನು ನವೀಕರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಾಗಿದೆ. ನವೀಕರಣ ಕೆಲಸಕ್ಕಾಗಿ ಕಲಾವಿದ ಡಿ.ಕೆ ಚೌಟ ಅವರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿ ರಚಿಸಲಾಗಿದ್ದು, ಅಂತಾರಾಷ್ಟ್ರೀಯ ಮಟ್ಟದ ಅತ್ಯಾಧುನಿಕ ಧ್ವನಿ-ಬೆಳಕಿನ ವ್ಯವಸ್ಥೆಗಾಗಿ ಸುಮಾರು ರು.1.6 ಕೋಟಿ, ಸಭಾಂಗಣದ ಇತರೆ ದುರಸ್ತಿ ಕಾಮಗಾರಿಗಳಿಗೆ ರು.1.20 ಕೋಟಿ ಖರ್ಚು ಮಾಡಲಾಗುವುದು.

ನ.15ರವರೆಗ ಕಾರ್ಯಕ್ರಮಗಳು ಬುಕ್ಕಿಂಗ್ ಆಗಿದ್ದವು. ನ.16ರಿಂದ ಕಾಮಗಾರಿ ಕೈಗೊಳ್ಳಲಾಗುವುದು. ಜನವರಿ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಕೆ.ಎ ದಯಾನಂದ ತಿಳಿಸಿದ್ದಾರೆ.

ನಾನಾ ಕಾಮಗಾರಿ

ಸದ್ಯ ರವೀಂದ್ರ ಕಲಾಕ್ಷೇತ್ರದಲ್ಲಿ ತುಂಬಾ ಹಳೆಯದಾದ ಧ್ವನಿ-ಬೆಳಕಿನ ವ್ಯವಸ್ಥೆ ಇದೆ. ಅದರಿಂದ ಹಲವು ಬಾರಿ ಆಯೋಜಕರು ಮತ್ತು ವೀಕ್ಷಕರಿಗೂ ತೊಂದರೆ ಉಂಟಾಗಿತ್ತು. ಹೀಗಾಗಿ ಈ ಎರಡನ್ನೂ ತೆಗೆದು ಹೊಸತಾಗಿ ಧ್ವನಿ-ಬೆಳಕಿನ ವ್ಯವಸ್ಥೆ ಅಳವಡಿಸಲಾಗುತ್ತದೆ. ಜತೆಗೆ ಹಾಳಾದ ಆಸನಗಳನ್ನು ಸರಿಪಡಿಸುವುದು, ಗ್ರೀನ್ ರೂಂ, ವೇದಿಕೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸುವುದು, ವೇದಿಕೆ ಮೇಲಿನ ಸ್ಕ್ರೀನ್ ಬದಲಿಸುವುದು ಇವೆಲ್ಲವೂ ಪೂರ್ಣಗೊಂಡರೆ ಕಲಾಕ್ಷೇತ್ರ ಆಕರ್ಷವಾಗಿ ಕಂಗೊಳಿಸಲಿದೆ.

ಕಲಾಕ್ಷೇತ್ರದ ಹುಟ್ಟು
1961 ನೊಬೆಲ್ ಪ್ರಶಸ್ತಿ ಪುರಸ್ಕೃತ ರವೀಂದ್ರನಾಥ ಟ್ಯಾಗೋರರ ಜನ್ಮ ಶತಾಬ್ದಿ ವರ್ಷ. ರಾಷ್ಟ್ರದ ಆಯ್ದ ರಾಜ್ಯಗಳಲ್ಲಿ ರವೀಂದ್ರ ರಂಗ ಮಂದಿರ ನಿಮಿಸುವ ಮೂಲಕ ಜನ್ಮ ಶತಾಬ್ದಿ ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಅಂತೆಯೇ ರವೀಂದ್ರ ಕಲಾಕ್ಷೇತ್ರದ ನಿರ್ಮಾಣಕ್ಕೆ ರು.2 ಲಕ್ಷ ಅನುದಾನ ನೀಡಿತು.

ಇದರ ಜತೆಗೆ ಅಂದಿನ ಮೈಸೂರು ಸರ್ಕಾರ, ಉದ್ಯಮಿಗಳು, ಸಾರ್ವಜನಿಕರು ಕೂಡ ದೇಣಿಗೆ ನೀಡಿದರು. 1963ರ ಮಾರ್ಚ್‌ನಲ್ಲಿ ಕಲಾಕ್ಷೇತ್ರ ಉದ್ಘಾಟನೆಗೊಂಡಿತು. ಸಾಂಸ್ಕೃತಿಕ ಚಟುವಟಿಕೆಗಳಿಗೆ ಮೀಸಲಾದ ಕಲಾಕ್ಷೇತ್ರದಲ್ಲಿ ಐದು ವರ್ಷದ ಹಿಂದೆಯೇ ಮುಖ್ಯ ವೇದಿಕೆಯನ್ನು ವರ್ಣರಂಜಿತವಾಗಿ ರೂಪುಗೊಳಿಸಲಾಗಿತ್ತು.

ಶಿಲ್ಪವನಕ್ಕೆ ಮೆರುಗು

ಕಲಾಕ್ಷೇತ್ರ ಆವರಣದಲ್ಲಿರುವ ಶಿಲ್ಪವನದಲ್ಲಿ ಈಗಾಗಲೇ ರು.16 ಲಕ್ಷ ಖರ್ಚು ಮಾಡಿ ಆಕರ್ಷಕ ಹುಲ್ಲು ಹಾಸು, ಅಲಂಕಾರಿಕ ಗಿಡಗಳನ್ನು ನೆಟ್ಟು ಅಭಿವೃದ್ಧಿಪಡಿಸಲಾಗಿದೆ. ಇದೀಗ ರು.12 ಲಕ್ಷ ವೆಚ್ಚದಲ್ಲಿ ಬೆಳಕಿನ ವ್ಯವಸ್ಥೆ ಅಳವಡಿಸಲಾಗುತ್ತಿದೆ.

-ನಯನಾ ಬಿ.ಜೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com