ಎಟಿಎಂನಲ್ಲಿ ಮಹಿಳೆ ಮೇಲೆ ಹಲ್ಲೆ: ಬಂಧನಕ್ಕೆ ಹೊಸ ತಂಡ

ವರ್ಷವಾದರೂ ಆರೋಪಿ ಬಗ್ಗೆ ಸಿಕ್ಕಿಲ್ಲ ಸುಳಿವು, ಹೊಸ ತಂಡ ರಚನೆಗೆ ಒಲವು
ಎಟಿಎಂನಲ್ಲಿ ದುಷ್ಕರ್ಮಿಯಿಂದ ಹಲ್ಲೆಗೊಳಗಾದ ಜ್ಯೋತಿ ಉದಯ್
ಎಟಿಎಂನಲ್ಲಿ ದುಷ್ಕರ್ಮಿಯಿಂದ ಹಲ್ಲೆಗೊಳಗಾದ ಜ್ಯೋತಿ ಉದಯ್

ವರ್ಷವಾದರೂ ಆರೋಪಿ ಬಗ್ಗೆ ಸಿಕ್ಕಿಲ್ಲ ಸುಳಿವು
ತನಿಖೆಗೆ ಆಸಕ್ತಿ ಇರುವ ಅಧಿಕಾರಗಳ ಹೊಸ ತಂಡ ರಚನೆಗೆ ಒಲವು
ಬೆಂಗಳೂರು:
ನಗರದ ಜನತೆಯಲ್ಲಿ ತಲ್ಲಣ ಮೂಡಿಸಿದ್ದ ಎನ್‌ಆರ್ ವತ್ತ ಕಾರ್ಪೋರೇಷನ್ ಬ್ಯಾಂಕ್ ಎಟಿಎಂ ಒಳಗೆ ನಡೆದ ಜ್ಯೋತಿ ಉದಯ್ ಮೇಲೆ ಹಲ್ಲೆ ನಡೆಸಿದ ಆರೋಪಿ ಬಂಧನಕ್ಕಾಗಿ ಹೊಸ ತಂಡ ರಚನೆ ಮಾಡಲಾಗುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಪಿ.ಹರಿಶೇಖರನ್ ತಿಳಿಸಿದ್ದಾರೆ.

2013 ನ.19ರಂದು ಕಾರ್ಪೋರೇಷನ್ ಬ್ಯಾಂಕ್ ಸರ್ವೀಸ್ ಶಾಖೆ ಮ್ಯಾನೇಜರ್ ಜ್ಯೋತಿ ಅವರ ಮೇಲೆ ಹಲ್ಲೆ ನಡೆದ ಬಳಿಕ ಆರೋಪಿ ಬಂಧನಕ್ಕಾಗಿ ವಿಶೇಷ ತಂಡ ರಚಿಸಿ ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ರಾಜ್ಯದ ವಿವಿಧ ಗಡಿ ಪ್ರದೇಶಗಳಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದರೂ ಫಲ ನೀಡಿರಲಿಲ್ಲ. ಹೀಗಾಗಿ ಆರೋಪಿ ಬಂಧನಕ್ಕಾಗಿ ಹೊಸತಂಡವನ್ನು ರಚಿಸಲಾಗುತ್ತಿದೆ.

ಈ ಹಿಂದೆ ಆರೋಪಿ ಬಂಧನಕ್ಕೆ ಯಾವ ರೀತಿಯ ಕಾರ್ಯಾಚರಣೆ ನಡೆಸಲಾಗಿತ್ತು? ಯಾವ ಭಾಗದಲ್ಲಿ ಶೋಧ ಕಾರ್ಯ ನಡೆಸಲಾಗಿದೆ? ಸಿಕ್ಕದ್ದ ಸುಳಿವುಗಳೇನು? ಎಂಬ ಬಗ್ಗೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಅಧಿಕಾರಿ, ಸಿಬ್ಬಂದಿಯೊಂದಿಗೆ ಸಭೆ ನಡೆಸುತ್ತೇವೆ. ಆಸಕ್ತಿ ಇಲ್ಲದ ಅಸಮರ್ಥ ಅಧಿಕಾರಿ, ಸಿಬ್ಬಂದಿಯನ್ನು ತೆಗೆದು ಹೊಸಬರನ್ನು ಸೇರಿಸಿಕೊಳ್ಳುತ್ತೇವೆ. ತನಿಖೆ ಇಷ್ಟವಿಲ್ಲದವರು ಹಿಂದೆ ಸರಿಯುವಂತೆ ಕೇಳಿಕೊಳ್ಳಲಾಗುವುದು. ನಂತರ ಹೊಸ ತಂಡ ಹಾಗೂ ಕಾರ್ಯತಂತ್ರ ರಚಿಸಲಾಗುವುದು ಎಂದು ಹರಿಶೇಖರನ್ ತಿಳಿಸಿದರು.

ಎಟಿಎಂ ಕೇಂದ್ರಗಳಲ್ಲಿ ಸುಧಾರಣೆ:
ಜ್ಯೋತಿ ಮೇಲಿನ ಹಲ್ಲೆ ಬಳಿಕ ಅಸುರಕ್ಷಿತ ಎಟಿಎಂ ಕೇಂದ್ರಗಳಿಗೆ ಬೀಗ ಹಾಕಲಾಗುವುದು ಎಂದು ನಗರ ಪೊಲೀಸ್ ಆಯುಕ್ತರು ಘೋಷಿಸಿದ್ದರು. ಅಲ್ಲದೇ ನಿಗದಿತ ಕಾಲಾವಧಿಯಲ್ಲಿ ಕ್ರಮ ಕೈಗೊಳ್ಳದ ನೂರಾರು ಎಟಿಎಂಗಳಿಗೆ ಬೀಗ ಜಡಿಯಲಾಗಿತ್ತು. ಪೊಲೀಸರು ಕ್ರಮದಿಂದ ನಗರದ ಬಹುತೇಕ ಎಟಿಎಂಗಳಲ್ಲಿ ಸುಧಾರಣೆ ಕಂಡುಬಂದಿದೆ. ಸಿಸಿಟಿವಿ ಕ್ಯಾಮೆರಾ, ಭದ್ರತಾ ಸಿಬ್ಬಂದಿ ನಿಯೋಜನೆ, ಸೈರನ್ ಅಳವಡಿಕೆ, ಪಾರದರ್ಶಕ ಗಾಜುಗಳನ್ನು ಎಟಿಎಂ ಕೇಂದ್ರಗಳಿಗೆ ಅಳವಡಿಸಲಾಗಿದೆ.

ಗ್ರಾಹಕರ ಕೊರತೆ ಹಿನ್ನಲೆಯಲ್ಲಿ ಸೆಕ್ಯೂರಿಟಿ ಸಿಬ್ಬಂದಿ ನಿಯೋಜನೆ ಬದಲು ಎಟಿಎಂಗೆ ರಾತ್ರಿ ಬೀಗ ಹಾಕುವುದೇ ಸೂಕ್ತ ಎನ್ನುವ ನಿರ್ಧಾರಕ್ಕೆ ಬಂದಿರುವ ಎಸ್‌ಬಿಐ ನಗರದ ಹಲವು ಎಟಿಎಂಗಳನ್ನು ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೂ ಬೀಗ ಹಾಕುತ್ತಿದೆ. ಬಹುತೇಕ ಖಾಸಗಿ ಬ್ಯಾಂಕ್‌ಗಳ ಎಟಿಎಂ ಕೇಂದ್ರಗಳೂ ಸುರಕ್ಷಿತಾ ಕ್ರಮಗಳನ್ನು ಕೈಗೊಂಡಿದೆ. ವರ್ಷದ ಹಿಂದಿದ್ದ ಸ್ಥಿತಿಗೆ ಹೋಲಿಸಿದಲ್ಲಿ ಈಗ ಸುಧಾರಣೆ ಕಂಡುಬಂದಿದೆ ಎಂದು ತಿಳಿಸಿದರು. ಎಟಿಎಂ ಕೇಂದ್ರಗಳ ಬಳಿ ಕಡ್ಡಾಯವಾಗಿ ಗಸ್ತು ಹಾಕಲಾಗುತ್ತಿದೆ. ಸೆಕ್ಯುರಿಟಿ ಗಾರ್ಡ್‌ಗಳು ಎಚ್ಚರದಿಂದ ಇರುವಂತೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ ಎಂದರು.

ಕರೆಗಳು ಬರುತ್ತವೆ, ಆದರೆ ಸುಳಿವಿಲ್ಲ
ದುಷ್ಕರ್ಮಿ ಬಗ್ಗೆ ಸುಳಿವು ನೀಡಿದರೆ 5 ಲಕ್ಷ ಬಹುಮಾನ ನೀಡುವುದಾಗಿ ಸರ್ಕಾರ ಘೋಷಿಸಿತ್ತು. ಮಾಧ್ಯಮಗಳಲ್ಲಿ ಬಂದ ಫೋಟೋ, ವಿಡಿಯೋ ದೃಶ್ಯಾವಳಿ ಗಮನಿಸಿದ ಸಾವಿರಾರು ಮಂದಿ ಹೋಲಿಕೆಯಾಗುವಂತೆ ವ್ಯಕ್ತಿ ಸಿಕ್ಕಿದ್ದಾನೆಂದು 100ಕ್ಕೆ ಕರೆ ಮಾಡಿದ್ದಾರೆ. ಆದರೆ ವಿಚಾರಣೆ ನಡೆಸಿದಾಗ ಆ ವ್ಯಕ್ತಿ ಅಲ್ಲ ಎಂದು ಕಂಡು ಬಂದಿದೆ ಎಂದು ಹರಿಶೇಖರನ್ ಹೇಳಿದರು.

ಮಗಳ ಹುಟ್ಟುಹಬ್ಬ ಆಚರಿಸಲು ಬಟ್ಟೆ ತಿಂಡಿ ಕೊಳ್ಳಲೆಂದು ಜ್ಯೋತಿ ಅವರು ನ.19ರಂದು ಬೆಳಗ್ಗೆ 7 ಗಂಟೆಗೆ, ಎನ್‌ಆರ್ ವೃತ್ತದಲ್ಲಿರುವ ಕಾರ್ಪೋರೇಷನ್ ಬ್ಯಾಂಕ್ ಎಟಿಎಂಗೆ ತೆರಳಿದ್ದರು. ಅವರು ಹೋಗುತ್ತಿದ್ದಂತೆ ಒಳನುಗ್ಗಿದ ದುಷ್ಕರ್ಮಿ, ಶೆಟರ್ ಎಳೆದು ಹಣಕ್ಕಾಗಿ ಜ್ಯೋತಿ ಅವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಮೊಬೈಲ್ ಫೋನ್ ಹಾಗು ಕಾರ್ಡ್ ಎತ್ತಿಕೊಂಡು ಪರಾರಿಯಾಗಿದ್ದ. ಸುಮಾರು ಒಂದು ತಾಸು ಎಟಿಎಂ ಕೇಂದ್ರದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಜ್ಯೋತಿ ಮುಚ್ಚಿದ ಶೆಟರ್‌ನಿಂದ ಹೊರಬರಲು ಹೋರಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com