ಮಹಿಳೆಯರಿಗೆ ಕಿರುಕುಳ ನೀಡಿದ್ದ ಆರು ಮಂದಿಯ ಬಂಧನ

ನಗರದ ಪ್ರತಿಷ್ಟಿತ ಮಹಾತ್ಮಾಗಾಂಧಿ ರಸ್ತೆಯಲ್ಲಿ ಮಹಿಳೆಯರನ್ನು ಹಿಂಬಾಲಿಸಿ, ಚುಡಾಯಿಸಿದ್ದ ಯುವಕರ ಗುಂಪನ್ನು..
ಐಸ್‌ಕ್ರೀಮ್ ಪಾರ್ಲರ್ ಬಳಿ ನಡೆದ ಘಟನೆಯ ಮೊಬೈಲ್ ಚಿತ್ರೀಕರಣದ ದೃಶ್ಯ (ಸಂಗ್ರಹ ಚಿತ್ರ)
ಐಸ್‌ಕ್ರೀಮ್ ಪಾರ್ಲರ್ ಬಳಿ ನಡೆದ ಘಟನೆಯ ಮೊಬೈಲ್ ಚಿತ್ರೀಕರಣದ ದೃಶ್ಯ (ಸಂಗ್ರಹ ಚಿತ್ರ)

ಬೆಂಗಳೂರು: ನಗರದ ಪ್ರತಿಷ್ಟಿತ ಮಹಾತ್ಮಾಗಾಂಧಿ ರಸ್ತೆಯಲ್ಲಿ ಮಹಿಳೆಯರನ್ನು ಹಿಂಬಾಲಿಸಿ, ಚುಡಾಯಿಸಿದ್ದ ಯುವಕರ ಗುಂಪನ್ನು ಕೇವಲ 48 ಗಂಟೆಯಲ್ಲೇ ಬಂಧಿಸುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಕಳೆದ ಭಾನುವಾರ ರಾತ್ರಿ ಎಂಜಿ ರಸ್ತೆಯಲ್ಲಿ ತೆರಳುತ್ತಿದ್ದ ಮಹಿಳೆಯರ ಕಾರನ್ನು ಯುವಕರ ಗುಂಪೊಂದು ಹಿಂಬಾಲಿಸಿದ್ದಲ್ಲದೇ, ಐಸ್‌ಕ್ರೀಮ್ ಪಾರ್ಲರ್ ಬಳಿ ಕಾರನ್ನು ತಡೆದು ನಿಲ್ಲಿಸಿ ಅವರಿಗೆ ಕಿರುಕುಳ ನೀಡಿದ್ದರು. ಅಲ್ಲದೆ ಕಾರಿನ ಬಾಗಿಲನ್ನು ತೆರೆಯುವಂತೆಯೂ ಮತ್ತು ತೆರೆಯದಿದ್ದರೆ ಕಾರಿನ ಬಾಗಿಲ ಗ್ಲಾಸ್ ಅನ್ನು ಹೊಡೆದುಹಾಕುವುದಾಗಿ ಹೆದರಿಸಿದ್ದರು. ಇವಿಷ್ಟು ದೃಶ್ಯಾವಳಿಗಳನ್ನು ಕಾರಿನಲ್ಲಿಯೇ ಇದ್ದ ಯುವತಿಯೊಬ್ಬಳು ಚಿತ್ರೀಕರಿಸಿದ್ದಾಳೆ.

ಮೊಬೈಲ್ ಚಿತ್ರೀಕರಣದ ದೃಶ್ಯಾವಳಿಯ ಆಧಾರದ ಮೇಲೆ ಪೊಲೀಸರು ಪ್ರಸ್ತುತ 6 ಮಂದಿಯನ್ನು ಬಂಧಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ನಗರ ಪೊಲೀಸ್ ಆಯುಕ್ತ ಎಂಎನ್ ರೆಡ್ಡಿ ಅವರು, 'ನಾನು ಮೊದಲೇ ಹೇಳಿದಂತೆ ದುಷ್ಕರ್ಮಿಗಳನ್ನು ಬಂಧಿಸಿದ್ದೇವೆ. ಸಂತೋಷದ ವಿಚಾರವೆಂದರೆ ಘಟನೆ ನಡೆದ ಕೇವಲ 48 ಗಂಟೆಗಳ ಒಳಗೇ ನಮ್ಮ ಪೊಲೀಸರು ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ. ಎಲ್ಲ ಆರೋಪಿಗಳು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ. ಸಾರ್ವಜನಿಕವಾಗಿ ಅಸಭ್ಯ ವರ್ತನೆ ಮತ್ತು ಯುವತಿಯರನ್ನು ಚುಡಾಯಿಸಿದರಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಯುವತಿಯರ ಜೊತೆ ಪುರುಷರು ಇಲ್ಲದೇ ಇದ್ದ ಕಾರಣದಿಂದಲೇ ಯುವಕರು ಇವರ ಹಿಂದೆ ಬಿದ್ದಿದ್ದಾರೆ ಎಂದು ಹೇಳಿದರು.

ಕಳೆದ ಭಾನುವಾರ ರಾತ್ರಿ ಊಟಕ್ಕೆಂದು ಬಂದಿದ್ದ ಐವರು ಮಹಿಳೆಯರು ಎಂಜಿ ರಸ್ತೆಯಲ್ಲಿರುವ ಪ್ರತಿಷ್ಟಿತ ಐಸ್‌ಕ್ರೀಮ್ ಪಾರ್ಲರ್ ಬಳಿ ಕಾರನ್ನು ನಿಲ್ಲಿಸುತ್ತಿದ್ದಂತೆಯೇ ಅವರನ್ನೇ ಹಿಂಬಾಲಿಸಿಕೊಂಡು ಬಂದಿದ್ದ ಯುವಕರ ಗುಂಪು ಅವರನ್ನು ಚುಡಾಯಿಸಿತ್ತು. ಅಲ್ಲದೆ ಗುಂಪಿನಲ್ಲಿದ್ದ ಓರ್ವ ಕಾರಿನ ಬಾಗಿಲನ್ನು ಬಲವಂತವಾಗಿ ತೆರೆಯಲು ಪ್ರಯತ್ನಿಸಿದ್ದನು. ಈ ದಿಢೀರ್ ಘಟನೆಯಿಂದ ಗಾಬರಿಗೊಳಗಾದ ಕಾರಿನಲ್ಲಿದ್ದ ಮಹಿಳೆಯೊಬ್ಬಳು ತಮ್ಮ ಪತಿಗೆ ಫೋನಾಯಿಸಿ ವಿಷಯ ತಿಳಿಸಿದ್ದಾರೆ. ಕಾರಿನ ಬಾಗಿಲು ತೆರೆಯಲು ಪ್ರಯತ್ನಿಸುತ್ತಿದ್ದ ಪುಂಡರು ಫೋನಾಯಿಸುತ್ತಿದ್ದಂತೆಯೇ ಅಲ್ಲಿಂದ ಕಾಲ್ಕಿತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com