ಕಿಸ್ ಆಫ್ ಲವ್ ನಡೆದೇ ನಡೆಯುತ್ತದೆ

ಕಿಸ್ ಆಫ್ ಲವ್ ಪ್ರತಿಭಟನೆ ನಡೆದೇ ನಡೆಯುತ್ತದೆ ಎಂದು ಪೊಲೀಸರಿಗೆ ಸಡ್ಡು ಹೊಡೆದಿದ್ದಾರೆ ಆಯೋಜಕರು...
ಕಿಸ್ ಆಫ್ ಲವ್
ಕಿಸ್ ಆಫ್ ಲವ್

ಬೆಂಗಳೂರು: ಕಿಸ್ ಆಫ್ ಲವ್ ಪ್ರತಿಭಟನೆ ನಡೆದೇ ನಡೆಯುತ್ತದೆ ಎಂದು ಪೊಲೀಸರಿಗೆ ಸಡ್ಡು ಹೊಡೆದಿದ್ದಾರೆ ಆಯೋಜಕರು.

ನೈತಿಕ ಪೊಲೀಸ್‌ಗಿರಿ ವಿರೋಧಿಸುವ ಸಮಾನ ಮನಸ್ಕರು ಆಂದೋಲನದಲ್ಲಿ ಭಾಗವಹಿಸಬಹುದು ಎಂದು ಕಿಸ್ ಆಫ್ ಲವ್ ಬೆಂಗಳೂರು ಆವೃತ್ತಿ ಫೇಸ್‌ಬುಕ್ ಪುಟದಲ್ಲಿ ಅಪ್‌ಡೇಟ್ ಮಾಡಿರುವ ಆಯೋಜಕರು, ಸಾರ್ವಜನಿಕ ಸ್ಥಳದಲ್ಲಿ ಪ್ರೀತಿಯ ಮುತ್ತು ಮತ್ತು ಅಪ್ಪುಗೆ, ಅಶ್ಲೀಲ ಅಥವಾ ಅಸಭ್ಯ ಎಂದು ಯಾವುದೇ ಕೋರ್ಟ್ ಹೇಳಿಲ್ಲ. ಅದು ಅಸಭ್ಯ ಎನ್ನುವ ಕಾರಣದಿಂದ ಪೊಲೀಸ್ ಇಲಾಖೆ ಕಿಸ್ ಆಫ್ ಲವ್  ಆಂದೋಲನಕ್ಕೆ ಅನುಮತಿ ನಿರಾಕರಿಸಿದ್ದಲ್ಲಿ ಅದನ್ನು ಲಿಖಿತ ರೂಪದಲ್ಲಿ ಬರೆದು ಕೊಡಲಿ..! ಎಂದು ಆಗ್ರಹಿಸಿದ್ದಾರೆ.

ಅಪ್‌ಡೇಟ್‌ನಲ್ಲಿರುವ ವಿವರ?: ಹೆಚ್ಚುವರಿ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಅನುಮತಿ ನಿರಾಕರಣೆ ಪತ್ರ ಕೇಳಿದ್ದೇವೆ. ಆದರೆ ನಮಗೆ ಸಿಕ್ಕಿಲ್ಲ . ಮಾಧ್ಯಮಗಳಲ್ಲಿ ಬಂದ ವರದಿ ಹಿನ್ನೆಲೆಯಲ್ಲಿ ನಾವು ಪ್ರತಿಭಟನೆ ಮಾಹಿತಿ, ಕಾರ್ಯಕ್ರಮದ ಸ್ಥಳ, ಸಮಯ, ದಿನಾಂಕ ಮುಂತಾದ ವಿವರ ನೀಡಿದ್ದೇವೆ. ಎಲ್ಲಾ ಮಾಹಿತಿ ನೀಡಿದ್ದರೂ ನೀಡಿಲ್ಲ ಎಂದು ಹೇಳಿರುವುದು ಆದಾರಕ ರಹಿತ.

ಅನುಮತಿ ನಿರಾಕರಿಸಲು ಈ ಕಾರಣಗಳಿರಬಹುದಾ? :
ಆದರೆ ಕಿಸ್ ಆಫ್ ಲವ್ ಹೆಸರು ಅತಿ ರಂಜಿತ ಎನಿಸುತ್ತಿದೆ. ಅದನ್ನು ಬದಲಿಸಿ ಎನ್ನುವ ಉದ್ದೇಶ ಪೊಲೀಸರದ್ದಾಗಿರಬಹುದು. ಆದರೆ ಕಿಸ್ ಆಫ್ ಲವ್ ರಾಷ್ಟ್ರೀಯ ಆಂದೋಲನ. ಈಗಾಗಲೇ ಕೊಚ್ಚಿ, ಮುಂಬೈ ಐಐಟಿ, ಹೈದರಾಬಾದ್, ಕೊಲ್ಕತ್ತಾ, ಪಾಂಡಿಚೇರಿ, ದೆಹಲಿ ಹಾಗೂ ಚೆನ್ನೈನಲ್ಲಿ ನಡೆದಿದೆ. ಹೀಗಾಗಿ ಇದರ ಹೆಸರು ಬದಲಿಸಲು ಆಗುವುದಿಲ್ಲ ಎಂದು ಹೇಳಿದ್ದೇವೆ. ಒಂದು ಸಂಘಟನೆ ಅಥವಾ ಜನರ ಗುಂಪು ಇಡೀ ಪ್ರತಿಭಟನೆಯ ಜವಾಬ್ದಾರಿ ತೆಗೆದುಕೊಳ್ಳುವ ಬದಲು ಯಾರಾದರೂ ಒಬ್ಬರು ತೆಗೆದುಕೊಳ್ಳಲೇಬೇಕು ಎಂದು  ಪೊಲೀಸರು ಹೇಳುತ್ತಾರೆ . ಆದರೆ, ಈ ವಾದ ಒಪ್ಪುವಂತದ್ದಲ್ಲ.

ಕಿಸ್ ಆಫ್ ಲವ್ ಎನ್ನುವುದು ಫೇಸ್‌ಬುಕ್‌ನಲ್ಲಿರುವ ಸಮಾನ ಮನಸ್ಕರು ಹಾಗೂ ಸ್ವಯಂ ಸೇವಕ ಗುಂಪುಗಳಿಂದ ಮಾಡಲಾದ ಆಂದೋಲನ. ಹೀಗಾಗಿ ಯಾವುದೇ ಒಬ್ಬ ವ್ಯಕ್ತಿ ಇಡೀ ಪ್ರತಿಭಟನೆ ಜವಾಬ್ದಾರಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ, ಸಾಮೂಹಿಕವಾಗಿ ಜವಾಬ್ದಾರಿ ತೆಗೆದುಕೊಳ್ಳುತ್ತೇವೆ.

ಕಿಸ್ ಮಾಡುವುದು ಅಶ್ಲೀಲವಲ್ಲ!: ಸಂವಿಧಾನ ಚೌಕಟ್ಟಿನಲ್ಲಿ ಅವಕಾಶ ನೀಡಲಾಗಿರುವ ಮಾರ್ಗ ಬಳಸಿಕೊಂಡು ಅದಕ್ಕೆ ತಕ್ಕಂತೆ ಯಾವ ರೀತಿ ಪ್ರತಿಭಟನೆ ಇರಬೇಕು ಹಾಗೂ ಅದರ ಹೆಸರು ಏನಿರಬೇಕು ಎಂದು ನಿರ್ಧರಿಸಲಾಗುತ್ತದೆ. ನೈತಿಕ ಪೊಲೀಸ್ ಗಿರಿ ವಿರುದ್ಧ ಹೇಗೆ ಪ್ರತಿಭಟನೆ ನಡೆಸಬೇಕು ಎಂಬುದನ್ನು ಬೇರೆಯವರು ಹೇಳಿಕೊಡುವುದು ಬೇಕಿಲ್ಲ. ಕೇವಲ ಹೆಸರು ಹಾಗೂ ಪ್ರತಿಭಟನೆ ಸ್ವರೂಪದ ಆಧಾರದ ಮೇಲೆ ಅನುಮತಿ ನಿರಾಕರಿಸುವುದು ಪ್ರತಿಭಟನೆಯ ಹಕ್ಕನ್ನೇ ಪ್ರಶ್ನಿಸುವಂತಿದೆ.

ನೈತಿಕ ಪೊಲೀಸ್‌ಗಿರಿ ಹಾಗೂ ಸಾಂಸ್ಕೃತಿಕ ಹತ್ತಿಕ್ಕುವಿಕೆ ವಿರುದ್ಧ ಪ್ರತಿಭಟನೆ ಮಾಡಲು ಕಿಸ್ ಮಾಡುವುದನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಈ ರೀತಿ ಪ್ರತಿಭಟನೆ  ಮಾಡುವುದು ಅಶ್ಲೀಲವಲ್ಲ. ಸುಪ್ರೀಂ ಕೋರ್ಟ್ ಹಾಗೂ ದೆಹಲಿ ಹೈಕೋರ್ಟ್ ನೀಡಿರುವ ಆದೇಶಗಳನ್ನು ಗಮನದಲ್ಲಿಟ್ಟುಕೊಂಡು ಮುಂದುವರಿಯುತ್ತಿದ್ದೇವೆ.

ಕೇವಲ ಮುತ್ತುಕೊಡುವುದು ಪ್ರತಿಭಟನೆಯಲ್ಲ!

ನೈತಿಕ ಪೊಲೀಸ್‌ಗಿರಿ ಹೆಸರಿನಲ್ಲಿ ಹಲವು ಗಂಡಂದಿರು, ಹೆಂಡತಿಯರ ಮೇಲೆ ಹಲ್ಲೆ ನಡೆಸಿರುವುದನ್ನು ಕಾಣುತ್ತಿದ್ದೇವೆ. ಯುವ ವೃತ್ತಿಪರರು, ಮಹಿಳೆಯರು ಒಡಹುಟ್ಟಿದವರು ಇಂತಹ ಜನರಿಂದ ಕಿರುಕುಳಕ್ಕೆ ಒಳಗಾಗಿದ್ದಾರೆ. ಹೀಗಾಗಿ ಪ್ರೀತಿ ಮನೋಭಾವ ಇರುವ ಯಾರು ಬೇಕಾದರೂ  ಮುಂಗೆ ಬಂದು ನಮ್ಮವರ ಮೇಲೆ ನಮ್ಮ ಪ್ರೀತಿಯನ್ನು ಸಾರ್ವಜನಿಕ ಸ್ಥಳದಲ್ಲಿ ಕಿಸ್ ಹಾಗೂ ತಬ್ಬಿಕೊಳ್ಳುವ ಮೂಲಕ ತೋರಿಸಿಕೊಳ್ಳಬಹುದು. ಇದು ಕೇವಲ ಸಾರ್ವಜನಿಕ ಸ್ಥಳದಲ್ಲಿ ಕಿಸ್ ಮಾಡುವ ಪ್ರತಿಭಟನೆ ಅಲ್ಲ. ಸಾರ್ವಜನಿಕ ಸ್ಥಳದಲ್ಲಿ ಪ್ರೀತಿ ವ್ಯಕ್ತ ಪಡಿಸುವುದನ್ನು ಸಹಿಸಿಕೊಳ್ಳುವ ಮನೋಭಾವ ಭಾರತೀಯ ಸಮಾಜದಲ್ಲಿ ಮೂಡಿಸುವುದು ನಮ್ಮ ಉದ್ದೇಶ. ನೈತಿಕ ಪೊಲೀಸ್ ಗಿರಿ ಖಂಡಿಸಿ ಒಗ್ಗಟ್ಟು ಪ್ರದರ್ಶಿಸಲು ಉದ್ದೇಶಿಸಿರುವ ಎಲ್ಲರೂ ಆಂದೋಲನದಲ್ಲಿ ಭಾಗವಹಿಸಬಹುದು. ಒಡಹುಟ್ಟಿದವರು, ಪ್ರೇಮಿಗಳು, ಪಾಲಕರೊಂದಿಗೆ ಮಕ್ಕಳು ಬರಲಿ ಎಂದು ಆಯೋಜಕರಲ್ಲಿ ಒಬ್ಬರಾದ ಮೋಹನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಅನುಮತಿ ನಿರಾಕರಿಸಿರುವುದಾಗಿ ಹೇಳಿದ ಬಳಿಕವೂ ಪ್ರತಿಭಟನೆ ನಡೆಸುವುದಾಗಿದ್ದರೆ ನಮ್ಮ ಅನುಮತಿ ಕೇಳುವ ಅಗತ್ಯವೇನಿತ್ತು? ನಾವು ಆಂದೋಲನದ ವಿರುದ್ಧವಲ್ಲ. ಆದರೆ, ಸಾರ್ವಜನಿಕರ ಸ್ಥಳದಲ್ಲಿ ಕಿಸ್ ಮಾಡುವುದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ. ಅವರು ಪ್ರತಿಭಟನೆ ನಡೆಸಿದರೆ ಕಾನೂನಿನ ಉಲ್ಲಂಘನೆ ಆಗುತ್ತದೆ. ನಾವು ಕ್ರಮಕೈಗೊಳ್ಳುತ್ತೇವೆ.

-ಎಂ.ಎನ್.ರೆಡ್ಡಿ , ಪೊಲೀಸ್ ಆಯುಕ್ತ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com