ಪ್ರಗತಿ ಕಾಲೇಜು ರದ್ದು: ಗೌತಮಿ ತಂದೆ ಆಗ್ರಹ

ಪಿಯುಸಿ ವಿದ್ಯಾರ್ಥಿನಿ ಗೌತಮಿ ಹತ್ಯೆ ಮಾಡಿದ್ದ ಆರೋಪಿ ಮಹೇಶ್‍ನನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದ ಪ್ರಗತಿ ಕಾಲೇಜು ಮಾನ್ಯತೆ...
ಗೌತಮಿ
ಗೌತಮಿ

ಬೆಂಗಳೂರು: ಪಿಯುಸಿ ವಿದ್ಯಾರ್ಥಿನಿ ಗೌತಮಿ ಹತ್ಯೆ ಮಾಡಿದ್ದ ಆರೋಪಿ ಮಹೇಶ್‍ನನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದ ಪ್ರಗತಿ ಕಾಲೇಜು ಮಾನ್ಯತೆ ರದ್ದು ಮಾಡಬೇಕೆಂದು ಹಾಗೂ ಪ್ರಕರಣದ ನ್ಯಾಯಯುತ ತನಿಖೆ ಮಾಡುವ ಮೂಲಕ ನ್ಯಾಯ ದೊರಕಿಸಿಕೊಡಬೇಕು ಎಂದು ಗೌತಮಿ ತಂದೆ ರಮೇಶ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಮಲ್ಲೇಶ್ವರದ ಪದವಿ ಪೂರ್ವ ಶಿಕ್ಷಣ ಇಲಾಖೆ ಮುಂಭಾಗ ಸೋಮವಾರ ಗೌತಮಿ ತಂದೆ ರಮೇಶ್ ಪ್ರತಿಭಟನೆ ನಡೆಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, `ಲಕ್ಷಾಂತರ ರುಪಾಯಿ ಶುಲ್ಕ ಪಡೆದು ವಿದ್ಯಾರ್ಥಿಗಳಿಗೆ ಮೂಲಸೌಕರ್ಯ ಮತ್ತು ಭದ್ರತೆ ಒದಗಿಸದೆ ಇರುವ ಪ್ರಗತಿ ಕಾಲೇಜು ಮಾನ್ಯತೆ ರದ್ದು ಮಾಡಬೇಕು. ಇದು ಹೀಗೆಯೇ ಮುಂದುವರೆದಲ್ಲಿ ಮುಂದಿನ ದಿನಗಳಲ್ಲಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತದೆ. ಆದ್ದರಿಂದ ಸರ್ಕಾರ ಕೂಡಲೇ ಕ್ರಮಕೈಗೊಳ್ಳಬೇಕು' ಎಂದು ಆಗ್ರಹಿಸಿದರು.

ಗೌತಮಿ ಕೊಲೆ ನಡೆದಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಆತಂಕ ಮನೆ ಮಾಡಿದೆ. ಈ ನಡುವೆ, ಈಗಾಗಲೇ ಮುಂದಿನ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆಯನ್ನು ಕಾಲೇಜು ಆರಂಭಿಸಿದೆ. ಸರ್ಕಾರ ಈ ವಿಷಯದಲ್ಲಿ ಮೌನವಹಿಸಿದರೆ, ವಿದ್ಯಾರ್ಥಿ ಗಳ ಭವಿಷ್ಯಕ್ಕೆ ತೊಂದರೆಯಾಗುವುದು ಕಟ್ಟಿಟ್ಟ ಬುತ್ತಿ. ಆದ್ದರಿಂದ ಈ
ಕಾಲೇಜಿನ ಮಾನ್ಯತೆ ರದ್ದು ಮಾಡಿ ಅಲ್ಲಿರುವ ವಿದ್ಯಾರ್ಥಿಗಳನ್ನು ಬೇರೆ ಕಾಲೇಜಿಗೆ ವರ್ಗಾವಣೆ ಮಾಡಬೇಕು ಎಂದು ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿದರು.

ಪ್ರತಿಭಟನೆ ನಂತರ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿದ ಗೌತಮಿ ಪೋಷಕರು ಹೆಚ್ಚುವರಿ ಪೊಲೀಸ್ ಆಯುಕ್ತ ಪಿ. ಹರಿಶೇಖರನ್ ಭೇಟಿ ಮಾಡಿ, ತನಿಖೆ ಚುರುಕುಗೊಳಿಸುವಂತೆ ಹಾಗೂ ಆರೋಪಿ ಮಹೇಶ್‍ಗೆ ತುರ್ತು ಶಿಕ್ಷೆಯಾಗುವಂತೆ ವಿಶೇಷ ನ್ಯಾಯಾಲಯ ಮತ್ತು ವಕೀಲರನ್ನು ನೇಮಕ ಮಾಡುವಂತೆ ಮನವಿ ಮಾಡಿದ್ದಾರೆ.

ಹಿನ್ನೆಲೆ: ಮಾ.31 ರಂದು ಕಾಡುಗೋಡಿಯ ಪ್ರಗತಿ ಕಾಲೇಜಿನ ಹಾಸ್ಟೆಲ್‍ನಲ್ಲಿ ಪಾವಗಡ ಮೂಲದ ವಿದ್ಯಾರ್ಥಿನಿ ಗೌತಮಿ ಹಾಗೂ ಈಕೆಯ ಸ್ನೇಹಿತೆ ಸಿರಿಶಾಳ ಮೇಲೆ ಅದೇ ಕಾಲೆಜಿನ ಅಟೆಂಡರ್ ಮೂಲತಃ ಶಿವಮೊಗ್ಗದವನಾದ ಮಹೇಶ್ ಗುಂಡಿನ ದಾಳಿ ನಡೆಸಿದ್ದನು. ಇದರಿಂದ ಗೌತಮಿ ಸ್ಥಳದಲ್ಲೇ ಮೃತಪಟ್ಟರೆ, ಗಂಬಿsರವಾಗಿ ಗಾಯಗೊಂಡಿದ್ದ ಸಿರಿಶಾ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆಗೆ ದ್ರವ ರೂಪದ ಆಹಾರ ನೀಡುವಂತೆ ವೈದ್ಯರು ತಿಳಿಸಿದ್ದಾರೆ ಎಂದು ಸಿರಿಶಾ ತಂದೆ ತಿಳಿಸಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com