ಕೆ.ಆರ್.ಮಾರ್ಕೆಟ್ ಬಂದ್: ವ್ಯಾಪಾರ-ವಹಿವಾಟು ಸ್ಥಗಿತ, ಗ್ರಾಹಕರ ಪರದಾಟ

ಸಿಲಿಕಾನ್ ಸಿಟಿಯ ಕೇಂದ್ರ ಭಾಗವಾಗಿರುವ ಕೃಷ್ಣ ರಾಜೇಂದ್ರ ಮಾರ್ಕೆಟ್ ನಲ್ಲಿ ಅಕ್ರಮವಾಗಿ ನಿರ್ಮಿಸಿರುವ ಅಂಗಡಿಗಳ ತೆರವಿಗೆ ಆಗ್ರಹಿಸಿ ಸ್ಥಳೀಯ ಸಂಘಟನೆಗಳು ಮಾರುಕಟ್ಟೆಯ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆಗಿಳಿದಿವೆ...
ಕೆ.ಆರ್. ಮಾರುಕಟ್ಟೆ
ಕೆ.ಆರ್. ಮಾರುಕಟ್ಟೆ

ಬೆಂಗಳೂರು: ಸಿಲಿಕಾನ್ ಸಿಟಿಯ ಕೇಂದ್ರ ಭಾಗವಾಗಿರುವ ಕೃಷ್ಣ ರಾಜೇಂದ್ರ ಮಾರ್ಕೆಟ್ ನಲ್ಲಿ ಅಕ್ರಮವಾಗಿ ನಿರ್ಮಿಸಿರುವ ಅಂಗಡಿಗಳ ತೆರವಿಗೆ ಆಗ್ರಹಿಸಿ ಸ್ಥಳೀಯ ಸಂಘಟನೆಗಳು ಮಾರ್ಕೆಟ್ ಬಂದ್ ಮಾಡಿದ ಪರಿಣಾಮ ಗ್ರಾಹಕರು ಪರದಾಡುವಂತಾಗಿತ್ತು.

ಇತ್ತೀಚೆಗಷ್ಟೇ ಕೆ.ಆರ್. ಮಾರುಕಟ್ಟೆಯ ನೆಲಮಾಳಿಗೆಯಲ್ಲಿ ಸುಮಾರು 18 ಹೊಸ ಅಂಗಡಿಗಳನ್ನು ನಿರ್ಮಾಣ ಮಾಡಲಾಗಿತ್ತು. ಈ ಹೊಸ ಅಂಗಡಿಗಳ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದ ಹಳೆಯ ಅಂಗಡಿ ಮಾಲೀಕುರ ಅಂಗಡಿಗಳಿಗೆ ಗಾಳಿ ಬೆಳಕಿನ ಸಮಸ್ಯೆ ಉಂಟಾಗಿದೆ. ಅಲ್ಲದೆ, ನಿರ್ಮಾಣಗೊಂಡ ಅಂಗಡಿಗಳು ಅಕ್ರಮವಾಗಿ ನಿರ್ಮಿತಗೊಂಡಿರುವಂತಹವು, ಹೀಗಾಗಿ ಈ ಅಕ್ರಮ ಮಳಿಗೆಗಳನ್ನು ಕೂಡಲೇ ತೆರವುಗೊಳಿಸುವಂತೆ ಆಗ್ರಹಿಸಿದ್ದವು. ಅಲ್ಲದೆ ಬಿಬಿಎಂಪಿಗೂ ಕೂಡ ಈ ಬಗ್ಗೆ ದೂರು ನೀಡಲಾಗಿತ್ತು.

ಈ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಬಿಬಿಎಂಪಿ ಅಧಿಕಾರಿಗಳು ಅಂಗಡಿಗಳ ತೆರವಿಗೆ ಮುಂದಾಗಿದ್ದರಾದರೂ, ಹೊಸಮಳಿಗೆಗಳ ಮಾಲೀಕರ ತೀವ್ರ ವಿರೋಧದಿಂದಾಗಿ ಅದು ಸಾಧ್ಯವಾಗಿರಲಿಲ್ಲ. ತಮ್ಮ ಅಂಗಡಿಗಳು ಅನಧಿಕೃತವಲ್ಲ. ನ್ಯಾಯಾಲಯವೇ ನಮಗೆ ಅನುಮತಿ ನೀಡಿದ್ದು, ಈ ಬಗ್ಗೆ ನಮ್ಮ ಬಳಿ ಬಿಬಿಎಂಪಿ ದಾಖಲೆಗಳು ಕೂಡ ಇವೆ ಎಂದು ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದಿದ್ದರು. ಇನ್ನು ಕೆಲವು ವ್ಯಾಪಾರಸ್ಥರು ಅಧಿಕಾರಿಗಳು ತೆರವು ಕಾರ್ಯಾಚಾರಣೆಯನ್ನು ಕೂಡಲೇ ನಿಲ್ಲಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅಧಿಕಾರಿಗಳಿಗೆ ಬೆದರಿಕೆ ಹಾಕಿದರು.

ನಂತರ ಪರಿಸ್ಥಿತಿಯನ್ನು ತಿಳಿಗೊಳಿಸುವ ಸಲುವಾಗಿ ಬಿಬಿಎಂಪಿ ಅಧಿಕಾರಿಗಳು ತೆರವು ಕಾರ್ಯಾಚರಣೆಯಿಂದ ಹಿಂದೆ ಬರುವಂತಾಯಿತು. ಅಧಿಕಾರಿಗಳ ಈ ಕ್ರಮಕ್ಕೆ ತೀವ್ರ ರೀತಿಯಾಗಿ ಅಸಮಾಧಾನಗೊಂಡ ಮಾರುಕಟ್ಟೆಯ ವ್ಯಾಪಾರಿಗಳು ಇಂದು ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿದ್ದು ಬಂದ್ ಆಚರಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com