ಜೋಶಿಗೆ ಕಾರ್ಯಕಾರಿಣಿ ತಂದು ಕೊಟ್ಟ ಜೋಶ್!

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯನ್ನು ಬೆಂಗಳೂರಿನಲ್ಲಿ ಯಶಸ್ವಿಯಾಗಿ ಸಂಘಟಿಸುವ ಮೂಲಕ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಯಶಸ್ವಿ ನಾಯಕರಾಗಿ ಹೊರಹೊಮ್ಮಿದ್ದಾರೆ...
ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ
ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯನ್ನು ಬೆಂಗಳೂರಿನಲ್ಲಿ ಯಶಸ್ವಿಯಾಗಿ ಸಂಘಟಿಸುವ ಮೂಲಕ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಯಶಸ್ವಿ ನಾಯಕರಾಗಿ ಹೊರಹೊಮ್ಮಿದ್ದಾರೆ.

ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ `ಹುಡುಕಿ ನೋಡಿದರೂ ಒಂದೇ ಒಂದು ದೂರು ಹೇಳುವಂತಹ ಸಂಗತಿಯಿಲ್ಲದಂತೆ ಕಾರ್ಯಕ್ರಮ ಆಯೋಜಿಸಿದ್ದೀರಿ' ಎಂದು ಶ್ಲಾಘಿಸಿದ್ದಾರೆ. ಪ್ರಹ್ಲಾದ್ ಜೋಶಿ ಅವರನ್ನು ಬಿಜೆಪಿಯಲ್ಲೇ ಕೆಲವರು ನಾಯಕರೆಂದೇ ಪರಿಗಣಿಸಿರಲಿಲ್ಲ. ಇನ್ನು ಕೆಲವರು ಅವರು ಕೆಲವು ನಾಯಕರ ಕೈಗೊಂಬೆ ಎಂದು ಭಾವಿಸಿದ್ದರು. ಒಂದು ಬಣದ ನಾಯಕರ ಕೈಗೊಂಬೆಯಾಗಿರುವ ಅನುಮಾನದ ಕಾರಣಕ್ಕೆ ಇನ್ನೊಂದು ಬಣದವರು ಅವರನ್ನು ಅದೇ ದೃಷ್ಟಿಯಿಂದ ದೂರದಿಂದಲೇ ನೋಡುತ್ತಿದ್ದರು. ಆದರೆ, ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯ ಆಯೋಜನೆ, ನಿರ್ವಹಿಸಿದ ರೀತಿಯಿಂದ ಪ್ರಹ್ಲಾದ್ ಜೋಶಿ ಅವರ ನಾಯಕತ್ವದ ಬಗ್ಗೆ ಇದ್ದ ಎಲ್ಲ ಅನುಮಾನವೂ ತೆರವಾಗಿದೆ.

ಜೋಶಿ ಅವರ ನೇತೃತ್ವದಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ನಿರ್ವಹಿಸಿದ್ದ ರೀತಿಗೆ ರಾಷ್ಟ್ರಮಟ್ಟದ ನಾಯಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಎರಡು ದಿನಗಳ ಕಾರ್ಯಕಾರಿಣಿ, ಒಂದು ದಿನದ ಪದಾಧಿಕಾರಿಗಳ ಸಭೆ, ಪ್ರಧಾನಿ ಅವರ ಬಹಿರಂಗ ಸಭೆ ಸೇರಿದಂತೆ ಮಾಧ್ಯಮಗಳಿಗೆ ಮಾಹಿತಿಯನ್ನು ನೀಡುವ ಬಗ್ಗೆ ನಿರ್ವಹಿಸಿದ ಪ್ರಕ್ರಿಯೆಗಳು ಎಲ್ಲರ ಪ್ರಶಂಸೆಗೂ ಪಾತ್ರವಾಗಿದೆ. ಪ್ರಧಾನಿ ಹಾಗೂ ಅಧ್ಯಕ್ಷ ಅಮಿತ್ ಶಾ ಈ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.

ವಿಶ್ವಾಸ ಮೂಡಿಸಿದ್ದ ಜೋಶಿ

ರಾಷ್ಟ್ರೀಯ ಕಾರ್ಯಕಾರಿಣಿಯನ್ನು ಬೆಂಗಳೂರಿನಲ್ಲಿ ನಡೆಸಬೇಕು ಎಂಬ ಬಗ್ಗೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಿರ್ಧರಿಸಿದಾಗ ಅದಕ್ಕೆ ಹಿಂದುಮುಂದೂ ನೋಡದೆ ರಾಜ್ಯ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ನಿಂತ ಹೆಜ್ಜೆಯಲ್ಲಿ ಒಪ್ಪಿಕೊಂಡಿದ್ದರು. ಬೇರೆ ರಾಜ್ಯಗಳು ತಾವು ಆತಿಥ್ಯ ವಹಿಸುತ್ತೇವೆ ಎಂದಾಗ, ರಾಜ್ಯದ ಆತಿಥ್ಯವನ್ನು ಪ್ರತಿಪಾದಿಸಿ ಅದನ್ನು ನಿರ್ವಹಿಸುವ ಸೂಕ್ತ ಭರವಸೆಯನ್ನು ಪ್ರಹ್ಲಾದ್ ಜೋಶಿ ಅಂದೇ ನೀಡಿದ್ದರು. ಅದರಂತೆಯೇ ಅದರ ನಿರ್ವಹಣೆ ಯಶಸ್ಸ ಸಾಧಿಸಿ ತೋರಿಸಿದ್ದಾರೆ.

ಬೆಂಗಳೂರಿನಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಎಂದು ನಿರ್ಧಾರವಾದ ಮೇಲೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ನೇರವಾಗಿ ಹಾಗೂ ಏಕ ಸಂಪರ್ಕವಾಗಿರಿಸಿಕೊಂಡಿದ್ದು ಪ್ರಹ್ಲಾದ್ ಜೋಶಿ ಅವರನ್ನು ಮಾತ್ರ. ಯಾವುದು ಯಾವ ಮಟ್ಟದಲ್ಲಿ ನಿರ್ವಹಣೆ ಆಗಬೇಕು? ಯಾವ ರೀತಿ ಆಗಬೇಕು? ಎಂಬ ಸಂದೇಶ ಸ್ಪಷ್ಟವಾಗಿಯೇ ರವಾನೆಯಾಗಿತ್ತು. ಇದನ್ನು ಅಕ್ಷರಶಃ ಪಾಲಿಸಿದ್ದ ಪ್ರಹ್ಲಾದ್ ಜೋಶಿ, ನಿರೀಕ್ಷೆಗೂ ಮೀರಿ ಎಲ್ಲವನ್ನೂ ನಿರ್ವಹಿಸಿದ್ದಾರೆ.

ರಾಜ್ಯದಲ್ಲಿ ಪಕ್ಷದ ವರ್ಚಸ್ಸು ಹಿಗ್ಗಿಸಿಕೊಳ್ಳುವ ರೀತಿಯಲ್ಲಿ ಅತ್ಯುತ್ತಮ ಕಾರ್ಯಗಳನ್ನೇ ಮಾಡಿದ್ದಾರೆ. ಒಂದು ಹಂತದಲ್ಲಿ ಪ್ರಹ್ಲಾದ್ ಜೋಶಿ ಅವರು ನಾಮಾಕಾವಸ್ತೆ ಮಾತ್ರ  ಅಧ್ಯಕ್ಷರಾಗಿದ್ದಾರೆ ಎಂದು ಪಕ್ಷದಲ್ಲೇ ಗುಸುಗುಸು ಇತ್ತು. ಅವರು ರಾಜ್ಯದಲ್ಲಿ ಪಕ್ಷವನ್ನು ಮುನ್ನುಗ್ಗಿಸಿಕೊಂಡು ಹೋಗವ ನಾಯಕತ್ವ ಹೊಂದಿಲ್ಲ. ಕೆಲವು ನಾಯಕರ ಕೈಗೊಂಬೆಯಾಗಿದ್ದಾರೆ. ಅವರ ಮಾತಿನಂತೆಯೇ ನಡೆದುಕೊಳ್ಳುತ್ತಾರೆ ಎಂದು ಪಕ್ಷದಲ್ಲೇ ಹಲವು ನಾಯಕರು ಅವರಿಂದ ಸಾಕಷ್ಟು ಅಂತರವನ್ನೇ ಸಾಧಿಸಿದ್ದರು. ಆದರೆ, ಇವ್ಯಾವ ವಿಷಯಗಳು ಅಥವಾ ಸಂಗತಿಗಳನ್ನು ಪ್ರಹ್ಲಾದ್ ಜೋಶಿ ಅವರು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಅವರು ಪಕ್ಷದ ಕಾರ್ಯದಲ್ಲಿ `ನಿಷ್ಠಾವಂತ ಕಾರ್ಯಕರ್ತ'ನಂತೆ ಮಾತ್ರ ಕಾರ್ಯನಿರ್ವಹಿಸಿದ್ದರು. ಅದರಲ್ಲೂ ಯಾವಾಗ ರಾಷ್ಟ್ರೀಯ ಅಧ್ಯಕ್ಷರಿಂದ ಕಾರ್ಯಕಾರಿಣಿಯ ಆದೇಶ ಬಂತೋ ಸಾಕಷ್ಟು ಕಾರ್ಯಪ್ರವೃತ್ತರಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com