
ಬೆಂಗಳೂರು: ನೀವು ಆಟೋದಲ್ಲಿ ಸಂಚರಿಸುವವರಾಗಿದ್ದರೆ ಎಷ್ಟು ದೂರ ಸಂಚರಿಸುತ್ತೀರಿ? ಅದಕ್ಕೆ ತಗುಲುವ ವೆಚ್ಚ ಎಷ್ಟು? ಚಾಲಕರು ಗೋಲ್ ಮಾಲ್ ಮಾಡಿ ಹೆಚ್ಚು ಹಣ ವಸೂಲಿ ಮಾಡುತ್ತಾರೆಯೇ? ಹಾಗಿದ್ದರೆ ತಲೆಕೆಡಿಸಿಕೊಳ್ಳಬೇಕಿಲ್ಲ. ಅದಕ್ಕಾಗಿ 'ಅತ್ಯಾಧುನಿಕ ತಂತ್ರಜ್ಞಾನದ ಪೂರ್ವದರ ನಿಗದಿ'(ಪ್ರೀ-ಪಿಕ್ಸೆಡ್ ಆಟೋ ಸ್ಟ್ಯಾಂಡ್) ಆಟೋ ನಿಲ್ದಾಣ ನಗರದ ಎಂ.ಜಿ.ರಸ್ತೆ ಹಾಗೂ ಗರುಡಾಮಾಲ್ ಬಳಿ ಆರಂಭವಾಗಿವೆ.
ಗುರುವಾರ ಎಂ.ಜಿ.ರಸ್ತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಚಾರ ಮತ್ತು ಭದ್ರತೆ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಬಿ. ದಯಾನಂದ್ ಚಾಲನೆ ನೀಡಿದರು. ನಂತರ ಮಾತನಾಡಿ, ಮೊದಲನೆಯದಾಗಿ ನಗರದ 15 ಕಡೆ ಪೂರ್ವ ದರ ನಿಗದಿ ಆಟೋ ನಿಲ್ದಾಣಗಳನ್ನು ಆರಂಭಿಸಿ ಇತರೆಡೆ ಆರಂಭಿಸಿಸಲು ಕ್ರಮಕೈಗೊಳ್ಳಲಾಗುವುದು ಎಂದರು. ಪೂರ್ವ ವಿಭಾಗದ ಡಿಸಿಪಿ ಬಾಬು ರಾಜೇಂದ್ರ ಪ್ರಸಾದ್, ಆಟೋ ಚಾಲಕರು ಇದ್ದರು.
ನಗರ ಸಂಚಾರ ಪೊಲೀಸರು ಗುರುವಾರ ಎಂ.ಜಿ.ರಸ್ತೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ಪ್ರೀ-ಪಿಕ್ಸೆಡ್ ಆಟೋ ಸ್ಟ್ಯಾಂಡ್‍ಗೆ ಚಾಲನೆ ನೀಡಿದರು. ಡಿಸಿಪಿ ಬಾಬು ರಾಜೇಂದ್ರ ಪ್ರಸಾದ್ ಭಾಗವಹಿಸಿದ್ದರು.
ಪ್ರಯೋಜನವೇನು?
* ಆಟೋ ಚಾಲಕರ ಮತ್ತು ಪ್ರಯಾಣಿಕರ ನಡುವೆ ಉಂಟಾಗುವ ಅನಗತ್ಯ ಜಗಳ ಗೊಂದಲ ನಿವಾರಣೆ
* ಹೆಚ್ಚು ದರ ಕೇಳೋ ಹಾಗಿಲ್ಲ
* ದಾರಿ ತಪ್ಪಿಸೋಂಗಿಲ್ಲ, ಮಾರ್ಗ ಬದಲಿಸೋ ಹಾಗಿಲ್ಲ
* ಜನಸ್ನೇಹಿ ಈ ನೂತನ ವ್ಯವಸ್ಥೆ
* ಸಾಧಕ ಬಾಧಕ ಆಧರಿಸಿ ನಗರದ ಉಳಿದೆಡೆ ಇಂಥ ನಿಲ್ದಾಣಗಳ ಸ್ಥಾಪನೆ
* ಆಟೋ ಟ್ರ್ಯಾಕ್ ಆಗೋದರಿಂದ ಮಹಿಳಾ ಪ್ರಯಾಣಿಕರಿಗಂತೂ ಸುರಕ್ಷತೆ
ಹೇಗೆ ಕಾರ್ಯನಿರ್ವಹಿಸುತ್ತೆ?
* ಆಟೋರಿಕ್ಷ ನಿಲ್ದಾಣದಿಂದ ಪ್ರಯಾಣಿಕರು ತಲುಪುವ ಅತ್ಯಂತ ಕಡಿಮೆ ಅಂತರದ ಮಾರ್ಗ, ತಗುಲುವ ದರ ಇನ್ನಿತರ ಮಾಹಿತಿಯನ್ನು ಗೂಗಲ್ ಮೂಲಕ ಸಿಗಲಿದೆ.
* ಇಲ್ಲಿಂದ ಹೊರಡುವ ಎಲ್ಲಾ ಆಟೋಗಳ ಟ್ರಿಪ್ ಬಗ್ಗೆ ಮಾಹಿತಿ ಸೇರಿ ಇತರ ವಿವರಗಳು ಕೇಂದ್ರೀಕೃತ ನಿಯಂತ್ರಣ ಕೋಣೆಯ ಸರ್ವರ್‍ನಲ್ಲಿ ದಾಖಲಾಗುತ್ತವೆ.
* ಇಲ್ಲಿನ ಸಿಬ್ಬಂದಿ ಹ್ಯಾಂಡ್ ಹೆಲ್ಡ್ ಡಿವೈಸ್‍ನಿಂದ ಪ್ರಯಾಣಿಕರಿಗೆ ಹಾಗೂ ಆಟೋ ಚಾಲಕರಿಗೆ ಎಸ್‍ಎಂಎಸ್ ಮೂಲಕ ಸಂಚರಿಸುವ ಮಾರ್ಗ ಮಾಹಿತಿ ತಗುಲುವ ದರ ಜೊತೆಗೆ ತಲುಪಿದ ಸ್ಥಳದ ಮಾಹಿತಿಯನ್ನು ರವಾನಿಸುತ್ತಾರೆ.
Advertisement