ಮೇಕೆದಾಟುಲು ಕನ್ನಡ ಪರ ಸಂಘಟನೆಗಳು ಬೈಕೇರಿದರು

ರಾಜ್ಯಸರ್ಕಾರ ಕೂಡಲೇ ಮೇಕೆದಾಟು ಕಾಮಗಾರಿ ಪ್ರಾರಂಭಿಸಬೇಕು ಎಂದು ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರು ಸೋಮವಾರ ಬೈಕ್...
ಕನ್ನಡ ಪರ ಸಂಘಟನೆ ಬೈಕ್ ರ್ಯಾಲಿ
ಕನ್ನಡ ಪರ ಸಂಘಟನೆ ಬೈಕ್ ರ್ಯಾಲಿ

ಬೆಂಗಳೂರು: ರಾಜ್ಯಸರ್ಕಾರ ಕೂಡಲೇ ಮೇಕೆದಾಟು ಕಾಮಗಾರಿ ಪ್ರಾರಂಭಿಸಬೇಕು ಎಂದು ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರು ಸೋಮವಾರ ಬೈಕ್ ರ್ಯಾಲಿ ನಡೆಸಿದರು. ಮೇಕೆದಾಟು ಯೋಜನೆಗೆ ಅಡ್ಡಗಾಲು ಹಾಕುತ್ತಿರುವ ತಮಿಳುನಾಡು ಸರ್ಕಾರದ ಕ್ರಮವನ್ನು ಖಂಡಿಸಿದರು.

ಸೋಮವಾರ ಬೆಳಗ್ಗೆ ಫ್ರೀಡಂ ಪಾರ್ಕ್‍ನಿಂದ ಆರಂಭವಾದ ಬೈಕ್ ರ್ಯಾಲಿಗೆ ಶಾಸಕ ಕೆ.ಎಸ್ .ಪುಟ್ಟಣ್ಣಯ್ಯ ಚಾಲನೆ ನೀಡಿದರು. ರ್ಯಾಲಿ ಮಂಗಳವಾರ ಸಂಜೆ ವೇಳೆಗೆ ಮೇಕೆದಾಟು ತಲುಪಿ, ತಮಿಳುನಾಡು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದೆ.

ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಕೆ.ಎಸ್.ಪುಟ್ಟಣ್ಣಯ್ಯ, ಮೇಕೆದಾಟು ಯೋಜನೆಯಿಂದ ಬಯಲುಸೀಮೆ, ಬೆಂಗಳೂರು ಜನರಿಗೆ ಸಾಕಷ್ಟು ಅನುಕೂಲವಾಗಲಿದೆ. ಇದರಿಂದ ಪ್ರತಿವರ್ಷ 50 ಟಿಎಂಸಿಗೂ ಅಧಿಕ ಪ್ರಮಾಣದ ನೀರನ್ನು ಉಳಿಸಿ, ಬಯಲು ಸೀಮೆಯ ಪ್ರದೇಶಕ್ಕೆ ನೀಡಬಹುದು. ತಮಿಳುನಾಡಿಗೆ ನೀರು ಬಿಡುವ ಉದ್ದೇಶದಿಂದ ಹೇಮಾವತಿ ನದಿಯಿಂದ ಪ್ರತಿವರ್ಷ ಸುಮಾರು 30 ಟಿಎಂಸಿ ನೀರನ್ನು ಕೆಆರ್‍ಎಸ್‍ಗೆ ಬಿಡಲಾಗುತ್ತಿದೆ.

ಮೇಕೆದಾಟು ಯೋಜನೆ ಸಿದ್ದವಾದರೆ ತಮಿಳುನಾಡಿಗೆ ಅಗತ್ಯ ನೀರು ನೀಡುವುದರ ಜತೆಗೆ ಬೆಂಗಳೂರು ಸೇರಿದಂತೆ ರಾಜ್ಯದ ಸಾಕಷ್ಟು ಜಿಲ್ಲೆಗಳ ನೀರಿನ ಬರ ನೀಗಿಸಬಹುದು. ಆದ್ದರಿಂದ ಜನಾನುಕೂಲವಾಗಿರುವ ಈ ಯೋಜನೆಯನ್ನು ಸರ್ಕಾರ ಶೀಘ್ರ ಅನುಷ್ಠಾನಗೊಳಿಸಬೇಕು. ನೀರಿನ ರಾಜಕಾರಣ ನಡೆಸುತ್ತಿರುವ ತಮಿಳುನಾಡಿಗೆ ತಕ್ಕ ಪಾಠ ಕಲಿಸಬೇಕು ಎಂದರು.

ಎಲ್ಲೆಲ್ಲಿ ರ್ಯಾಲಿ?: ಫ್ರೀಡಂ ಪಾರ್ಕ್‍ನಿಂದ ಹೊರಟ ರ್ಯಾಲಿ ಬನಶಂಕರಿ ತಲಘಟ್ಟಪುರ, ಕಗ್ಗಲಿಪುರ, ಹಾರೋಹಳ್ಳಿ, ಕನಕಪುರ ತಲುಪಿ ಅಲ್ಲಿ ತಂಗಲಿದೆ. ಮಂಗಳವಾರ ಬೆಳಗ್ಗೆ ಮತ್ತೆ ಕನಕಪುರದಿಂದ ಬೈಕ್ ರ್ಯಾಲಿ ಆರಂಭಿಸಿ ದೊಡ್ಡ ಆಲಹಳ್ಳಿ, ಉಯ್ಯಂಬಳ್ಳಿ, ಸಂಗಮದ ಮುಖಾಂತರ ಸಂಜೆ ವೇಳೆಗೆ ಮೇಕೆದಾಟು ತಲುಪಲಾಗುತ್ತದೆ ಎಂದು ಸಂಘದ ಅಧ್ಯಕ್ಷ ಸು.ಚಿ.ನೀಲೇಶ್‍ಗೌಡ ತಿಳಿಸಿದರು. ನೂರಾರು ಕಾರ್ಯಕರ್ತರು ಬೈಕ್ ರ್ಯಾಲಿಯಲ್ಲಿ ಭಾಗವಹಿಸಿದ್ದರು. ತಮಿಳುನಾಡು ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com