ಎಲ್ಲರ ಬಾಯಲ್ಲೂ ಗೋಮಾಂಸ!

ಶ್ರೇಷ್ಠ ಮಾನವತಾವಾದಿ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ ಗೋಮಾಂಸ ಭಕ್ಷಣೆ, ಅದರ ಚರ್ಚೆಗೇ ಸೀಮಿತಗೊಂಡದ್ದು ಮಾತ್ರ ವಿಚಿತ್ರ.
ಸಾರ್ವಜನಿಕವಾಗಿ ದಲಿತರಿಂದ ಗೋಮಾಂಸ ಭಕ್ಷಣೆ
ಸಾರ್ವಜನಿಕವಾಗಿ ದಲಿತರಿಂದ ಗೋಮಾಂಸ ಭಕ್ಷಣೆ
Updated on

ಬೆಂಗಳೂರು: ಶ್ರೇಷ್ಠ ಮಾನವತಾವಾದಿ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ ಗೋಮಾಂಸ ಭಕ್ಷಣೆ, ಅದರ ಚರ್ಚೆಗೇ ಸೀಮಿತಗೊಂಡದ್ದು ಮಾತ್ರ ವಿಚಿತ್ರ.

ದೇಶದ ಸಂವಿಧಾನ ಶಿಲ್ಪಿಯ ಜಯಂತಿ ವೇಳೆಯಲ್ಲಿ ಅವರ ಸಿದ್ಧಾಂತ, ವಿಚಾರ ಚರ್ಚೆಯಾಗಬೇಕಿತ್ತು! ಬದಲಾಗಿ ರಾಜಧಾನಿಯ ಪ್ರಮುಖ ಸಮಾರಂಭಗಳಲ್ಲಿ ನಡೆದದ್ದು ಗೋಮಾಂಸದ ಚರ್ಚೆ. ಅಂಬೇಡ್ಕರ್ ಎಂದಿಗೂ ಗೋಮಾಂಸ ತಿನ್ನಿ ಎಂದು ಹೇಳಲೇ ಇಲ್ಲ. ಅಹಿಂಸಾ ಮಾರ್ಗದ ಪ್ರತಿಪಾದನೆಗಾಗಿಯೇ ಅವರು ಬೌದ್ಧ ಧರ್ಮ ತುಳಿದರು. ಅಂತೆಯೇ ಸಂವಿಧಾನದಲ್ಲಿ ಕೂಡ ಪ್ರಾಣಿ ಹಿಂಸೆ ಮಾಡಬಾರದು ಎಂದು ಹೇಳಲಾಗಿದೆ.

ಇಂಥ ಸನ್ನಿವೇಶದಲ್ಲಿ ಗೋಮಾಂಸ ಭಕ್ಷಣೆ ದಲಿತರ ಆಹಾರ ಪದ್ಧತಿ, ಇದನ್ನು ಹತ್ತಿಕ್ಕುವ ಸಲುವಾಗಿ ಗೋಹತ್ಯೆ ತಡೆ ಕಾನೂನು ಮಾಡಲಾಗುತ್ತಿದೆ ಎಂಬ ವಾದ ಕೇಳಿ ಬರುತ್ತಿರುವುದು ವಿಪರ್ಯಾಸ ಎಂಬುದು ದಲಿತ ಮುಖಂಡರ ಅಭಿಪ್ರಾಯ.

ಅಜ್ಞಾನ ಪೀಠಿ: ಗಿರೀಶ್ ಕಾರ್ನಾಡ್, ಅಂಬೇಡ್ಕರ್ ಜಯಂತಿ ಹೆಸರಿನಲ್ಲಿ ಪುರಭವನದ ಎದುರು ದನದ ಮಾಂಸ ತಿನ್ನಿಸಿ, `ದಲಿತರು ದನದ ಮಾಂಸ ತಿನ್ನೋರು' ಎಂದು ಸಮಾಜದಲ್ಲಿ ಕೆಟ್ಟದಾಗಿ ಬಿಂಬಿಸಿದ್ದಾರೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ಸಂಘಟನಾ ಕಾರ್ಯದರ್ಶಿ ಚಿ.ನಾ.ರಾಮು ಟೀಕಿಸಿದ್ದಾರೆ. ಹಾಗೆಯೇ ಗಿರೀಶ್ ಕಾರ್ನಾಡ್ `ಅಜ್ಞಾನ ಪೀಠ' ಸಾಹಿತಿಯೆಂದು ವಾಗ್ದಾಳಿ ನಡೆಸಿದ್ದಾರೆ.

ಇದಕ್ಕೆ ದನಿಗೂಡಿಸಿರುವ ಮಾಜಿ ಸಚಿವ ನಾರಾಯಣಸ್ವಾಮಿ, `ತುಳಿತಕ್ಕೊಳಗಾದ ಸಮಾಜಕ್ಕೆ ಮಾಂಸ ಉಣ್ಣಿಸುವ ಮೂಲಕ ಆ ಸಮುದಾಯ ಸಮಾಜದಲ್ಲಿ ಶೋಷಿತರಾಗಿ ಇರಬೇಕೆಂದು ಬಯಸುವವರಿದ್ದಾರೆ' ಎಂದು ಗಿರೀಶ್ ಕಾರ್ನಾಡ್ ಕ್ರಮವನ್ನು ಖಂಡಿಸಿದರು. ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಈ ಇಬ್ಬರೂ ಕಾರ್ನಾಡ್ ಮತ್ತು ಮರುಳಸಿದ್ದಪ್ಪ ವಿರುದ್ಧ ಹರಿಹಾಯ್ದರು.

ತಿಂದು ಆಚರಣೆ :
ಈ ಹೇಳಿಕೆಗಳಿಗೆ ವ್ಯತಿರಿಕ್ತವೆಂಬಂತೆ, ಕರ್ನಾಟಕ ದಲಿತ ಸಮಿತಿ ಸಂಘರ್ಷ ಸಮಿತಿ ಸದಸ್ಯರು, ಫ್ರೀಡಂ ಪಾರ್ಕ್‍ನಲ್ಲಿ ಗೋಮಾಂಸ ತಿನ್ನುವ ಮೂಲಕ ಅಂಬೇಡ್ಕರ್ ಜಯಂತಿಯನ್ನು ಮಂಗಳವಾರ ಆಚರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜ್ಯಾಧ್ಯಕ್ಷ ಎನ್. ಮೂರ್ತಿ, ಆಹಾರ ಪದ್ಧತಿ ಅವರವರಿಗೆ ಬಿಟ್ಟದ್ದು. ಅದಕ್ಕೆ ಯಾವುದೇ ಕಾರಣಕ್ಕೂ ಕಡಿವಾಣ ಹಾಕಬಾರದು. ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಗೋಮಾಂಸ ನಿಷೇಧ ಕಾಯ್ದೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ಗೋಮಾಂಸದ ಬಿರಿಯಾನಿ ತಿಂದು ಜಯಂತಿ ಆಚರಿಸುವುದರಲ್ಲಿ ವಿಶೇಷ ಏನೂ ಇಲ್ಲ. ಇದು ಕೆಲವರ ಆಹಾರ ಪದ್ಧತಿ. ಹಾಗಾಗಿ ದಲಿತರು ಅದನ್ನು ಹಬ್ಬವನ್ನಾಗಿ ಆಚರಿಸುತ್ತಾರೆ. ಆದರೆ,
ಕೇಂದ್ರ ಸರ್ಕಾರ ಗೋವಿನ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದು, ಇದು ಸರಿಯಲ್ಲ. ಕೇಂದ್ರಸರ್ಕಾರ ಗೋಹತ್ಯೆ ನಿಷೇಧ ಮಾಡುವ ಮೂಲಕ ರಾಜಕಾರಣ ಮಾಡಲು ಮುಂದಾಗಿರುವುದು ಖಂಡನೀಯ. ಇದನ್ನು ಸಂಘ ವಿರೋಧಿಸುತ್ತದೆ ಎಂದರು.

ಮಹಾರಾಷ್ಟ್ರಕ್ಕೆ ರಾಜ್ಯದ ಗೋಮಾಂಸ:
ಈ ಬೆಳವಣಿಗೆಗಳ ನಡುವೆಯೇ, ರಾಜ್ಯದ ಕಲಬುರಗಿ ಮತ್ತು ಬೀದರ್ ನಿಂದ ಮಹಾರಾಷ್ಟ್ರಕ್ಕೆ ಗೋಮಾಂಸ ಸಾಗಾಟವಾಗುತ್ತಿರುವುದು ಬೆಳಕಿಗೆ ಬಂದಿದೆ. ಆ ರಾಜ್ಯದಲ್ಲಿ ಗೋಹತ್ಯೆಗೆ ನಿಷೇಧ ಹೇರಲಾಗಿದ್ದು, ಇಲ್ಲಿನಿಂದ ತುಂಬಿಸಿಕೊಂಡು ಹೋಗಲಾಗುತ್ತಿದೆ. ಕಲಬುರಗಿಯಲ್ಲಿ ಭಾರಿ ಕಸಾಯಿಖಾನೆಗಳೇ ಇದ್ದು, ಇಲ್ಲಿ ಇದೀಗ ಭರ್ಜರಿ ಬೇಡಿಕೆ ಸೃಷ್ಟಿಯಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com