
ಬೆಂಗಳೂರು: ಬಿಬಿಎಂಪಿ ಚುನಾವಣೆಯನ್ನು ಮುಂದೂಡಲು ಬಿಬಿಎಂಪಿ ವಿಭಜನೆ ವಿಚಾರ ತೆಗೆದುಕೊಂಡಿರುವ ಸರ್ಕಾರದ ನಿರ್ಧಾರ ಮೂರ್ಖತನದ ಪರಮಾವಧಿ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಟೀಕಿಸಿದರು.
ಬಿಜೆಪಿ ಕೋರ್ ಕಮಿಟಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಬಿಬಿಎಂಪಿ ವಿಭಜಿಸುವ ವಿಚಾರದಲ್ಲಿ ಯಾವುದೇ ಸೂಕ್ತ ಕಾರಣಗಳಿಲ್ಲ. ಸದ್ಯ ಸರ್ಕಾರ ಬಳಿ ಇರುವ ಮಧ್ಯಂತರ ವರದಿ ಯನ್ನಾದರೂ ಬಹಿರಂಗಪಡಿಸಬೇಕು. ಅದು ಸಾರ್ವಜನಿಕವಾಗಿ ಚರ್ಚೆಯಾಗಬೇಕು. ಇನ್ನೊಂದೆಡೆ ಬಿಬಿಎಂಪಿಯನ್ನು ವಿಭಜಿಸಿ ಎಂದು ಕೋರಿಲ್ಲ. ಆದರೂ ಸರ್ಕಾರಕ್ಕೆ ಅದೇಕೆ ಆತುರ ಎಂದು ತಿಳಿಯುತ್ತಿಲ್ಲ' ಎಂದು ಟೀಕಿಸಿದರು.
ಚುನಾವಣೆ ಎದುರಿಸುವ ಭಯದಿಂದ ಸರ್ಕಾರವು ಬಿಬಿಎಂಪಿ ವಿಭಜಿಸುವ ಕಾರಣವೊಡ್ಡಿ ವಿಶೇಷ ಅಧಿವೇಶನ ಕರೆದಿದೆ. ನ್ಯಾಯಾಲಯ ಸಹ ಬಿಬಿಎಂಪಿಗೆ ಚುನಾವಣೆ ನಡೆಸುವಂತೆ ಸ್ಪಷ್ಟ ನಿರ್ದೇಶನ ನೀಡಿದೆ, ತಡೆಯಾಜ್ಞೆ ಸಹ ನೀಡಿಲ್ಲ. ಹೀಗಿರುವಾಗ ಸರ್ಕಾರ ಮಾತ್ರ ಮೊಂಡುತನ ಪ್ರದರ್ಶಿಸುತ್ತಿದೆ. ಇದು ಸರ್ಕಾರದ ಎಡಬಿಡಂಗಿತನ ಎಂದರೂ ತಪ್ಪಿಲ್ಲ ಎಂದರು. ಮೇಲ್ಮನೆ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಮಾತನಾಡಿ, `ಜಾತಿ ಸಮೀಕ್ಷೆಗೆ ಹೊರಟ ಸರ್ಕಾರದ ನಿರ್ಧಾರವನ್ನು ಬಿಜೆಪಿ ತುಂಬ ಮನಸ್ಸಿನಿಂದ ಸ್ವಾಗತಿಸುತ್ತದೆ, ಆದರೆ, ತರಾತುರಿಯಲ್ಲಿ ನಡೆಯು ತ್ತಿರುವ ಈ ಸಮೀಕ್ಷೆಯಿಂದ ಯಾವುದೇ ಪ್ರಯೋಜನವಿಲ್ಲ, ಸರ್ಕಾರ ನಿರೀಕ್ಷಿಸಿದ ಫಲಿತಾಂಶವೂ ಸಿಗುವುದಿಲ್ಲ'ಎಂದರು.
ಸಮೀಕ್ಷೆ ಕುರಿತು ಕಾಂಗ್ರೆಸ್ ಶಾಸಕರು, ಮುಖಂಡರೇ ಟೀಕಿಸಿದ್ದರು. ಸಮೀಕ್ಷೆ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆಯಾಗಬೇಕಾಗಿತ್ತು. ಆದರೆ, ತರಾತುರಿಯಲ್ಲಿ ಸಮೀಕ್ಷೆ ಮಾಡಲಾಗುತ್ತಿದೆ. ಇದನ್ನು ಟೀಕಿಸಿದರೆ, ಸಿಎಂ ಸಮೀಕ್ಷೆ ವಿರೋಧಿಗಳು ಎಂದು ಹಣೆಪಟ್ಟಿಕಟ್ಟುತ್ತಿದ್ದಾರೆ ಎಂದು ಟೀಕಿಸಿದ ಅವರು, ನನ್ನ ಅವಧಿಯಲ್ಲಿ ಸಮೀಕ್ಷೆಯಾಯಿತು ಎಂಬ ಹೆಗ್ಗಳಿಕಾಗಿ ಮಾತ್ರ ತರಾತುರಿಯಲ್ಲಿ ಸಮೀಕ್ಷೆ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.
Advertisement