ಚಪ್ಪಲಿಯಲ್ಲಿ ಹೊಂಚು ಹಾಕಿದ್ದ ಜವರಾಯ!

ಮಗುವಿನ ಕಾಲಿನಿಂದ ಜಾರಿ ಹಳಿ ಮೇಲೆ ಬಿದ್ದಿದ್ದ ಚಪ್ಪಲಿ ಎತ್ತಿಕೊಳ್ಳಲು ಹೋಗಿ ಒಂದೂವರೆ ವರ್ಷದ ಮಗುವಿನೊಂದಿಗೆ ಮಹಿಳೆಯೊಬ್ಬರು ಪ್ರಾಣ ಕಳೆದಕೊಂಡಿರುವ ದಾರುಣ ಘಟನೆ ಸಾದರಹಳ್ಳಿ ಸಮೀಪದ ಹೂಡಿ ಗೇಟ್ ನಲ್ಲಿ ಸೋಮವಾರ ನಡೆದಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮಗುವಿನ ಕಾಲಿನಿಂದ ಜಾರಿ ಹಳಿ ಮೇಲೆ ಬಿದ್ದಿದ್ದ ಚಪ್ಪಲಿ ಎತ್ತಿಕೊಳ್ಳಲು ಹೋಗಿ ಒಂದೂವರೆ ವರ್ಷದ ಮಗುವಿನೊಂದಿಗೆ ಮಹಿಳೆಯೊಬ್ಬರು ಪ್ರಾಣ ಕಳೆದಕೊಂಡಿರುವ ದಾರುಣ ಘಟನೆ ಸಾದರಹಳ್ಳಿ ಸಮೀಪದ ಹೂಡಿ ಗೇಟ್ ನಲ್ಲಿ ಸೋಮವಾರ ನಡೆದಿದೆ.

ಬಿಹಾರ ಮೂಲದ ಖುಷ್ಬು ದೇವಿ(28) ಹಾಗೂ ಇವರ ಮಗು ಸುನಿತಾ ಮೃತರು. ಹೂಡಿ ಸಮೀಪದ ಸಾದರಮಂಗಲದಲ್ಲಿ ಶೆಟ್ಟಿ ಬಡಾವಣೆಯಲ್ಲಿ ಬಿಹಾರದಿಂದ ನಗರಕ್ಕೆ ಕೂರಿ ಅರಸಿ ಬಂದಿರುವ ಸಾವಿರಾರು ಕಾರ್ಮಿಕರು ವಾಸವಿದ್ದಾರೆ. ಕಟ್ಟಡ ನಿರ್ಮಾಣದಲ್ಲಿ ತೊಡಗಿದ್ದ ಅಮರ್‍ದೀಪ್ ಪಾಂಡೆ, ಪತ್ನಿ ಖುಷ್ಬು ಹಾಗೂ ಮೂವರು ಮಕ್ಕಳೊಂದಿಗೆ ಅದೇ ಪ್ರದೇಶದಲ್ಲಿ ವಾಸವಿದ್ದರು. ಬಿಹಾರದಲ್ಲಿ ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮವಿದ್ದ ಕಾರಣ ಅದರಲ್ಲಿ ಭಾಗವಹಿಸಲು ಬಿಹಾರಕ್ಕೆ ತೆರಳಲು ದಂಪತಿ ಮಕ್ಕಳೊಂದಿಗೆ ಸೋಮವಾರ ಬೆಳಗ್ಗೆ 5 ಗಂಟೆ ಸುಮಾರಿಗೆ ನಗರ ರೈಲು ನಿಲ್ದಾಣಕ್ಕೆ ಹೋಗುತ್ತಿದ್ದರು.

ಹೂಡಿ ಗೇಟ್ ಬಳಿ ತೆರಳುತ್ತಿದ್ದಾಗ ರೈಲು ಬರುತ್ತಿರುವ ಮುನ್ಸೂಚನೆ ಹಿನ್ನೆಲೆಯಲ್ಲಿ ಅಲ್ಲಿನ ಸಿಬ್ಬಂದಿ ಗೇಟ್ ಹಾಕಿದ್ದರು. ಕೆಲವೇ ಸೆಕೆಂಡುಗಳಲ್ಲಿ ರೈಲು ಬರುವುದಿತ್ತು. ಆದರೆ, ರೈಲು ಹೋಗುವುದಕ್ಕೆ ಕಾಯುವ ಬದಲು ಪಾಂಡೆ, ಇಬ್ಬರು ಮಕ್ಕಳೊಂದಿಗೆ ಕಬ್ಬಿಣದ ತಡೆಗೋಡೆ ದಾಟಿಕೊಂಡು ಹರಸಾಹಸ ಪಟ್ಟು ಹಳಿ ದಾಟಿದರು. ಆತನ ಹಿಂದೆಯೇ ಪತ್ನಿ ಖುಷ್ಬು, ಕೊಂಕುಳಲ್ಲಿ ಒಂದುವರೆ ವರ್ಷದ ಮಗುವನ್ನು ಎತ್ತಿಕೊಂಡು ಅವಸರದಲ್ಲಿ ಹಳಿ ದಾಟಿದಳು. ಈ ವೇಳೆ ಮಗು ಸುನಿತಾ ಕಾಲಿನಲ್ಲಿದ್ದ ಚಪ್ಪಲಿ ಹಳಿ ಮೇಲೆ ಬಿದ್ದಿತ್ತು.  ಮುಂದೆ ಹೋಗಿದ್ದ ಖುಷ್ಟು ವಾಪಸ್ ಚಪ್ಪಲಿ ಎತ್ತಿಕೊಳ್ಳಲು ಬಂದಿದ್ದಾರೆ. ಆದರೆ, ಅದೇ ಸಮಯಕ್ಕೆ ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದಿದೆ. ಪರಿಣಾಮ ತಾಯಿ ಮಗು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ರೈಲು ಬರುತ್ತಿರುವುದರ ಕಡೆ ಲಕ್ಷ್ಯ ತೋರದೆ ಆಕೆ, ಕೂಡಲೇ ಹಳಿಯ ಮೇಲೆ ಬಿದ್ದ ಚಪ್ಪಲಿ ಎತ್ತಿಕೊಳ್ಳಲು ಮುಂದಾಗಿದ್ದಾರೆ. ಅಷ್ಟರಲ್ಲಿ ರೈ ಸಮೀಪಿಸಿದೆ. ಇದನ್ನು ಗಮನಿಸಿದ ಪಾಂಡೆ, ರೈಲು ಬರುತ್ತಿರುವುದಾಗಿ ಪತ್ನಿಗೆ ಕೂಗಿ ಹೇಳಿದರೂ ರೈಲಿನ ಶಬ್ಧಕ್ಕೆ ಅವರ ಕೂಗು ಕೇಳಿಸಿಲ್ಲ. ಅತ್ತ ಪಾಂಡೆ, ನೋಡು ನೋಡುತ್ತಿದ್ದಂತೆ ಕ್ಷಣಾರ್ಧದಲ್ಲಿ ಅವರ ಎದುರಿನಲ್ಲೇ ತಾಯಿ-ಮಗಳು ರೈಲಿಗೆ ಸಿಲುಕಿ ಕೊನೆಯುಸಿರೆಳೆದಿದ್ದಾರೆ.

ರೈಲ್ವೆ ಗೇಟ್ ಹಾಕಿದ್ದರೂ ಅದನ್ನು ಲೆಕ್ಕಿಸದೆ ದಾಟಲು ಯತ್ನಿಸಿದ್ದೆ ದುರಂತಕ್ಕೆ ಕಾರಣವಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಕಂಟೋನ್ಮೆಂಟ್ ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com