
ಬೆಂಗಳೂರು: ಬಿಬಿಎಂಪಿ ಕಸದ ಲಾರಿ ಹರಿದು ವಾಣಿಜ್ಯ ತೆರಿಗೆ ಕಚೇರಿ ಪ್ರಥಮ ದರ್ಜೆ ಸಹಾಯಕಿ ಮೃತಪಟ್ಟಿರುವ ಘಟನೆ ಮಲ್ಲೇಶ್ವರ 4ನೇ ಮುಖ್ಯರಸ್ತೆ 6ನೇ ಕ್ರಾಸ್‍ನಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.
ಮಲ್ಲೇಶ್ವರ ಪೈಪ್ ಲೈನ್ ಪ್ರದೇಶ ನಿವಾಸಿ ಗೀತಾ ರಾಣಿ(50) ಮೃತರು. ಯಶವಂತಪುರದಲ್ಲಿರುವ ವಾಣಿಜ್ಯ ತೆರಿಗೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಗೀತಾ ಅವರು ಬೆಳಗ್ಗೆ ಪತಿ ಶಶಿಭೂಷಣ ಅವರೊಂದಿಗೆ ಕಚೇರಿಗೆ ತೆರಳುತ್ತಿದ್ದರು.
ಪತಿ ವಾಹನ ಚಲಾಯಿಸುತ್ತಿದ್ದು ಗೀತಾ ಹಿಂಬದಿ ಕುಳಿತಿದ್ದರು. ಬೆಳಗ್ಗೆ 9.30ರ ಸುಮಾರಿಗೆ 6ನೇ ಕ್ರಾಸ್‍ನಲ್ಲಿ ತೆರಳುತ್ತಿದ್ದಾಗ ಹಿಂದೆ ಕುಳಿತಿದ್ದ ಗೀತಾ ಅವರು ಆಯ ತಪ್ಪಿ ಕೆಳಗೆ ಬಿದ್ದಿದ್ದಾರೆ. ಅದೇ ವೇಳೆ ಹಿಂದೆ ಬರುತ್ತಿದ್ದ ಬಿಬಿಎಂಪಿ ಲಾರಿ ಮೈ ಮೇಲೆ ಹರಿದಿದ್ದು, ಅವರು ಸ್ಥಳದಲ್ಲೇ ಅಸುನೀಗಿದ್ದಾರೆ.
ಲಾರಿ ಡಿಕ್ಕಿ ಹೊಡೆದು ಗೀತಾ ಅವರು ಕೆಳಗೆ ಬಿದ್ದಾಗ ಲಾರಿ ಹರಿದಿದೆಯೋ ಅಥವಾ ಗೀತಾ ಅವರು ಆಕಸ್ಮಿಕವಾಗಿ ಬಿದ್ದಾಗ ಲಾರಿಹರಿದಿದೆಯೋ ಎನ್ನುವುದು ಖಚಿತಗೊಂಡಿಲ್ಲ. ಈ ಸಂಬಂಧ ತನಿಖೆ ನಡೆಯುತ್ತಿದೆ. ಲಾರಿ ಚಾಲಕ ನಸರಪ್ಪನನ್ನು ಬಂಧಿಸಲಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಮಲ್ಲೇಶ್ವರ ಸಂಚಾರ ಪೊಲೀಸರು ತಿಳಿಸಿದ್ದಾರೆ
Advertisement