4500 ಸೋಲಾರ್ ಪಂಪ್ ಅಳವಡಿಕೆ

ಕಳೆದ ವರ್ಷದಂತೆ ಪ್ರಸಕ್ತ ವರ್ಷ ಕೂಡ ಪರಿಶಿಷ್ಟರ ನೀರಾವರಿ ಜಮೀನಿಗೆ 4500 ಸೋಲಾರ್ ಪಂಪ್ ಸೆಟ್ ಅಳವಡಿಸಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕಳೆದ ವರ್ಷದಂತೆ ಪ್ರಸಕ್ತ ವರ್ಷ ಕೂಡ ಪರಿಶಿಷ್ಟರ ನೀರಾವರಿ ಜಮೀನಿಗೆ 4500 ಸೋಲಾರ್ ಪಂಪ್ ಸೆಟ್ ಅಳವಡಿಸಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.

ಕಳೆದ ವರ್ಷ ತಲಾ ನಾಲ್ಕರಿಂದ ಐದು ಎಕರೆ ಜಮೀನುಳ್ಳ ಪರಿಶಿಷ್ಟ ಜಾತಿಯ ರೈತರಿಗೆ 3900 ಸೋಲಾರ್ ಪಂಪ್‍ಸೆಟ್ ಗಳನ್ನು ಅಳವಡಿಸಲಾಗಿತ್ತು. ಅದೇ ರೀತಿಯಲ್ಲಿ ಈ ವರ್ಷ ಕೂಡ ಈ ಸೌಲಭ್ಯ ನೀಡುತ್ತೇವೆ ಎಂದಿದ್ದಾರೆ. ಉತ್ತರ ಕರ್ನಾಟಕ ಭಾಗದ ಬಾಗಲಕೋಟೆ, ಬೀದರ್, ಕೊಪ್ಪಳ, ಗದಗ, ಧಾರವಾಡ, ಬೆಳವಾಗಿ, ರಾಯಚೂರು ಹಾಗೂ ಬಿಜಾಪುರದಲ್ಲಿ ಅಳವಡಿಸಲಾಗಿರುವ ಸೋಲಾರ್ ಪಂಪ್‍ಸೆಟ್‍ಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಪ್ರತಿಯೊಂದು ಸೋಲಾರ್ ಪಂಪ್‍ಸೆಟ್‍ಗೆ ರು.6 ಲಕ್ಷ ವೆಚ್ಚವಾಗುತ್ತಿದೆ. 5 ಎಚ್‍ಪಿ
ಪಂಪ್ ಅಳವಡಿಸಲಾಗಿದೆ ಎಂದು ಸುದ್ದಿಗಾರರಿಗೆ ಮಂಗಳವಾರ ವಿವರ ನೀಡಿದರು

ದಕ್ಷಿಣ ಕರ್ನಾಟಕದಲ್ಲಿ 1000ದಿಂದ 1200 ಅಡಿವರೆಗೆ ಕೊಳವೆಬಾವಿ ಕೊರೆಯುವುದರಿಂದ ಸೋಲಾರ್ ಪಂಪ್ ಸೆಟ್ ಅಳವಡಿಸಲು ಸಾಧ್ಯವಾಗುತ್ತಿಲ್ಲ. ಆದರೂ, ಈ ವರ್ಷ ಪ್ರಾಯೋಗಿಕವಾಗಿ 10 ಎಚ್‍ಪಿ ಪಂಪ್‍ಸೆಟ್ ಅಳವಡಿಸುವ ಕಾರ್ಯ ಮಾಡಲಾಗುತ್ತದೆ. ಅವುಗಳ ಯಶಸ್ಸಿನ ನಂತರ ಮುಂದಿನ ದಿನಗಳಲ್ಲಿ ಈ ಭಾಗದಲ್ಲೂ ಸೋಲಾರ್‍ಪಂಪ್ ಅಳವಡಿಸಲಾಗುತ್ತದೆ ಎಂದರು.

ಕೆರೆ ಅಭಿವೃದ್ಧಿಗೆ ಯೋಜನೆ: ಪ್ರತಿಯೊಂದು ವಿಧಾನಸಭೆ ಕ್ಷೇತ್ರದಲ್ಲಿ ವರ್ಷಕ್ಕೊಂದು ಕೆರೆ ಅಭಿವೃದ್ಧಿ ಯೋಜನೆ ಈ ವರ್ಷವೂ ಮುಂದುವರಿಸಲಾಗುತ್ತದೆ. ಕಳೆದ ವರ್ಷ 189 ಕೆರೆಗಳನ್ನು ತಲಾ ಒಂದು ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿತ್ತು. ಕೆಲವು ಕಡೆ ಇನ್ನೂ ಕೆಲಸ ನಡೆಯುತ್ತಿದೆ. ಈ ವರ್ಷ ಇನ್ನೂ 189 ಕೆರೆಗಳು ಅಭಿವೃದ್ಧಿಯಾಗಲಿವೆ ಎಂದರು. ಭೂಮಿಗೆ ನೀರನ್ನು ಇಂಗಿಸುವ ಕಾರ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದ್ದು, ಚೆಕ್‍ಡ್ಯಾಂಗಳನ್ನು ನಿರ್ಮ್ಸಿಲಾಗುತ್ತಿದೆ. ಕಳೆದ ವರ್ಷ ಚಿಕ್ಕಬಳ್ಳಾಪುರ, ಕೋಲಾರ, ಬಿಜಾಪುರ, ಕೊಪ್ಪಳ, ಗದಗದಲ್ಲಿ ಚೆಕ್ ಡ್ಯಾಂಗಳ ನಿರ್ಮಾಣಕ್ಕೆ ರು.100 ಕೋಟಿ ವೆಚ್ಚ ಮಾಡಲಾಗಿದೆ. ಈ ವರ್ಷ ರಾಯಚೂರು, ಬಾಗಲಕೋಟೆ, ಚಿತ್ರದುರ್ಗ, ತುಮಕೂರು, ರಾಮನಗರದಲ್ಲಿ ಚೆಕ್‍ಡ್ಯಾಂಗಳನ್ನು ನಿರ್ಮಿಸಲು ರು.100 ಕೋಟಿ ವೆಚ್ಚ ಮಾಡಲಾಗುತ್ತದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com