ಗಮನ ಸೆಳೆದ ಆರೋಗ್ಯ ಜಾಗೃತಿ; ಬಿಪಿ, ಸಕ್ಕರೆ ಕಾಯಿಲೆ ತಪಾಸಣೆ

ಕಬ್ಬನ್ ಉದ್ಯಾನ ಭಾನುವಾರದಂದು ಜಾತ್ರೆಯಂತೆ ಕಂಗೊಳಿಸಲಾರಂಭಿಸಿದೆ...
ಕಬ್ಬನ್ ಪಾರ್ಕ್
ಕಬ್ಬನ್ ಪಾರ್ಕ್

ಬೆಂಗಳೂರು: ಕಬ್ಬನ್ ಉದ್ಯಾನ ಭಾನುವಾರದಂದು ಜಾತ್ರೆಯಂತೆ ಕಂಗೊಳಿಸಲಾರಂಭಿಸಿದೆ. ಎಲ್ಲೆಲ್ಲೂ ಜನವೋ ಜನ. ಬಗೆಬಗೆ ಹಣ್ಣು ಪ್ರದರ್ಶನ, ಮೂಲಿಕೆ ಗಿಡಗಳ ಪರಿಚಯ, ವಾಯುವಿಹಾರಕ್ಕೆಂದೆ ಬಾಡಿಗೆ ಸೈಕಲ್‍ಗಳು, ವೃದಟಛಿರಿಗೆಂದು ಪರಿಸರ ಸ್ನೇಹಿ ವಾಹನಗಳು ಇವೆಲ್ಲಾ ಇಡೀ ಪರಿಸರ ಜಾತ್ರೆ ಕಂಗೊಳಿಸಲು, ಇನ್ನಷ್ಟು ಮೆರಗು ನೀಡಲು ಕಾರಣವಾಗಿದೆ.

ಪ್ರತಿ ವಾರವೂ ವಾಹನ ಸಂಚಾರ ನಿಷೇಧ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳನ್ನು ದಿನಪೂರ್ತಿ ಹಮ್ಮಿಕೊಳ್ಳಲಾಗುತ್ತಿದೆ. ಬೆಳಗ್ಗೆ 6ರಿಂದ ಪ್ರಾರಂಭವಾಗುವ ಕಾರ್ಯಕ್ರಮ ಸಂಜೆ ಸೂರ್ಯ ಮುಳುಗುವವರೆಗೂ ನಡೆಯುತ್ತಿದೆ. ಸಾರ್ವಜನಿಕರಿಗೆ ತಿಳಿಯದ ವಿಚಾರಗಳನ್ನು ತಲುಪಿಸುವ ಸಣ್ಣ ಪ್ರಯತ್ನವನ್ನು ತೋಟಗಾರಿಕೆ ಇಲಾಖೆ ಮಾಡುತ್ತಿದ್ದು, ಅದರ ಜತೆಗೆ ಸಾಂಸ್ಕೃತಿಕ, ಸಾಮಾಜಿಕ ಕಾಳಜಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಪ್ರೇಮಿಗಳು ಓಡಾಟವೇ ಎದ್ದು ಕಾಣುತ್ತಿದ್ದ ಉದ್ಯಾನದಲ್ಲೀಗ ಪುಟ್ಟಪುಟ್ಟ ಮಕ್ಕಳ ಕಲರವ, ಆಟೋಟ, ಕೌಟುಂಬಿಕ ಖುಷಿ ಒಂದು ಕಡೆ ಕಂಡುಬಂದರೆ, ಈ ವಾತಾವರಣ ಕಲ್ಪಿಸಿದ ಇಲಾಖೆ ನೆಮ್ಮದಿಯ ಜೊತೆಗೆ ಹೆಮ್ಮೆಪಟ್ಟುಕೊಳ್ಳುತ್ತಿದೆ. ಮಕ್ಕಳ ಆರೋಗ್ಯ ಕಾಪಾಡಿಕೊಳ್ಳಲು ಅದರಲ್ಲೂ ಮಳೆಗಾಲದಲ್ಲಿ ಹೇಗೆ ರೋಗವನ್ನು ತಡೆಗಟ್ಟಬೇಕು ಎನ್ನುವ ಕುರಿತು ಆರೋಗ್ಯ ಇಲಾಖೆಯಿಂದ ಅತಿಸಾರ ಬೇಧಿ ತೀವ್ರತರ ನಿಯಂತ್ರಣ ಪಾಕ್ಷಿಕ ಮತ್ತು ವಿಶ್ವ ಸ್ತನ್ಯಪಾನ ಸಪ್ತಾಹ ಆಚರಣೆ ಅಂಗವಾಗಿ ಮಾಹಿತಿ ನೀಡುವುದರ ಜತೆಗೆ ಕ್ಲೂಮ್ಯಾಕ್ಸ್ ಮೆಡಾಲ್ ಲ್ಯಾಬ್ ಸಹಭಾಗಿತ್ವದಲ್ಲಿ ಸಕ್ಕರೆ ಪ್ರಮಾಣ, ರಕ್ತದೊತ್ತಡ ಪರಿಶೀಲನಾ ಕಾರ್ಯಕ್ರಮ ಈ ಭಾನುವಾರ ನಡೆಯಿತು, ನೂರಾರು ಮಂದಿ ಈ ವೇಳೆ ಉಪಯೋಗ ಪಡೆದುಕೊಂಡರು.

ಸಹಾಯ ಹೋಲಿಸ್ಟಿಕ್ ಇಂಟಿಗ್ರೇಟಿವ್ ಹಾಸ್ಪಿಟಲ್‍ನಿಂದ ಆಯುರ್ವೇದ, ನ್ಯಾಚುರೋಪತಿ, ಹೋಮಿಯೋಪತಿ ಮತ್ತು ಉಪಯೋಗ ವಿಧಾನಗಳಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಮಾಹಿತಿ ಮತ್ತು ಜಾಗೃತಿ ಕಾರ್ಯಕ್ರಮ ಹಾಗೂ ಆರೋಗ್ಯ ತಪಾಸಣೆ, ಸಲಹೆಗಳು ಮತ್ತು ಗಿಡಮೂಲಿಕೆಗಳ ಸಿದ್ಧ ಔಷಧದ ಬಗ್ಗೆ ಮಾಹಿತಿ ನೀಡಲಾಯಿತು. ಬೆಳಗ್ಗೆ 9ರಿಂದ ತಾರಸಿ ಹಾಗೂ ಕೈತೋಟ ಬಗ್ಗೆ ತೋಟಗಾರಿಕಾ ಉಪನಿರ್ದೇಶಕರಿಂದ ಪ್ರಾತ್ಯಕ್ಷಿಕೆ ಹಾಗೂ ಘನತ್ಯಾಜ್ಯ ನಿರ್ವಹಣೆ ಮತ್ತು ಅಡುಗೆ ಮನೆಯಲ್ಲಿನ ತ್ಯಾಜ್ಯ ಉಪಂಯೋಗಿಸಿ ಗೊಬ್ಬರ ಉತ್ಪತ್ತಿ ಮಾಡುವುದು ಹಾಗೂ ಕಸದಿಂದ ಬಯೋಗ್ಯಾಸ್ ಉತ್ಪಾದನೆ ಕುರಿತು ಪ್ರಾತ್ಯಕ್ಷಿಕೆ ನಡೆಯಿತು. ಆಕ್ರೋ ಯೋಗ ತಂಡದಿಂದ ಹಲವಾರು ಯೋಗ ವಿಧಾನಗಳ ಪ್ರಾತ್ಯಕ್ಷಿಕೆ ನಡೆಯಿತು. ಮಾಜಿ ರಾಷ್ಟ್ರಪತಿ ಎ.ಪಿ.ಜೆ ಅಬ್ದುಲ್ ಕಲಾಂ ಅವರ ನಿಧನ ಹಿನ್ನೆಲೆಯಲ್ಲಿ ಉದಯರಾಗ, ಸಂಧ್ಯಾರಾಗ ಸೇರಿದಂತೆ ಯಾವುದೇ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಂಡಿರಲಿಲ್ಲ. ಅಬ್ದುಲ್ ಕಲಾಂ ಅವರಿಗೆ ಇದೇ ಸಂದರ್ಭದಲ್ಲಿ ಶ್ರದ್ದಾಂಜಲಿ ಸಲ್ಲಿಸಲಾಯಿತು. ಎಂದಿನಂತೆ ಸಾವಯವ ತರಕಾರಿಗಳು, ತಾಜಾ ಹಣ್ಣುಗಳು, ಅಲಂಕಾರಿಕ ಗಿಡಗಳು, ಉದ್ಯಾನ ಸಲಕರಣೆಗಳ ಮಾರಾಟ ಏರ್ಪಡಿಸಲಾಗಿತ್ತು


ಉದ್ಯಾನದ ಹಕ್ಕಿಗಳಿಗೆ ಗೋದಿ ಸುರಿದ ಜನ
ಉದ್ಯಾನದ ಒಳಗೆ ಹಕ್ಕಿಗಳಿಗೆ ಆಹಾರ ನೀಡುವುದನ್ನು ನಿಷಧಿಸಿದ್ದರೂ ಕೂಡ ಅಲ್ಲಲ್ಲಿ ಮೂಟೆಗಟ್ಟಲೆ ಗೋದಿಯನ್ನು ಸುರಿಯುತ್ತಿದ್ದ ದೃಶ್ಯ ಕಂಡುಬಂದವು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತೋಟಗಾರಿಗೆ ಇಲಾಖೆ ಉಪ ನಿರ್ದೇಶಕ ಮಹಂತೇಶ ಮುರುಗೋಡ, ಉದ್ಯಾನದಲ್ಲಿ ಹಕ್ಕಿಗಳಿಗೆ ಆಹಾರ ನೀಡುವುದನ್ನು ನಿಷೇಧಿಸಲಾಗಿದೆ. ಈಗ ಪುನಃ ಎರಡು ವಾರಗಳಿಂದ ಉದ್ಯಾನಕ್ಕೆ ಬರುವವರು ಇದರ ಬಗ್ಗೆ ಅರಿವಿಲ್ಲದೆ ಆಹಾರ ನೀಡುತ್ತಿದ್ದರು. ಕಳೆದ ವಾರವೇ ಕೆಲವರಿಗೆ ಆಹಾರ ಹಾಕುವುದು ಇಲ್ಲಿ ನಿಷಿದ್ಧ ಎಂದು ತಿಳಿಸಲಾಗಿತ್ತು. ಇನ್ನು ಈ ರೀತಿ ನಡೆಯದ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com