ಕಡ್ಡಾಯ ಕನ್ನಡ, ತ್ರಿಭಾಷಾ ಸೂತ್ರಕ್ಕೆ ಪ್ರಾಧಿಕಾರ ಸೂಚನೆ

ಕಚೇರಿಯಲ್ಲಿ ಕನ್ನಡ ಘಟಕ, ಫಲಕಗಳಲ್ಲಿ ತ್ರಿಭಾಷಾ ಸೂತ್ರದ ಅಳವಡಿಕೆ ಸೇರಿದಂತೆ ಕನ್ನಡ ಭಾಷೆಯ ಅನುಷ್ಠಾನ ಸೂಕ್ತವಾಗಿ ನಡೆಯಬೇಕು- ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಎಲ್.ಹನುಮಂತಯ್ಯ
ಬಿಎಸ್ಎನ್ಎಲ್- ಮೆಟ್ರೋ ಕಚೇರಿಗಳಲ್ಲಿ ಕಡ್ಡಾಯ ಕನ್ನಡ, ತ್ರಿಭಾಷಾ ಸೂತ್ರಕ್ಕೆ ಪ್ರಾಧಿಕಾರ ಸೂಚನೆ
ಬಿಎಸ್ಎನ್ಎಲ್- ಮೆಟ್ರೋ ಕಚೇರಿಗಳಲ್ಲಿ ಕಡ್ಡಾಯ ಕನ್ನಡ, ತ್ರಿಭಾಷಾ ಸೂತ್ರಕ್ಕೆ ಪ್ರಾಧಿಕಾರ ಸೂಚನೆ

ಬೆಂಗಳೂರು: ಕಚೇರಿಯಲ್ಲಿ ಕನ್ನಡ ಘಟಕ, ಫಲಕಗಳಲ್ಲಿ ತ್ರಿಭಾಷಾ ಸೂತ್ರದ ಅಳವಡಿಕೆ ಸೇರಿದಂತೆ ಕನ್ನಡ ಭಾಷೆಯ ಅನುಷ್ಠಾನ ಸೂಕ್ತವಾಗಿ ನಡೆಯಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಎಲ್.ಹನುಮಂತಯ್ಯ, ಬಿ.ಎಸ್.ಎನ್.ಎಲ್ ಪ್ರಧಾನ ಕಚೇರಿ ಹಾಗೂ ನಮ್ಮ ಮೆಟ್ರೋ ಮುಖ್ಯಸ್ಥರಿಗೆ ಸೂಚಿಸಿದ್ದಾರೆ.

ಹಲಸೂರಿನ ಬಿಎಸ್ಎನ್ಎಲ್ ಪ್ರಧಾನ ಕಚೇರಿ ಹಾಗೂ ಬಯ್ಯಪ್ಪನಹಳ್ಳಿಯಲ್ಲಿ ಮೆಟ್ರೋ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಎಲ್ ಹನುಮಂತಯ್ಯ, ಕಚೇರಿಯಲ್ಲಿ ಕನ್ನಡ ಅನುಷ್ಠಾನದ ಕುರಿತು ಪರಿಶೀಲನೆ ನಡೆಸಿದರು.ಕಚೇರಿಯ ಕಂಪ್ಯೂಟರ್ ಗಳಲ್ಲಿ ಕನ್ನಡ ಲಿಪಿ ತಂತ್ರಾಂಶ ಇಟ್ಟುಕೊಂಡಿರಬೇಕು. ಕಛೇರಿಗಳು ತಮ್ಮ ಫಲಕಗಳಲ್ಲಿ ತ್ರಿಭಾಷಾ ಸೂತ್ರ ಅನುಸರಿಸಬೇಕಿದ್ದು ಕ್ರಮವಾಗಿ ರಾಜ್ಯ ಭಾಷೆ, ಹಿಂದಿ ಹಾಗೂ ಇಂಗ್ಲೀಷ್ ನಲ್ಲಿ ಬರೆಯಬೇಕು ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಹೀಗಿದ್ದರೂ ಬಿಎಸ್ಎನ್ಎಲ್ ಕಚೇರಿಯ ಫಲಕಗಳಲ್ಲಿ ತ್ರಿಭಾಷಾ ಸೂತ್ರ ಅನುಸರಿಸುತ್ತಿಲ್ಲ. ಕಚೇರಿಯಲ್ಲಿ ಹೊರಡಿಸುವ ಆದೇಶ, ಸುತ್ತೋಲೆ, ಗ್ರಾಹಕರಿಗೆ ನೀಡುವ ರಸೀದಿ, ಅರ್ಜಿ, ವಾರ್ಷಿಕ ವರದಿಗಳಲ್ಲಿ ಕಡ್ಡಾಯವಾಗಿ ಕನ್ನಡವಿರಬೇಕು. ಬಿಎಸ್ಎನ್ ಎಲ್ ಹೊಸ ಸಂಪರ್ಕ ಪಡೆಯುವವರು ಅರ್ಜಿ ತುಂಬಿಸುವಾಗ ಇಂಗ್ಲೀಷ್ ಅಥವಾ ಹಿಂದಿಯಲ್ಲಿ ಬರೆಯಬೇಕಿದೆ. ಕಚೇರಿಯ ಚಟುವಟಿಕೆಗಳ ಎಲ್ಲ ಹಂತದಲ್ಲೂ ಕನ್ನಡ ಅನುಷ್ಠಾನವಾಗಬೇಕು. ಇದಕ್ಕಾಗಿ ಕಚೇರಿಯಲ್ಲಿ ಹಿಂದಿ ಘಟಕ ಸ್ಥಾಪಿಸಿದಂತೆ ಕನ್ನಡ ಘಟಕ ಆರಂಭಿಸಬೇಕು ಎಂದು ಎಲ್ ಹನುಮಂತಯ್ಯ ಸೂಚನೆ ನೀಡಿದ್ದಾರೆ.

ಮೆಟ್ರೋ ಗೆ ಭೇಟಿ. ನಂತರ ಬಯ್ಯಪ್ಪನಹಳ್ಳಿಯಲ್ಲಿ ನಮ್ಮ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ ಅವರೊಂದಿಗೆ ಪ್ರಾಧಿಕಾರದ ಅಧ್ಯಕ್ಷರು ಸಭೆ ನಡೆಸಿದರು. ಮೆಟ್ರೋ ಫಲಕಗಳಲ್ಲಿ ತ್ರಿಭಾಷಾ ಸೂತ್ರ ಅನುಸರಿಸಲಾಗುತ್ತಿದೆ. ಆದರೆ ಸಿಬ್ಬಂದಿಗೆ ಕನ್ನಡ ಕಲಿಕೆ ಕೇಂದ್ರ ಆರಂಭಿಸಬೇಕು. ಹೊರಗುತ್ತಿಗೆ ಆಧಾರದಲ್ಲಿ ಕನ್ನಡಿಗರನ್ನೇ ಆರಿಸಬೇಕು ಎಂದು ಹನುಮಂತಯ್ಯ ಸೂಚಿಸಿದರು. ಮೆಟ್ರೋದಲ್ಲಿ ಶೀಘ್ರವೇ ಕನ್ನಡ ಕಲಿಕೆಗೆ ತರಬೇತಿ ಆರಂಭಿಸಲಾಗುವುದು. ಒಂದು ವಾರದೊಳಗೆ ಕನ್ನಡ ಘಟಕ ಆರಂಭಿಸಿ ಕನ್ನಡ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರದೀಪ್ ಸಿಂಗ್ ಖರೋಲಾ ಭರವಸೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com