ಡಬ್ಬಿಂಗ್ ವಿರೋಧಿಸಿ 26ರಂದು ಚಿತ್ರೋದ್ಯಮ ಬಂದ್

ಪರಭಾಷೆ ಚಿತ್ರಗಳ ಡಬ್ಬಿಂಗ್ ವಿರುದ್ಧ ಚಿತ್ರೋದ್ಯಮ ದಲ್ಲಿ ಆಕ್ರೋಶ ಭುಗಿಲೇಳುತ್ತಿದೆ. ಚಿತ್ರೋದ್ಯಮದ ಧ್ವನಿಗೆ ಈಗ ಕನ್ನಡ...
ಬೆಂಗಳೂರಿನಲ್ಲಿ ಆಯೋಜಿಸಿದ್ದ ಚಿತ್ರೋದ್ಯಮದ ಗಣ್ಯರ ಸಮಾಲೋಚನಾ ಸಭೆ (ಕೃಪೆ :ಕೆಪಿಎನ್ )
ಬೆಂಗಳೂರಿನಲ್ಲಿ ಆಯೋಜಿಸಿದ್ದ ಚಿತ್ರೋದ್ಯಮದ ಗಣ್ಯರ ಸಮಾಲೋಚನಾ ಸಭೆ (ಕೃಪೆ :ಕೆಪಿಎನ್ )
Updated on

ಬೆಂಗಳೂರು: ಪರಭಾಷೆ ಚಿತ್ರಗಳ ಡಬ್ಬಿಂಗ್ ವಿರುದ್ಧ ಚಿತ್ರೋದ್ಯಮ ದಲ್ಲಿ ಆಕ್ರೋಶ ಭುಗಿಲೇಳುತ್ತಿದೆ. ಚಿತ್ರೋದ್ಯಮದ ಧ್ವನಿಗೆ ಈಗ ಕನ್ನಡ ಸಂಘಟನೆಗಳೂ ಸಾಥ್ ನೀಡಿವೆ.
ಡಬ್ಬಿಂಗ್‍ಗೆ ಅವಕಾಶ ನೀಡದಂತೆ ಸರ್ಕಾರವನ್ನು ಒತ್ತಾಯಿಸಿ, ಆ.26ರಂದು ಚಿತ್ರೋದ್ಯಮ ಬಂದ್  ಮಾಡುವ  ಮೂಲಕ ಕನ್ನಡ ಒಕ್ಕೂಟ ನಗರದಲ್ಲಿ ಬೃಹತ್  ರ್ಯಾಲಿ  ನಡೆಸಲು ನಿರ್ಧರಿಸಿದೆ. ಡಬ್ಬಿಂಗ್ ವಿರುದ್ಧ ಸಾಮೂಹಿಕ ಹೋರಾಟ ರೂಪಿಸುವ ಸಂಬಂಧ `ಕನ್ನಡ ಒಕ್ಕೂಟ' ಶನಿವಾರ ಬೆಂಗಳೂರಿನಲ್ಲಿ ಆಯೋಜಿಸಿದ್ದ ಚಿತ್ರೋದ್ಯಮದ
ಗಣ್ಯರೊಂದಿಗೆ ಸಮಾಲೋಚನಾ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಯಿತು. ಆ.26ರಂದು ಬೆಳಗ್ಗೆ 11 ಗಂಟೆಗೆ ನಗರದ ಟೌನ್‍ಹಾಲ್ ಮುಂಭಾಗ
ದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಬೃಹತ್ ಮೆರವಣಿಗೆ ನಡೆಸಿ, ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು. ಸಭೆಯಲ್ಲಿ ಹಾಜರಿದ್ದ ಚಿತ್ರೋದ್ಯಮದ ಕಲಾವಿದರು, ನಿರ್ದೇಶಕರು, ನಿರ್ಮಾಪಕರು ಇದಕ್ಕೆ ಸಮ್ಮತಿಸಿದರು.ಸಮಾಲೋಚನೆ ಸಭೆ ಅಧ್ಯಕ್ಷತೆ ವಹಿಸಿದ್ದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ಹಾಗೂ ಮಾಜಿ ಶಾಸಕ ವಾಟಾಳ್ ನಾಗರಾಜ್, ಸಭೆಯ ನಿರ್ಣಯಗಳನ್ನು ಪ್ರಕಟಿಸಿದರು. ಡಬ್ಬಿಂಗ್ ಬೇಕೆನ್ನುವವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. `ಬಲವಂತವಾಗಿ ಕನ್ನಡಿಗರ ಮೇಲೆ ಡಬ್ಬಿಂಗ್ ಭೂತವನ್ನು ಹೇರುತ್ತಿರುವ ಭಾರತೀಯ ಸ್ಪರ್ಧಾತ್ಮಕ ಆಯೋಗಕ್ಕೆ ಯಾವುದೇ ಅಧಿಕಾರವಿಲ್ಲ. ಅದರ ಸಾಂವಿಧಾನಿಕ ನಿಯಮಗಳಿಗೆ ಸರ್ಕಾರವು ತಿದ್ದುಪಡಿ ತರಬೇಕೆಂದು' ಆಗ್ರಹಿಸಿದರು. `ಡಬ್ಬಿಂಗ್ ಎನ್ನುವುದು ರಾಕ್ಷಸ ಇದ್ದಂತೆ. ಇದು ಭಾಷೆಯ ಜತೆಗೆ ಕನ್ನಡಿಗರ ಬದುಕಿನ ಪ್ರಶ್ನೆಯೂ ಆಗಿದೆ. ಇದನ್ನು ಹಿಮ್ಮೆಟ್ಟಿಸಲು ತಾವು ಪ್ರಾಣ ಕೊಡುವುದಕ್ಕೂ ಸಿದ್ಧ. ಪರಭಾಷೆ
ಚಿತ್ರಗಳ ಪದರ್ಶನಕ್ಕೆ ಅವಕಾಶ ನೀಡುತ್ತಿರುವ ಚಿತ್ರಮಂದಿರಗಳಿಗೆ ಬೆಂಕಿ ಹಚ್ಚಬೇಕಾಗುತ್ತದೆ' ಎಂದು ಎಚ್ಚರಿಸಿದರು. ಜೈಲಿಗೆ ಹೋದರೂ ಪರವಾಗಿಲ್ಲ. ರಾಜ್ಯದಲ್ಲಿ ಡಬ್ಬಿಂಗ್ ಬರುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಭೆಗೆ ಆಗಮಿಸಿದ್ದ ಕಲಾವಿದರು ಘೋಷಿಸಿದರು. ನಟ, ನಿರ್ಮಾಪಕ ರಾಘವೇಂದ್ರ ರಾಜ್‍ಕುಮಾರ್ ಮಾತನಾಡಿ, ಡಬ್ಬಿಂಗ್‍ಗೆ ಅವಕಾಶ ನೀಡಿ, ಮತ್ತೆ
ಹಿಂದಕ್ಕೆ ಹೋಗುವುದು ಸರಿಯಲ್ಲ. ನಮ್ಮ ಬದುಕಿಗೆ ತೊಂದರೆಯಾದರೆ , ಬೇರೆಯವರ ಊಟಕಸಿದುಕೊಂಡರೂ ಪರವಾಗಿಲ್ಲ, ನಮ್ಮನ್ನ ನಾವು ಉಳಿಸಿಕೊಳ್ಳೋಣ ಎಂದರು.
ನಟಿ ಶ್ರುತಿ, `ಡಬ್ಬಿಂಗ್ ವಿಚಾರ ಪ್ರೇಕ್ಷಕರಿಗೆ ಬಿಟ್ಟಿದ್ದು. ಅವರು ಬೇಕೆನ್ನುವುದಾದರೆ ನಾವೇನು ಮಾಡಿದರೂ ಪ್ರಯೋಜನವಾಗದು' ಎಂದು ನೀಡಿದ ಹೇಳಿಕೆಗೆ ಆಕ್ಷೇಪ ವ್ಯಕ್ತವಾದವು. ನಟಿ ಭಾವನಾ ಮಾತನಾಡಿ, `ಡಬ್ಬಿಂಗ್ ವಿಚಾರ ಬೇಕೆ ಅಥವಾ ಬೇಡವೇ ಎನ್ನುವುದನ್ನು ಪ್ರೇಕ್ಷಕರಿಗೆ ಬಿಡುವುದು ಸರಿಯಲ್ಲ' ಎಂದರು. ಹಿರಿಯ ನಟರಾದ ಶಿವರಾಂ, ಶ್ರೀನಿವಾಸ ಮೂರ್ತಿ, ನಿರ್ದೇಶಕರಾದ ಓಂಸಾಯಿ ಪ್ರಕಾಶ್, ಸಾಧು ಕೋಕಿಲ, ಎಂ.ಎಸ್. ರಮೇಶ್, ನಿರ್ಮಾಪಕರಾದ ಸಾ.ರಾ. ಗೋವಿಂದು ಹಾಗೂ ಬಿ.ಸುರೇಶ್, ನಟಿ ಹೇಮ್ ಚೌಧುರಿ, ನಟರಾದ ಪ್ರೇಮ್ ವಿಜಯ್ ರಾಘವೇಂದ್ರ, ಬುಲೆಟ್ ಪ್ರಕಾಶ್, ಸಂಗೀತ ನಿರ್ದೇಶಕ ಗುರುಕಿರಣ್, ಕನ್ನಡ ಸಂಘಟನೆ ಮುಖಂಡರಾದ ಶಿವರಾಮೇಗೌಡ, ಗಿರೀಶ್‍ಗೌಡ ಇತರರು ಇದ್ದರು. ಆದರೆ, ಸ್ಟಾರ್ ನಟ, ನಟಿಯರು, ನಿರ್ದೇಶಕರು, ನಿರ್ಮಾಪಕರು ಅಲ್ಲಿ ಕಾಣಲಿಲ್ಲ.

ಡಬ್ಬಿಂಗ್ ಬೇಕೆನ್ನುವವರು ವ್ಯಾಪಾರಿಗಳು, ಜತೆಗೆ ಅವರು ಕನ್ನಡ ವಿರೋಧಿಗಳು.ಅವರಿಗೆ ಇಲ್ಲಿನ ಭಾಷೆ, ಬದುಕಿನ ಬಗ್ಗೆ ಕಾಳಜಿ ಇಲ್ಲ. ಹಣ ಮಾಡುವ ಸ್ವಾರ್ಥದಿಂದಕೆಲವರು ಡಬ್ಬಿಂಗ್ ಬೇಕು ಎನ್ನುತ್ತಿದ್ದಾರೆ.

 ಶಿವರಾಂ, ಹಿರಿಯ ನಟ


ಡಬ್ಬಿಂಗ್ ಎನ್ನುವುದು ಮುಕ್ತ ಮಾರುಕಟ್ಟೆಯ ಮೂಲಕ ಬಂದ ಗ್ಯಾಟ್‍ನ ಕೊಡುಗೆ. ಗ್ಯಾಟ್‍ನ ನೀತಿಗಳು ಇವತ್ತು, ನಮ್ಮ ರೈತರ ಆತ್ಮಹತ್ಯೆಗೆ ಕಾರಣ ವಾದಂತೆ, ಸಾಂಸ್ಕೃತಿಕ ಉತ್ಪನ್ನಗಳ ಮೇಲೂ
ದಾಳಿ ನಡೆಸುತ್ತಿವೆ. ಹೀಗಾಗಿ ಡಬ್ಬಿಂಗ್ ವಿರೋಧದ ಮೂಲಕವೇ ಗ್ಯಾಟ್ ಒಪ್ಪಂದದಧೋರಣೆಗಳನ್ನು ವಿರೋಧಿಸಬೇಕಿದೆ.
- ಬಿ. ಸುರೇಶ್, ನಿರ್ದೇಶಕ


ಕನ್ನಡಿಗರು ಯಾರಿಗೂ, ಯಾವುದಕ್ಕೂ ಕಮ್ಮಿ ಇಲ್ಲ. ಒಳ್ಳೆಯ ಕಾದಂಬರಿಗಳಿವೆ.ಕಥೆಗಾರರು ಇದ್ದಾರೆ. ಇಷ್ಟೆಲ್ಲವನ್ನು ನಾವು ಸರಿಯಾಗಿ ಬಳಸಿಕೊಂಡರೆ, `ಬಾಹುಬಲಿ'
ಗಿಂತ ದೊಡ್ಡ ಸಿನೆಮಾ ಮಾಡಬಹುದು.
- ಶ್ರೀನಿವಾಸಮೂರ್ತಿ, ಹಿರಿಯ ನಟ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com